ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ: ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಬರುತ್ತಿದ್ದ ಇನೋವಾ ಕಾರೊಂದು ಅಪಘಾತಕ್ಕೀಡಾಗಿ, ನಗರದ ಪ್ರಮುಖ ಉದ್ಯಮಿ, ಮಾರುತಿ ಗ್ಯಾಸ್ ಏಜೆನ್ಸಿ ಮಾಲೀಕರಾದ ಪ್ರಭು ಅವರ ಪುತ್ರ ಹಾಗೂ ಸೊಸೆ ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಹೊಳಲ್ಕೆರೆ ಸಮೀಪದ ಕಣಿವೆ ಬಳಿ ಸಂಭವಿಸಿದೆ.
ಮಾರುತಿ ಗ್ಯಾಸ್ ಪ್ರಭು ಅವರ ಪುತ್ರ ಲೋಹಿತ್ ಪ್ರಸಾದ್ (35) ಹಾಗೂ ಸೊಸೆ ನಿತ್ಯ (30) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಅಪಘಾತ ನಡೆದಿದ್ದು ಹೇಗೆ? ಲೋಹಿತ್ ಪ್ರಸಾದ್ ಹಾಗೂ ನಿತ್ಯ ಅವರು ಶಿವಮೊಗ್ಗ ಕಡೆಯಿಂದ ಚಿತ್ರದುರ್ಗಕ್ಕೆ ಇನೋವಾ ಕಾರಿನಲ್ಲಿ ಬರುತ್ತಿದ್ದಾಗ, ಹೊಳಲ್ಕೆರೆ ಸಮೀಪದ ಕಣಿವೆ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಖಡ್ಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಪಕ್ಕದ ರಸ್ತೆಗೆ ಉರುಳಿ ಬಿದ್ದಿದೆ. ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಮತ್ತೊಂದು ಲಾರಿ ಉರುಳಿ ಬಿದ್ದಿದ್ದ ಕಾರಿನ ಮೇಲೆ ಧಾವಿಸಿ ಬಂದಿದ್ದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ದಂಪತಿಗಳಿಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇಂದು ಸಂಜೆ ಅಂತ್ಯಸಂಸ್ಕಾರ:. ಮೃತರ ಪಾರ್ಥಿವ ಶರೀರವನ್ನು ಚಿತ್ರದುರ್ಗ ನಗರದಲ್ಲಿರುವ ಪ್ರಭು ಅವರ ನಿವಾಸಕ್ಕೆ ತರಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಹಿತೈಷಿಗಳ ಅಂತಿಮ ದರ್ಶನಕ್ಕೆ ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿದೆ.
ಬಳಿಕ ಮೃತರ ಸ್ವಗ್ರಾಮವಾದ ಚಳ್ಳಕೆರೆ ತಾಲೂಕಿನ ಸೂರನಹಳ್ಳಿಯ ಅವರ ತೋಟದಲ್ಲಿ ಇಂದು (ಸೋಮವಾರ) ಸಂಜೆ 4:00 ಗಂಟೆಗೆ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಭೀಕರ ಅಪಘಾತದಿಂದಾಗಿ ಚಿತ್ರದುರ್ಗದ ಪ್ರಭು ಅವರ ಕುಟುಂಬಸ್ಥರು ಹಾಗೂ ನಗರದ ವರ್ತಕ ವಲಯದಲ್ಲಿ ತೀವ್ರ ಶೋಕ ಕವಿದಿದೆ.



