ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬರದ ನಾಡಿನಲ್ಲಿ ಅಕ್ಷರ ಜ್ಞಾನದ ಬೆಳಕನ್ನು ಬೆಳಗಿಸಿದ ಮಹಾ ದಾಸೋಹಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳವರ 32 ನೇ ಪುಣ್ಯಸ್ಮರಣೆಯನ್ನು ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರಮೇಶ ಕೆ. ಮಾತನಾಡಿ, "ಶ್ರೀ ಮುರುಘ ರಾಜೇಂದ್ರ ಬೃಹನ್ಮಠದ 19ನೇ ಪೀಠಾಧ್ಯಕ್ಷರಾಗಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಅನ್ನ ಮತ್ತು ಅಕ್ಷರ ದಾಸೋಹದ ಮೂಲಕ ಸಮಾಜದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಕಾಶಿಯಲ್ಲಿ ಸಕಲ ವಿದ್ಯೆಗಳನ್ನು ಕಲಿತ್ತ ಇವರು, ಬಸವಾದಿ ಶರಣರ ವಚನ ಸಾಹಿತ್ಯವನ್ನು ಹೊರಜಗತ್ತಿಗೆ ಹಾಗೂ ಇತರ ಭಾಷೆಗಳಿಗೆ ತಲುಪಿಸಲು ಶ್ರಮಿಸಿದರು. ವಚನಗಳನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಲು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಅಂದಿನ ಕಾಲದಲ್ಲೇ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದು ಅವರ ಸಾಹಿತ್ಯ ಪ್ರೇಮಕ್ಕೆ ಸಾಕ್ಷಿ" ಎಂದು ಬಣ್ಣಿಸಿದರು.
ಅಲ್ಲದೆ, "ಯಾವುದೇ ಸೌಲಭ್ಯಗಳಿಲ್ಲದ, ಅಜ್ಞಾನ ಆವರಿಸಿದ್ದ ಬರದ ನಾಡಿನಲ್ಲಿ ಶ್ರೀಗಳು ಬಿತ್ತಿದ ಅಕ್ಷರ ಜ್ಞಾನದ ಬೀಜವು ಇಂದು 'ಎಸ್.ಜೆ.ಎಂ. ವಿದ್ಯಾಪೀಠ'ವಾಗಿ ಹೆಮ್ಮರವಾಗಿ ಬೆಳೆದಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದೆ" ಎಂದು ಸ್ಮರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ ಮಾತನಾಡಿ, "ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸ್ಥಾಪಿಸಿದ ಪ್ರಾಥಮಿಕ, ಪ್ರೌಢಶಾಲೆಗಳು, ಕಾಲೇಜುಗಳು ಮತ್ತು ವಿದ್ಯಾರ್ಥಿ ನಿಲಯಗಳು ಇಂದು ನಾಡಿನಾದ್ಯಂತ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿವೆ. ಅವರ ಕೊಡುಗೆ ಹಾಗೂ ಸಮಾಜಸೇವೆ ಸರ್ವರಿಗೂ ಮಾರ್ಗದರ್ಶಿಯಾಗಿದೆ" ಎಂದರು.
ಈ ಭಾವಪೂರ್ಣ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಎಂ.ಎಸ್. ಪರಮೇಶ್ವರಪ್ಪ, ಬೋಧಕ ಸಿಬ್ಬಂದಿಗಳಾದ ಜಿ.ಎಸ್. ನಾಗರಾಜ, ಡಾ. ಗೋವಿಂದಪ್ಪ ಎನ್.ಎಲ್., ಕುಮಾರ್ ಜಿ, ಡಾ. ರವಿ ಮಟ್ಟಿಹಾಳ, ಗಿರೀಶ್ ಟಿ., ನಿರ್ಮಲ್ ಜೆ. ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.



