ಚಂದ್ರವಳ್ಳಿ ನ್ಯೂಸ್, ಗದಗ:
ಕಳೆದ 18 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಗದಗ ಕೆಆರ್‌ಐಡಿಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪರ್ವೆಜ್ ಧಾರವಾಡ ಅವರ ಪತ್ತೆ ಕಾರ್ಯದಲ್ಲಿ ಗದಗ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದೆ. ಮಧ್ಯಪ್ರದೇಶದ ಭೋಪಾಲ್ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಪರ್ವೇಜ್ ಓಡಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಪೊಲೀಸರು ಈ ಸುಳಿವಿನ ಆಧಾರದ ಮೇಲೆ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ಸೆಪ್ಟೆಂಬರ್ 13ರಂದು ಕಚೇರಿ ಸಭೆಯ ನಿಮಿತ್ತ ಗದಗದಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳಿದ್ದ ಪರ್ವೆಜ್, ಅಲ್ಲಿಂದ ವಿಜಯವಾಡದ ಕಡೆಗೆ ತೆರಳಿರುವ ಮಾಹಿತಿ ಆರಂಭದಲ್ಲಿ ಪೊಲೀಸರಿಗೆ ಲಭ್ಯವಾಗಿತ್ತು. ವಿಜಯವಾಡದವರೆಗೆ ಅವರ ಚಲನವಲನಗಳನ್ನು ಬೆನ್ನತ್ತಿದ್ದ ತನಿಖಾ ತಂಡ, ನಂತರದ ಪ್ರಯಾಣದ ಕುರಿತು ವಿವಿಧ ರೈಲು ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಾ ಬಂದಿದೆ. ವಿಜಯವಾಡದ ಬಳಿಕ ಅವರು ಸುಮಾರು 1200 ಕಿಲೋಮೀಟರ್‌ಗೂ ಅಧಿಕ ದೂರದ ಭೋಪಾಲ್ ಕಡೆಗೆ ಪ್ರಯಾಣಿಸಿರುವುದು ಹಂತ ಹಂತವಾಗಿ ಬೆಳಕಿಗೆ ಬಂದಿದೆ.
ಸವಾಲಾದ ಮೊಬೈಲ್ ಸ್ವಿಚ್‌ಆಫ್: ಪರ್ವೆಜ್ ಅವರ ಮೊಬೈಲ್ ಫೋನ್ ಕಳೆದ 18 ದಿನಗಳಿಂದ ನಿರಂತರವಾಗಿ ಸ್ವಿಚ್‌ಆಫ್ ಆಗಿರುವುದರಿಂದ ನೇರ ಮೊಬೈಲ್ ಲೊಕೇಶನ್ ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಈ ತಾಂತ್ರಿಕ ಸವಾಲನ್ನು ಮೀರಿ ನಿಲ್ಲಲು ಪೊಲೀಸರು ಮೊಬೈಲ್ ಲೊಕೇಶನ್‌ಬದಲಿಗೆ ರೈಲು ನಿಲ್ದಾಣಗಳ ಸಿಸಿಟಿವಿ ದೃಶ್ಯಗಳು, ಟಿಕೆಟ್ ಪ್ರಯಾಣದ ಮಾಹಿತಿ ಮತ್ತು ಇತರ ಲಭ್ಯ ಸಾಕ್ಷ್ಯಗಳನ್ನು ಆಧರಿಸಿ ಅವರ ಹೆಜ್ಜೆ ಗುರುತುಗಳನ್ನು ನಿರಂತರವಾಗಿ ಬೆನ್ನಟ್ಟುತ್ತಿದ್ದಾರೆ.
ಭೋಪಾಲ್‌ನಲ್ಲಿ ತೀವ್ರ ಶೋಧ:
ಸದ್ಯ ಭೋಪಾಲ್ ರೈಲು ನಿಲ್ದಾಣದಲ್ಲಿ ಪರ್ವೆಜ್ ಓಡಾಡಿರುವ ದೃಶ್ಯಗಳು ಪೊಲೀಸರಿಗೆ ದೊಡ್ಡ ಮಟ್ಟದ ಸುಳಿವು ನೀಡಿದೆ. ಭೋಪಾಲ್ ತಲುಪಿದ ಬಳಿಕ ಅವರು ಯಾವ ಪ್ರದೇಶಕ್ಕೆ ತೆರಳಿದ್ದಾರೆ, ಯಾರನ್ನಾದರೂ ಭೇಟಿಯಾಗಿದ್ದಾರೆಯೇ ಅಥವಾ ಸದ್ಯ ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಲು ವಿಶೇಷ ಪೊಲೀಸ್ ತಂಡಗಳು ಭೋಪಾಲ್‌ನಲ್ಲಿ ಮುಳುಗಿ ಶೋಧ ನಡೆಸುತ್ತಿವೆ.
ಪರ್ವೆಜ್ ಅವರು ಸುರಕ್ಷಿತವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಅಧಿಕೃತವಾಗಿ ಖಚಿತಗೊಂಡಿಲ್ಲವಾದರೂ, ಭೋಪಾಲ್‌ನಲ್ಲಿ ಸಿಕ್ಕಿರುವ ಈ ಹೊಸ ಸಿಸಿಟಿವಿ ಸುಳಿವು ತನಿಖೆಗೆ ಹೊಸ ತಿರುವು ನೀಡಿದ್ದು, ಆದಷ್ಟು ಶೀಘ್ರದಲ್ಲೇ ಪತ್ತೆಯಾಗುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.




