ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನೆಗೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಮತ್ತು ಪೆನ್ ಡ್ರೈವ್ ಪತ್ತೆಯಾಗಿರುವುದು ತೀವ್ರ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಜೈಲಿಗೆ ದಿಢೀರ್ ಭೇಟಿ ನೀಡಿದ ಡಿಜಿಪಿ (ಕಾರಾಗೃಹ) ಅಲೋಕ್ ಕುಮಾರ್ ಅವರು, ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನಲ್ಲೇ 'ಸ್ಪೆಷಲ್ ಕ್ಲಾಸ್' ತೆಗೆದುಕೊಂಡು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರ ಅಪರಾಧ ವಿಭಾಗದ ಪೊಲೀಸ್ ತಂಡವು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮೇಲೆ ಹಠಾತ್ ದಾಳಿ ನಡೆಸಿದ ವೇಳೆ, ಪ್ರಜ್ವಲ್ ರೇವಣ್ಣ ಹಾಗೂ ಮತ್ತೊಬ್ಬ ವಿಚಾರಣಾಧೀನ ಕೈದಿಯ ಬಳಿ ಮೊಬೈಲ್ ಫೋನ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದನ ವಿರುದ್ಧ ಈಗಾಗಲೇ ಹೊಸ ಕೇಸ್ ದಾಖಲಾಗಿದೆ.
ಡಿಜಿಪಿ ಭೇಟಿ ಮತ್ತು ಸುದೀರ್ಘ ಗರಂ:
ಘಟನೆಯ ಬೆನ್ನಲ್ಲೇ ಜೈಲಿಗೆ ಆಗಮಿಸಿದ ಡಿಜಿಪಿ ಅಲೋಕ್ ಕುಮಾರ್, ಹಲವು ಬ್ಯಾರಕ್‌ಗಳನ್ನು ಪರಿಶೀಲಿಸಿದರು. ಈ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಸುಮಾರು 10 ರಿಂದ 12 ನಿಮಿಷಗಳ ಕಾಲ ಇದ್ದು, ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇಲಾಖೆಯ ಹೆಸರು ಹಾಳು: "ನಿನ್ನಿಂದಲೇ ಇಡೀ ಇಲಾಖೆಯ ಮರ್ಯಾದೆ ಹಾಳಾಗಿದೆ. ನನ್ನ ಇಡೀ ಕೆರಿಯರ್‌ನಲ್ಲಿ ಇಷ್ಟೊಂದು ಬೇಸರ ಎಂದೂ ಆಗಿರಲಿಲ್ಲ. ನಿಮ್ಮ ನಡವಳಿಕೆಯಿಂದ ನಾನು ತಲೆ ತಗ್ಗಿಸುವಂತಾಗಿದೆ," ಎಂದು ಅಲೋಕ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಭೀರ ಎಚ್ಚರಿಕೆ: "ಇನ್ಮುಂದೆಯಾದರೂ ನೆಟ್ಟಗಿದ್ದು ಜೈಲು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಮಗೆ ಜೈಲಿನೊಳಗೆ ಮೊಬೈಲ್ ತಂದುಕೊಟ್ಟವರು ಯಾರು ಎನ್ನುವುದನ್ನು ಸ್ಪಷ್ಟವಾಗಿ ಹೇಳಿ. ಇಲ್ಲದಿದ್ದರೆ ಕಾನೂನುಬದ್ಧವಾಗಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ," ಎಂದು ಎಚ್ಚರಿಸಿದ್ದಾರೆ.
ಪ್ರಜ್ವಲ್ ವಾದ: ಈ ವೇಳೆ ಪ್ರಜ್ವಲ್ ರೇವಣ್ಣ "ಇಲ್ಲ ಸಾರ್, ನಾನೇನು ಮಾಡಿಲ್ಲ," ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದಾಗ, "ನನಗೆ ಎಲ್ಲವೂ ಗೊತ್ತಿದೆ, ನಿಮ್ಮ ಡ್ರಾಮಾ ಸಾಕು ಮಾಡಿ. ಇನ್ನೊಮ್ಮೆ ಇಂತಹ ಘಟನೆ ಮರುಕಳಿಸಿದರೆ ನಾನು ಸುಮ್ಮನಿರುವುದಿಲ್ಲ," ಎಂದು ಡಿಜಿಪಿ ವಾರ್ನಿಂಗ್ ನೀಡಿದ್ದಾರೆ.
ಜೈಲಿನಲ್ಲಿ ಕೈದಿಗಳಿಗೆ ಅಕ್ರಮವಾಗಿ ಸೌಲಭ್ಯ ಒದಗಿಸುವ ವ್ಯವಸ್ಥೆಯ ವಿರುದ್ಧ ಅಧಿಕಾರಿಗಳು ಇದೀಗ ಕಟ್ಟುನಿಟ್ಟಿನ ತನಿಖೆ ಆರಂಭಿಸಿದ್ದಾರೆ.



