ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪತ್ನಿಗೆ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ, ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ ಗಂಭೀರ ಆರೋಪದಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆ.ಎಸ್. ಬೈರಪ್ಪ ಎಂಬುವವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆ ರೇವತಿ (ಪತ್ನಿ) ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಘಟನೆ ನಡೆದ ಸ್ಥಳದ ವ್ಯಾಪ್ತಿಯನ್ನು ಆಧರಿಸಿ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ತಾವರೆಕೆರೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪರಸ್ತ್ರೀ ವ್ಯಾಮೋಹ, 50 ಲಕ್ಷ ರೂ.ಗೆ ಬೇಡಿಕೆ:
ಬಂಧಿತ ಆರೋಪಿ ಬೈರಪ್ಪ ಸದ್ಯ ನಗರ ಪೊಲೀಸ್ ಆಯುಕ್ತರ ಕಚೇರಿಯ ಕಂಟ್ರೋಲ್ ರೂಮ್ ವಿಭಾಗದಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಲಂಚದ ಪ್ರಕರಣವೊಂದರಲ್ಲಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದು ಅಮಾನತುಗೊಂಡಿದ್ದ ಇತಿಹಾಸವೂ ಈತನಿಗೆ ಇದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚನಾಪುರ ನಿವಾಸಿಯಾದ ಬೈರಪ್ಪಗೆ 5 ವರ್ಷಗಳ ಹಿಂದೆ ರೇವತಿ ಅವರೊಂದಿಗೆ ವಿವಾಹವಾಗಿದ್ದು, 3 ವರ್ಷದ ಹೆಣ್ಣು ಮಗುವಿದೆ.
ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ಮಧ್ಯೆ ಇತ್ತೀಚೆಗೆ ಬೈರಪ್ಪನ ಪರಸ್ತ್ರೀ ಸಂಬಂಧದ ವಿಚಾರವಾಗಿ ಜಗಳ ಶುರುವಾಗಿತ್ತು. ಇದೇ ವಿಚಾರವಾಗಿ ಜುಲೈ 12ರಂದು ಮನೆಯಲ್ಲಿ ದೊಡ್ಡ ಗಲಾಟೆಯಾಗಿದೆ. "ನಾನು ಪಿಎಸ್ಐ ಆಗಿದ್ದರೂ ಮದುವೆ ವೇಳೆ ಸರಿಯಾಗಿ ವರದಕ್ಷಿಣೆ ಕೊಟ್ಟಿಲ್ಲ. ತವರು ಮನೆಯಿಂದ 50 ಲಕ್ಷ ರೂ. ತರಬೇಕು" ಎಂದು ಒತ್ತಾಯಿಸಿ ಬೈರಪ್ಪ ಹಾಗೂ ಆತನ ಮನೆಯವರು ರೇವತಿ ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಲು ಬಂದ ರೇವತಿ ಅವರ ತಂದೆಗೂ ಮಚ್ಚಿನಿಂದ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
ಪೊಲೀಸರ ನಿರ್ಲಕ್ಷ್ಯ, ಮಾಧ್ಯಮಗಳ ಹಸ್ತಕ್ಷೇಪದ ಬಳಿಕ ಬಂಧನ:
ಪತಿಯ ದೌರ್ಜನ್ಯದ ವಿರುದ್ಧ ರೇವತಿ ಅವರು ಕೆಂಗೇರಿ ಪೊಲೀಸ್ ಠಾಣೆಗೆ ಧಾವಿಸಿದ್ದರೂ, ಪೊಲೀಸರು ಕೇವಲ ಎನ್ಸಿಆರ್ (ಗಂಭೀರ ಸ್ವರೂಪವಲ್ಲದ ಅಪರಾಧ) ದಾಖಲಿಸಿಕೊಂಡು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ರೇವತಿ, ನ್ಯಾಯಕ್ಕಾಗಿ ನೇರವಾಗಿ ಡಿಜಿಪಿ ಕಚೇರಿಯ ಮೆಟ್ಟಿಲೇರಿದ್ದರು.
"ಪತಿ ಪರಸ್ತ್ರೀ ಜೊತೆ ಸಂಬಂಧ ಇರಿಸಿಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ವಿಚ್ಛೇದನ ನೀಡುವಂತೆ ಪೀಡಿಸುತ್ತಿದ್ದಾರೆ. ತಮ್ಮ ಅಧಿಕಾರ ಪ್ರಭಾವ ಬಳಸಿ ನಮ್ಮನ್ನು ಹೆದರಿಸಲು ರೌಡಿಗಳನ್ನು ಮನೆ ಬಳಿ ಕರೆಯಿಸಿಕೊಂಡಿದ್ದಾರೆ. ದೂರು ನೀಡಿದರೂ ಕ್ರಮ ಕೈಗೊಳ್ಳದ ಕೆಂಗೇರಿ ಪೊಲೀಸರ ವಿರುದ್ಧವೂ ಕ್ರಮ ಜರುಗಿಸಬೇಕು," ಎಂದು ರೇವತಿ ಆಗ್ರಹಿಸಿದ್ದರು.
ಈ ರೇಡಿಯೋ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಕೆಂಗೇರಿ ಪೊಲೀಸರು ತಕ್ಷಣವೇ ಆರೋಪಿ ಪಿಎಸ್ಐ ಬೈರಪ್ಪನನ್ನು ಬಂಧಿಸಿದ್ದಾರೆ.
ಡಿಸಿಪಿ ಸ್ಪಷ್ಟನೆ:
ಈ ಕುರಿತು ಮಾಹಿತಿ ನೀಡಿರುವ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್, "ಜುಲೈ 12ರಂದು ದೂರು ಬಂದಾಗ ಪ್ರಾಥಮಿಕವಾಗಿ ಎನ್ಸಿಆರ್ ದಾಖಲಿಸಿ ವಿಚಾರಣೆ ನಡೆಸಲಾಗಿತ್ತು. ತನಿಖೆಯ ವೇಳೆ ಕೃತ್ಯ ನಡೆದಿರುವುದು ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂಬುದು ಬೆಳಕಿಗೆ ಬಂದಿದೆ. ಆದಾಗ್ಯೂ ಜೀರೋ ಎಫ್ಐಆರ್ ಮಾದರಿಯಲ್ಲಿ ದೂರು ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕ್ಕಾಗಿ ತಾವರೆಕೆರೆ ಪೊಲೀಸರಿಗೆ ಒಪ್ಪಿಸಲಾಗಿದೆ," ಎಂದು ಸ್ಪಷ್ಟಪಡಿಸಿದ್ದಾರೆ.



