ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
"ಕಲ್ಲು ಒಡೆಯುವ, ಮಣ್ಣು ಕತ್ತರಿಸುವ ಕಠಿಣ ಕಾಯಕದ ಮೂಲಕ ಸರ್ಕಾರಗಳ ಕಣ್ಣಿಗೆ ಬೀಳದೆ ಶೋಷಣೆಗೆ ಒಳಗಾಗಿದ್ದ ಭೋವಿ ಸಮಾಜವನ್ನು ಜಾಗೃತಗೊಳಿಸಿ, ಇಂದು ರಾಜ್ಯ ಮಟ್ಟದಲ್ಲಿ ಧ್ವನಿ ಎತ್ತುವಂತೆ ಮಾಡಿದ್ದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು. ಅವರ ಪಟ್ಟಾಭಿಷೇಕ ಮಹೋತ್ಸವ ಕೇವಲ ಉತ್ಸವವಲ್ಲ; ಅದು ನಮ್ಮ ಸಮುದಾಯದ ಪ್ರಗತಿಯ ಹಬ್ಬ," ಎಂದು ಜಿಲ್ಲಾ ಭೋವಿ ಸಂಘದ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ತಿಳಿಸಿದರು.
ನಗರದ ಭೋವಿ ಗುರುಪೀಠದ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 'ರಾಷ್ಟ್ರೀಯ ಭೋವಿ ಜನೋತ್ಸವ'ದ ಬೃಹತ್ ವೇದಿಕೆ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜುಲೈ 19ಕ್ಕೆ ಬೃಹತ್ ಜನಸ್ತೋಮ:
ಇದೇ ಜುಲೈ 19ರಂದು ನಡೆಯಲಿರುವ ರಾಷ್ಟ್ರೀಯ ಭೋವಿ ಜನೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ. ಭೋವಿ ಸಮುದಾಯವು ರಾಜ್ಯದ ಅಭಿವೃದ್ಧಿಯಲ್ಲಿ ಎಷ್ಟರಮಟ್ಟಿಗೆ ಶ್ರಮಿಸುತ್ತಿದೆ ಮತ್ತು ನಮ್ಮ ಒಗ್ಗಟ್ಟಿನ ಶಕ್ತಿ ಏನು ಎಂಬುದನ್ನು ಆಡಳಿತಾರೂಢ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ಬೃಹತ್ ಸಮಾವೇಶ ಸಾಕ್ಷಿಯಾಗಲಿದೆ ಎಂದರು.
ಶ್ರೀಗಳ ಸಾರಥ್ಯದಲ್ಲಿ ಸಮಾಜದ ಮುನ್ನೆಲೆ:
ರಾಜ್ಯದಲ್ಲಿ ತಳಮಟ್ಟದ, ಶೋಷಿತ ಸಮುದಾಯವಾಗಿದ್ದ ಭೋವಿ ಸಮಾಜವು ಕಠಿಣ ಕಾಯಕದಲ್ಲೇ ತೊಡಗಿ ಅನಾಥವಾಗಿತ್ತು. ಆದರೆ ಶ್ರೀಗಳ ಮಾರ್ಗದರ್ಶನ ಮತ್ತು ನಿರಂತರ ಸಂಘಟನಾ ಶಕ್ತಿಯಿಂದಾಗಿ ಇಂದು ಸಮಾಜವು ರಾಜಕೀಯ ಹಾಗೂ ಸಾಮಾಜಿಕ ಮುನ್ನೆಲೆಗೆ ಬರುತ್ತಿದೆ. ಸ್ವಾಮೀಜಿಯವರ ಸಾರಥ್ಯದಲ್ಲಿ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಸರ್ಕಾರದ ವಿವಿಧ ಅನುದಾನಗಳು ಹಾಗೂ ಸವಲತ್ತುಗಳನ್ನು ಶೋಷಿತ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕೊಂಡಿಯಾಗಿದೆ. ಈ ಮೂಲಕ ಭೋವಿ ಸಮಾಜದ ಆರ್ಥಿಕ ಹಾಗೂ ಶೈಕ್ಷಣಿಕ ಸಬಲೀಕರಣಕ್ಕೆ ಶ್ರೀಗಳು ಮುನ್ನುಡಿ ಬರೆದಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ವಹಿಸಲಿದ್ದು, ಮಾಜಿ ಸಚಿವ ಶಿವರಾಜ ತಂಗಡಗಿ ನೇತೃತ್ವ ವಹಿಸಲಿದ್ದಾರೆ. ಶಾಸಕ ಎಂ. ಚಂದ್ರಪ್ಪ ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ. ಭೋವಿ ನಿಗಮದ ಅಧ್ಯಕ್ಷರು ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ಎಂ. ರಾಮಪ್ಪ ಸ್ವಾಗತಿಸಲಿದ್ದು, ಪಾವಗಡ ಶಾಸಕ ವಿ. ವೆಂಕಟೇಶ್ ಹಾಗೂ ಪುಲಕೇಶಿನಗರ ಶಾಸಕ ಎ.ಸಿ. ಶ್ರೀನಿವಾಸ್ ಘನ ಉಪಸ್ಥಿತಿ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಇ. ಮಂಜುನಾಥ್, ಖಜಾಂಚಿ ಹನುಮಂತಪ್ಪ ಗೋಡೆಮನೆ, ಉಪಾಧ್ಯಕ್ಷ ಎಚ್. ಲಕ್ಷ್ಮಣ್, ನಿರ್ದೇಶಕರಾದ ನಿರಂಜನ್, ವೆಂಕಟೇಶ್, ಆಂಜಿನಪ್ಪ, ಅಣ್ಣೇಶ್, ಆಂಜನೇಯ ಎಚ್. ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.



