ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ:
ಕರ್ತವ್ಯಲೋಪ ಹಾಗೂ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ (ಡಿಎಸ್) ಡಾ. ಎಸ್.ಪಿ. ರವೀಂದ್ರ ಅವರನ್ನು ರಾಜ್ಯ ಸರ್ಕಾರವು ಸೇವೆಯಿಂದ ಅಮಾನತುಗೊಳಿಸಿ ಬುಧವಾರ ಆದೇಶ ಹೊರಡಿಸಿದೆ.
ಅಮಾನತಿಗೆ ಪ್ರಮುಖ ಕಾರಣಗಳು:
ಶುಚಿತ್ವದ ಕೊರತೆ: ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಸೂಕ್ತ ಶುಚಿತ್ವ ಕಾಪಾಡಿಕೊಳ್ಳದಿರುವುದು.
ಅವ್ಯವಸ್ಥೆ: ರೋಗಿಗಳು ಮತ್ತು ಸಂದರ್ಶಕರಿಂದ ಆಸ್ಪತ್ರೆಯಲ್ಲಿ ದಟ್ಟಣೆಯ ವಾತಾವರಣ ನಿರ್ಮಾಣವಾಗಲು ಬಿಟ್ಟಿರುವುದು ಹಾಗೂ ಆಡಳಿತಾತ್ಮಕ ಅವ್ಯವಹಾರಗಳು.
ಸಾಮೂಹಿಕ ರಜೆ ಮಂಜೂರಾತಿ: ಕಳೆದ ಸೆಪ್ಟೆಂಬರ್ 6 ರಂದು ಆಸ್ಪತ್ರೆಯ ಸಿಬ್ಬಂದಿಗೆ ನಿಯಮಬಾಹಿರವಾಗಿ ಸಾಮೂಹಿಕ ರಜೆ ಮಂಜೂರು ಮಾಡಿರುವುದು.
ಸೇವೆಯಲ್ಲಿ ವಿಫಲತೆ: ರೋಗಿಗಳಿಗೆ ಸಕಾಲದಲ್ಲಿ ಆರೋಗ್ಯ ಸೇವೆ ಒದಗಿಸದಿರುವುದು ಹಾಗೂ ಕ್ಲಿನಿಕಲ್ ಮತ್ತು ನಾನ್-ಕ್ಲಿನಿಕಲ್ ದೈನಂದಿನ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸದೇ ಇರುವುದು.
ಅನುದಾನ ದುರ್ಬಳಕೆ: ಆಸ್ಪತ್ರೆಗೆ ಬಂದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿರುವುದು.
ಅಕ್ರಮ ಔಷಧ ಖರೀದಿ: ಜಿಲ್ಲಾಸ್ಪತ್ರೆಗೆ ಸಂಬಂಧಿಸಿದ ಔಷಧಿಗಳನ್ನು ನೇರವಾಗಿ ಖರೀದಿ ಮಾಡಿ ಅಕ್ರಮ ಎಸಗಿರುವುದು.
ಆದೇಶ ಉಲ್ಲಂಘನೆ: ಮೇಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಪತ್ರಿಕಾಗೋಷ್ಠಿ ನಡೆಸಿರುವುದು.
ಕಳೆದ ಸೆಪ್ಟೆಂಬರ್ 8 ರಂದು ನಡೆದಿದ್ದ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಡಾ. ರವೀಂದ್ರ ಅವರ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಮತ್ತು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಬೇಕೆಂಬ ಶಿಫಾರಸನ್ನು ಪರಿಗಣಿಸಿದ ರಾಜ್ಯ ಸರ್ಕಾರವು, ಪ್ರಸ್ತುತ ಈ ಶಿಸ್ತು ಕ್ರಮ ಜರುಗಿಸಿದೆ.



