ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ಆಧುನಿಕ ಜಾಲತಾಣದಿಂದ ಹೊರಬಂದು ಅಧ್ಯಯನಶೀಲತೆಯನ್ನು ಹೆಚ್ಚಿಸಿಕೊಂಡು ನಮ್ಮನ್ನು ನಾವು ಅರಿತುಕೊಳ್ಳಲು, ಗೌರವಿಸಿಕೊಳ್ಳಲು ನಮಗೂ ಒಂದು ಸ್ವಾಭಿಮಾನದ ಘನತೆ ಗೌರವದ ಬದುಕು ಇದೆ ಎಂದು ಎಚ್ಚೆತ್ತುಕೊಳ್ಳಲು 'ಅಂಬೇಡ್ಕರ್ ಓದು' ಕಾರ್ಯಕ್ರಮ ಸಹಕಾರಿ ಯಾಗಲಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾದ ಡಾ. ಜೆ. ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಿರಿಯೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ಅಧ್ಯಯನ ಮಾಡಿ ದೇಶಕ್ಕೆ ಸಂವಿಧಾನವನ್ನು ನೀಡಿದರು. ಇಂದು ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಅಸಂಖ್ಯಾತ ಜನರಿಗೆ ಮಾದರಿಯಾಗಿದೆ ಯುವಜನತೆ ಮತ್ತು ವಿದ್ಯಾರ್ಥಿಗಳನ್ನು ಅಧ್ಯಯನದ ಕಡೆ ಪ್ರೇರೇಪಿಸಲು ಅಂಬೇಡ್ಕರ್ ಓದು ಕಾರ್ಯಕ್ರಮ ಅರ್ಥಪೂರ್ಣವಾಗಿದೆ.
ಸಂವಿಧಾನ ಬಿಟ್ಟರೆ ಭಾರತದಲ್ಲಿ ಸಮಾನತೆ ಸೌಹಾರ್ದತೆ ಸಾರುವ ಸ್ವಾತಂತ್ರ್ಯದ ನೆಲೆಗಟ್ಟಿನ ಧರ್ಮಗ್ರಂಥ ಬೇರೊಂದಿಲ್ಲ. ಸಹಬಾಳ್ವೆ, ಮಾನವ ಪ್ರೀತಿ, ಸಹೋದರತ್ವ ಮಾನವೀಯ ನೆಲೆಯಲ್ಲಿ ಸಂವಿಧಾನವನ್ನು ಗೌರವಿಸುವುದೇ ನಿಜವಾದ ದೇಶ ಪ್ರೇಮ.
ಸಮಾನತೆ ಸ್ವಾತಂತ್ರ್ಯ ಮೂಲಭೂತ ಹಕ್ಕುಗಳು, ಮತ್ತು ಕರ್ತವ್ಯಗಳನ್ನು ಕೊಟ್ಟಿರುವ ಸಂವಿಧಾನವನ್ನು ನಾವೆಲ್ಲ ಏಕ ಚಿತ್ತದಿಂದ ರಕ್ಷಿಸಬೇಕಿದೆ.ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಬಿ.ಎಂ. ಗುರುನಾಥ್ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯದಲ್ಲಿ ಪದವಿ, ಪದವಿ ಪೂರ್ವ, ಬಿಇಡಿ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಜೀವನ ಬದುಕು ಬರಹ ಪರಿಚಯಿಸುವ ನಿಟ್ಟಿನಲ್ಲಿ ವಿಶೇಷ ಉಪನ್ಯಾಸ, ಪ್ರಬಂಧ, ರಸಪ್ರಶ್ನೆ, ಕವನ ವಾಚನ, ಆಶುಭಾಷಣ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡುತ್ತಾ ಬಂದಿದೆ, ಈ ನಿಟ್ಟಿನಲ್ಲಿ ಅಂಬೇಡ್ಕರ್ ಓದು ಅನನ್ಯವಾಗಿದೆ ಎಂದು ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಕಲಾ ಕಾಲೇಜಿನ ಉಪನ್ಯಾಸಕರಾದ ಡಾ.ನಂದಿನಿ ಮಾತನಾಡಿ ದೇಶದಲ್ಲಿ ವಾಸಿಸುವ ಎಲ್ಲಾ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿ ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟ ಕೀರ್ತಿ ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. 1952 ರಲ್ಲಿ ಮಹಿಳಾ ಮೀಸಲಾತಿಗಾಗಿ ಹಿಂದೂ ಕೋಡ್ ಬಿಲ್ಲನ್ನು ರಚಿಸಿ ಲೋಕಸಭೆಯಲ್ಲಿ ಮಂಡಿಸಿ ಅದು ವಿಫಲವಾದಾಗ ತನ್ನ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದ ದೇಶದ ಏಕೈಕ ರಾಜಕಾರಣಿ ಅಂಬೇಡ್ಕರ್ ರವರಾಗಿದ್ದಾರೆ,
ಸ್ವಾತಂತ್ರ್ಯ ಪೂರ್ವದ 1926ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಸರ್ಕಾರದಲ್ಲಿ ಕಾರ್ಮಿಕ ಮಂತ್ರಿಯಾಗಿ ದೇಶದ ಎಲ್ಲಾ ಮಹಿಳೆಯರಿಗೂ ಸಮಾನ ವೇತನ ಮತ್ತು ವೇತನ ಸಹಿತ ರಜೆಯನ್ನು ಘೋಷಿಸಿದಂತಹ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಉಪನ್ಯಾಸಕ್ಕೆ ಪ್ರತಿಕ್ರಿಯೆ ನೀಡಿದ ಕವಿ ಆರ್. ಶಿವಶಂಕರ ಸೀಗೆಹಟ್ಟಿ ಮಾತನಾಡಿ ಇವತ್ತಿನ ಸಂಘರ್ಷಗಳಿಗೆ ದೇಶದ ಬಿಕ್ಕಟ್ಟುಗಳಿಗೆ, ಸವಾಲುಗಳಿಗೆ ಸಂವಿಧಾನದಲ್ಲಿ ಪರಿಹಾರವಿದೆ. ಹಾಗಾಗಿ ಅಂಬೇಡ್ಕರರ ಓದು ಮಾರ್ಗದರ್ಶಿಯಾಗಲಿದೆ ಇಂತಹ ವಿಶ್ವಮಾನ್ಯರ ಬದುಕು ಮತ್ತು ಬರಹಗಳನ್ನು ತಿಳಿಯುವುದರ ಮೂಲಕ ಸಂವಿಧಾನವನ್ನು ಅರ್ಥೈಸಿಕೊಂಡು ನಡೆ ನುಡಿಯಲ್ಲಿ ಅವರ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಟಿ. ತಿಪ್ಪೇಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಎಸ್. ಜಿ. ರಂಗಸ್ವಾಮಿ ಸಕ್ಕರ. ಸಂಸ್ಕೃತಿ ಚಿಂತಕ ಡಾ.ಎಸ್. ಮಾರುತಿ. ಸಂಗೀತ ವಿದ್ವಾನ್ ಆರ್ ತಿಪ್ಪೇಸ್ವಾಮಿ. ಸಂಗೀತ ಕಲಾವಿದೆ ಎಂ ತ್ರಿವೇಣಿ ಉಪನ್ಯಾಸಕರಾದ ಜೆ. ಲೋಕೇಶ್. ಎಂ. ಕೆ. ಲಕ್ಷ್ಮಿ. ಇ.ಎಸ್.ಎಮ್. ರಶ್ಮಿ. ಹಾಗು ಇತರರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪಿ ಪ್ರೇಮ ಎಂ ಕಾವೇರಿ ಎಸ್ ಲಿಖಿತ ಕವನ ವಾಚನ ಸ್ಪರ್ಧೆಯಲ್ಲಿ ಪೂಜಾ ಸಂಜನಾ ಶ್ವೇತ ಆಶುಭಾಷಣ ಸ್ಪರ್ಧೆಯಲ್ಲಿ ಜೆ. ಆಫ್ರಿನ್. ವನಜಾಕ್ಷಿ ಸ್ವಾತಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಪೂರ್ಣಿಮಾ. ಪಿ.ಎಸ್. ಶಿಲ್ಪ. ಎಂ ಸ್ಪೂರ್ತಿ. ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಬಹುಮಾನಗಳನ್ನ ಪಡೆದರು.




