ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಳೆದ 7 ದಿನಗಳಿಂದ ನಡೆದ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಸಮಾರೋಪ ಕಾರ್ಯಕ್ರಮ ಕೃತಕ ಬುದ್ದಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದಲ್ಲಿ ಬುಧವಾರ ನಡೆಯಿತು.
ಪ್ರಾಂಶುಪಾಲ ಡಾ.ಮುರಳಿ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ದೇಶದ ಸ್ವಾತಂತ್ರ್ಯ ಮತ್ತು ಐಕ್ಯತೆಯನ್ನು ಬಲಪಡಿಸಲು, ಹಿಂಸಾಚಾರ ಮತ್ತು ಕೋಮುದ್ವೇಷವನ್ನು ತಡೆಗಟ್ಟುವುದಕ್ಕಾಗಿ ನ.19ರಿಂದ 25ರವರೆಗೆ ರಾಷ್ಟ್ರೀಯ ಐಕ್ಯತಾ ಸಪ್ತಾಹವನ್ನು ದೈಹಿಕ ಶಿಕ್ಷಣ ವಿಭಾಗ ಹಾಗೂ ಎನ್‌ಎಸ್‌ಎಸ್ ಸಹಯೋಗದಲ್ಲಿ ಯಶಸ್ವಿಯಾಗಿ ಆಚರಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರ ನಿರ್ಮಾಣಕ್ಕೆ ಪೂರಕ: ಮುಖ್ಯಭಾಷಣಕಾರರಾಗಿ ಮಾತನಾಡಿದ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್, ಐಕ್ಯತಾ ಸಪ್ತಾಹದಲ್ಲಿ ಮಹತ್ವದ ವಿಚಾರಗಳತ್ತ ಗಮನ ಹರಿಸಲಾಗಿದ್ದು, ಪರಿಸರ ಸಂರಕ್ಷಣೆಯ ಸಂಕಲ್ಪದೊಂದಿಗೆ ಐಕ್ಯತೆಯ ಅನನ್ಯತೆಯನ್ನು ಸಾರಲಾಗಿದೆ. ಜಾಗತಿಕವಾಗಿ ಹೆಚ್ಚುತ್ತಿರುವ ತಾಪಮಾನ, ಮಾಲಿನ್ಯದ ಪರಿಣಾಮವಾಗಿ ಭವಿಷ್ಯದ ದಿನಗಳು ಸವಾಲಿಗೆ ಮುಖಾಮುಖಿಯಾಗಿವೆ. ವ್ಯಕ್ತಿಗತವಾದ ಬದಲಾವಣೆ ಮತ್ತು ಜಾಗೃತಿಯಿಂದ ಮಾತ್ರ ಮಾಲಿನ್ಯ ನಿಯಂತ್ರಣ ಸಾಧ್ಯ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ಇದು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ನೀರು, ಗಾಳಿ ಮತ್ತು ಮಣ್ಣು ಕಲುಷಿತಗೊಳ್ಳದಂತೆ ಎಚ್ಚರವಹಿಸಬೇಕು. ಮಿತಿಮೀರಿದ ನಗರೀಕರಣಕ್ಕೆ ಹಲವು ನದಿ, ಕೊಳ್ಳಗಳು, ಅರಣ್ಯ, ಜೀವಿಸಂಕುಲ ಬಲಿಯಾಗಿದೆ. ಈ ಬಗೆಯ ಪ್ರಕ್ರಿಯೆಗಳು ನಿಲ್ಲಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವಜನರ ಪಾತ್ರ ನಿರ್ಣಾಯಕ ಎಂದರು.
ಬಹುವಿಧ ಅರಿವಿಗೆ ಮಾದರಿ: ಉಪಪ್ರಾಂಶುಪಾಲ ಡಾ.ಆರ್.ಎಂ.ಸುನಿಲ್‌ಕುಮಾರ್ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ವಿದ್ಯಾರ್ಥಿಗಳಲ್ಲಿ ಬಹುವಿಧ ಅರಿವು ಹಾಗೂ ಭಾವೈಕ್ಯತೆಯ ಭಾವನೆಯನ್ನು ಮೂಡಿಸುವ ಪರಿಣಾಮಕಾರಿ ಪ್ರಯತ್ನ ಇದಾಗಿದೆ ಎಂದರು.
ಅರ್ಥಪೂರ್ಣ ಸಪ್ತಾಹ: ಪ್ರಾಸ್ತಾವಿಕವಾಗಿ ಮಾತನಾಡಿದ ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ಸಪ್ತಾಹದ ಭಾಗವಾಗಿ ಐಕ್ಯತಾ ದಿನ, ಅಲ್ಪ ಸಂಖ್ಯಾತರ ಕಲ್ಯಾಣ ದಿನ, ಭಾಷಾ ಸೌಹಾರ್ದತಾ ದಿನ, ದುರ್ಬಲ ವರ್ಗಗಳ ಕಲ್ಯಾಣ ದಿನ, ಸಾಂಸ್ಕೃತಿಕ ಏಕತಾ ದಿನ, ಮಹಿಳಾ ದಿನ ಹಾಗೂ ಪರಿಸರ ರಕ್ಷಣಾ ದಿನಗಳನ್ನು ಆಚರಿಸಿ ಅವುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ ಎಂದು ವಿವರಿಸಿದರು.
ಪರಿಸರ ಜಾಗೃತಿಯ ಪ್ರಯತ್ನ: ಅಧ್ಯಕ್ಷತೆ ವಹಿಸಿದ್ದ ಎಐಎಂಎಲ್ ವಿಭಾಗ ಮುಖ್ಯಸ್ಥ ಡಾ.ಬಿ.ಎನ್.ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬೆಳೆಸುವ ಜೊತೆಗೆ ಪರಿಸರದ ಕಾಳಜಿಯನ್ನು ಜಾಗೃತಗೊಳಿಸುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಐಕ್ಯತಾ ಸಂಕಲ್ಪದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಸಸಿಗಳನ್ನು ನೆಡಲಾಯಿತು. ಯಾಂತ್ರಿಕ ವಿಭಾಗ ಮುಖ್ಯಸ್ಥ ಡಾ.ಲೋಕೇಶ್ ಯಾದವ್ ಸೇರಿದಂತೆ ಹಲವು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




