ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡ ವಚನ ಸಾಹಿತ್ಯದ ಪಿತಾಮಹ' ಡಾ. ಫಕೀರಪ್ಪ ಗುರುಪಾದಪ್ಪ. ಹಳಕಟ್ಟಿ ಅವರು 12ನೇ ಶತಮಾನದಲ್ಲಿ ಅಳಿವಿನಂಚಿನಲ್ಲಿದ್ದ ಬಸವಾದಿ ಶರಣರ ವಚನಗಳನ್ನು ಶ್ರಮಪಟ್ಟು ಸಂಗ್ರಹಿಸಿ, ಸಂಪಾದಿಸಿ ಅವುಗಳನ್ನು ಮುದ್ರಿಸಿ ಕನ್ನಡ ಸಾಹಿತ್ಯಕ್ಕೆ ಮರು ಜೀವ ನೀಡಿದರು. ಅವರು ವಾಸ ಮಾಡುತ್ತಿದ್ದ ತನ್ನ ಸ್ವಂತ ಮನೆಯನ್ನು ಮಾರಿ ಮುದ್ರಣಾಲಯ ಸ್ಥಾಪಿಸಿ ಶರಣ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಇವರ ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅನನ್ಯವಾದುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಪ್ರಮೀಳ ಮಹದೇವ ಹೇಳಿದರು.
ತಾಲ್ಲೂಕು ಕಛೇರಿ ಅವರಣದಲ್ಲಿ ರಾಷ್ಠ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಅಯೋಜನೆ ಮಾಡಲಾದ ಕಾರ್ಯಕ್ರಮದಲ್ಲಿ ಡಾ, ಫ. ಗು. ಹಳಹಟ್ಟಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿ ಕನ್ನಡವು ಜಗತ್ತಿನ ಅತ್ಯಂತ ಪ್ರಾಚೀನ, ಶಾಸ್ತ್ರೀಯ ಮತ್ತು ವೈಜ್ಞಾನಿಕ ಭಾಷೆಗಳಲ್ಲಿ ಒಂದಾಗಿದೆ. ಅದರ ಸಾಹಿತ್ಯ ಪರಂಪರೆ ವಿಶ್ವದ ಇತರ ಭಾಷೆಗಳ ಸಾಹಿತ್ಯಕ್ಕಿಂತ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಅವರು ತಮ್ಮ ಸಂಶೋಧನೆಯ ಮೂಲಕ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಹಳಕಟ್ಟಿಯವರಿಗೆ ಸಲ್ಲುತ್ತದೆ. ಹಾಗು ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸುವ ಮೂಲಕ ಡಾ. ಫ.ಗು. ಹಳಕಟ್ಟಿಯವರು ಕನ್ನಡನಾಡಿಗೆ ಸಲ್ಲಿಸಿರುವ ಸೇವೆ ಚಿರಸ್ಮರಣೀಯವಾಗಿದೆ ಎಂದು ಅವರು ತಿಳಿಸಿದರು.
ನಂತರ ಮಾತನಾಡಿದ ಕನ್ನಡ ಜಾಗೃತಿ ವೇದಿಕಯ ಜಿಲ್ಲಾಧ್ಯಕ್ಷ ನಾಗರಾಜ ಮಾತನಾಡಿ ಬಸವಾದಿ ಶರಣರ ವಚನ ಸಾಹಿತ್ಯವು ಅಳಿದು ಹೋಗುವ ಸ್ಥಿತಿಯಲ್ಲಿ ಇದ್ದಾಗ, ಅದನ್ನು ಉಳಿಸಿ ಸಂರಕ್ಷಿಸುವ ಮಹತ್ವದ ಕೆಲಸವನ್ನು ಡಾ. ಫ. ಗು. ಹಳಕಟ್ಟಿಯವರು ತಮ್ಮ ಜೀವನದ ಗುರಿಯಾಗಿ ತೆಗೆದುಕೊಂಡಿದ್ದರು ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶಗಳಿಂದ, ಮಠಗಳಿಂದ ಮತ್ತು ಹಳೆಯ ದಾಖಲೆಗಳಿಂದ ವಚನಗಳನ್ನು ಸಂಗ್ರಹಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಹಳಕಟ್ಟಿಯವರು ಅದನ್ನು ಅಪಾರ ಶ್ರಮದಿಂದ ನಿರ್ವಹಿಸಿ ಸಾವಿರಾರು ವಚನಗಳನ್ನು ಸಂಗ್ರಹಿಸಿ ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪ್ರತಿಮ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.
ಅವರ ಈ ಸೇವೆಯಿಂದಾಗಿ ಬಸವಣ್ಣನವರ ಹಾಗೂ ಶರಣರ ತತ್ವಗಳು ಜನಸಾಮಾನ್ಯರಿಗೆ ತಲುಪುವಂತಾಯಿತು. ಕನ್ನಡ ಭಾಷೆಯ ಮೇಲೆ ಅವರಿಗಿದ್ದ ಅಪಾರ ಅಭಿಮಾನ ಮತ್ತು ಸಂಶೋಧನಾ ಮನೋಭಾವ ಇಂದಿಗೂ ಮಾದರಿಯಾಗಿದೆ ಎಂದರು.
ಇಂದಿನ ಯುವಕರು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಕೇವಲ ಓದಿನ ವಿಷಯವಾಗಿ ನೋಡದೆ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕನ್ನಡದ ಮಹನೀಯರ ಆದರ್ಶಗಳನ್ನು ಅನುಸರಿಸುವ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ನಾಗರತ್ನಮ್ಮಶಿರಸ್ತೆದಾರ ಸುರೇಶ ಕನ್ನಡ ಪರ ರೈತಪರ ದಲಿತಪರ ಸಂಘಟನೆಗಳು ಹಾಜರಿದ್ದರು.



