ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಜಯಪುರದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ವಿಮಾನ ನಿಲ್ದಾಣದಲ್ಲಿ 'ಸ್ಯಾಟಲೈಟ್ ಫ್ಲೈಯಿಂಗ್ ಟ್ರೈನಿಂಗ್ ಅಕಾಡೆಮಿ' (ವಿಮಾನ ಚಾಲನಾ ತರಬೇತಿ ಕೇಂದ್ರ) ಸ್ಥಾಪಿಸಲು ಪ್ರಸಿದ್ಧ 'ಕಾರ್ವರ್ ಏವಿಯೇಷನ್' ಸಂಸ್ಥೆ ಆಸಕ್ತಿ ವ್ಯಕ್ತಪಡಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಬಾರಾಮತಿ ಮೂಲದ ಕಾರ್ವರ್ ಏವಿಯೇಷನ್ ಸಂಸ್ಥೆಯ ನಿರ್ದೇಶಕ ನೆವಿಲ್ ಭರೂಚ ಹಾಗೂ ವ್ಯವಸ್ಥಾಪಕ ಪರಮೇಶ್ ಪಾರೀಖ್ ಅವರೊಂದಿಗೆ ಸಚಿವರು ಇಂದು ಮಹತ್ವದ ಚರ್ಚೆ ನಡೆಸಿದರು.
ಸಮಗ್ರ ಮೂಲಸೌಕರ್ಯ: ಯೋಜನೆ ಕಾರ್ಯರೂಪಕ್ಕೆ ಬಂದರೆ ವಿಜಯಪುರದಲ್ಲಿ ಪೈಲಟ್ ತರಬೇತಿಯ ಜೊತೆಗೆ ವಿಮಾನಗಳ ನಿರ್ವಹಣೆ ಹಾಗೂ ದುರಸ್ತಿ ಸೇವೆ, ಹ್ಯಾಂಗರ್‌ಗಳು ಮತ್ತು ಗ್ರೌಂಡ್ ಸಪೋರ್ಟ್ ಸೌಲಭ್ಯಗಳು ಅಭಿವೃದ್ಧಿಯಾಗಲಿವೆ.
ಉದ್ಯೋಗಾವಕಾಶ: ಉತ್ತರ ಕರ್ನಾಟಕ ಭಾಗದಲ್ಲಿ ವೈಮಾನಿಕ ಕ್ಷೇತ್ರಕ್ಕೆ ಹೊಸ ಉತ್ತೇಜನ ಸಿಗಲಿದ್ದು, ಸ್ಥಳೀಯ ಯುವಜನರಿಗೆ ನೂರಾರು ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಲಭಿಸಲಿವೆ.
ಶುಲ್ಕದಲ್ಲಿ ರಿಯಾಯಿತಿ: ತರಬೇತಿ ಪಡೆಯುವ ಸ್ಥಳೀಯ ವಿದ್ಯಾರ್ಥಿಗಳಿಗೆ ಆಕರ್ಷಕ ಶುಲ್ಕ ರಿಯಾಯಿತಿ ನೀಡುವುದಾಗಿ ಸಂಸ್ಥೆಯು ಭರವಸೆ ನೀಡಿದೆ.
ಅಧಿಕಾರಿಗಳು ಮತ್ತು ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಅಕಾಡೆಮಿಯ ಕಾರ್ಯಚಟುವಟಿಕೆಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.




