ಚಂದ್ರವಳ್ಳಿ ನ್ಯೂಸ್, ಮೈಸೂರು:
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕುರಿಹುಂಡಿ ಗ್ರಾಮದಲ್ಲಿ ಬಾಳೆ ಗಿಡಗಳ ಮರೆಯಲ್ಲಿ ಅಕ್ರಮವಾಗಿ ಡ್ರಗ್ಸ್ ಸಾಗಿಸುತ್ತಿದ್ದ ಕೇರಳದ ಪ್ರಗತಿಪರ ಯುವ ರೈತ ಪ್ರಶಸ್ತಿ ವಿಜೇತ ಧನೇಶ್ ಎಸ್. ನಾಯರ್ ಅಲಿಯಾಸ್ ಡ್ಯಾನಿ (31) ಎಂಬಾತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೇರಳದಲ್ಲಿ ನೂರಾರು ಯುವಕರಿಗೆ ಕೃಷಿ ಸ್ಪೂರ್ತಿಯಾಗಿದ್ದ ಈತ, ನಂಜನಗೂಡಿನಲ್ಲಿ ಜಮೀನು ಗುತ್ತಿಗೆ ಪಡೆದು ಬಾಳೆ ಗಿಡಗಳನ್ನು ಬೆಳೆಸಿದ್ದನಲ್ಲದೆ, ಅದೇ ಬಾಳೆ ಗೊನೆಗಳಲ್ಲಿ ಎಂಡಿಎಂಎ ಹಾಗೂ ಹ್ಯಾಶ್ ಆಯಿಲ್ ಅಡಗಿಸಿ ಸಾಗಿಸುತ್ತಿದ್ದನು.
ಈ ಕಾರ್ಯಾಚರಣೆಯಲ್ಲಿ ಕೇರಳ ಪೊಲೀಸರು 720 ಗ್ರಾಂ ಎಂಡಿಎಂಎ ಹಾಗೂ 800 ಎಂಎಲ್ ಹ್ಯಾಶ್ ಆಯಿಲ್ ವಶಪಡಿಸಿಕೊಂಡಿದ್ದು, ಇದರ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ, ರೈತರು ತಮ್ಮ ಜಮೀನುಗಳನ್ನು ಅಪರಿಚಿತರಿಗೆ ಗುತ್ತಿಗೆ ನೀಡುವ ಮುನ್ನ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಲದಂಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.




