ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಣೇಶ ಹಬ್ಬವನ್ನು ಬಹಳ ಶಾಂತಿಯುತವಾಗಿ ಆಚರಿಸಬೇಕು ಎಂದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಅಶಾಂತಿ ಮೂಡಿಸಲು ಹಾಗೂ ಕುತಂತ್ರ ನಡೆಸಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬದ ಆಚರಣೆಗೆ ಸರ್ಕಾರ ಕಂಡೀಷನ್ ಹಾಕುತ್ತಿದೆ ಎಂಬ ಆರ್.ಅಶೋಕ್ ಆರೋಪಕ್ಕೆ ತಿರುಗೇಟು ನೀಡಿದರು. ಸಮಾಜದಲ್ಲಿ ಶಿಸ್ತು ಇರಬೇಕು ಮತ್ತು ಅಶಾಂತಿ ಸೃಷ್ಟಿಸುವ ಕುತಂತ್ರ ನಡೆಯುತ್ತಿರುವುದು ನಮಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ನಮ್ಮ ಪೊಲೀಸರಿಗೆ ಸೂಚಿಸಲಾಗಿದೆ. ಸಮಾಜ ವಿರೋಧಿ ವ್ಯಕ್ತಿಗಳನ್ನು ಬಿಜೆಪಿಯವರು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ, ಎಲ್ಲವೂ ನಮಗೆ ಗೊತ್ತಿದೆ. ಗಣೇಶ ಎಂದಿಗೂ ಬಿಜೆಪಿಯವರ ಸ್ವಂತ ಆಸ್ತಿಯಲ್ಲ, ಅದು ಎಲ್ಲರ ಆಸ್ತಿ. ನಾವು ಗಣೇಶ ಹಬ್ಬಕ್ಕೇ ರಜೆ ನೀಡಿದ್ದೇವೆ ಹಾಗೂ ಹಬ್ಬಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು.
ಇದೇ ವೇಳೆ, ಮೈಸೂರಿನ ಟಿ.ನರಸೀಪುರ ಪೊಲೀಸ್ ಠಾಣೆಗೆ ಆರ್.ಅಶೋಕ್ ಭೇಟಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅವರು ಎಲ್ಲಿಯಾದರೂ ಹೋಗಲಿ, ಏನೆಲ್ಲಾ ಮಾಡಲಿ, ಸುಳ್ಳೇ ಅವರ ಮನೆ ದೇವರು. ಪೊಲೀಸ್ ಸ್ಟೇಷನ್‌ಗೇ ಹೋಗಲಿ, ಅವರು ಹಿಂದೆ ಗೃಹ ಸಚಿವರಾಗಿದ್ದವರು, ತಮ್ಮ ಮಿತಿ ಏನು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಿಜೆಪಿ-ಜೆಡಿಎಸ್‌ನ ಹಲವು ನಾಯಕರು ಹಾಗೂ ಮುಖಂಡರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಮತ್ತು ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆ ಎಕ್ಸ್ ಪೋಸ್ಟ್ ಮೂಲಕ ವಾಗ್ದಾಳಿ:
ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ನೀಡಿದ ರೂಟ್ ಮ್ಯಾಪ್‌ನಂತೆಯೇ ಗಣಪತಿ ಮೆರವಣಿಗೆ ಸಾಗಬೇಕು ಎಂಬ ನಿರ್ದೇಶನವನ್ನೇ ಬಿಜೆಪಿಗರು ಧರ್ಮ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರತಿಭಟನೆ ಎಂಬ ಸದಾರಮೆ ನಾಟಕ ಮಾಡಲು ಹಿಂದುತ್ವದ ವೇಷ ತೊಟ್ಟು ಮೈಸೂರಿನ ತಿ.ನರಸೀಪುರಕ್ಕೆ ತೆರಳಿದ ಆರ್.ಅಶೋಕ್ ಅವರೇ, ಈ ಹಿಂದೆ ನಿಮ್ಮದೇ ಬಾಯಿಯಿಂದ ಉದುರಿದ ಅಣಿಮುತ್ತುಗಳನ್ನು ಒಮ್ಮೆ ಕೇಳಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ಎಕ್ಸ್ (ಟ್ವಿಟರ್) ಪೋಸ್ಟ್ ಮೂಲಕ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.
ನಿಮ್ಮದೇ ಹೇಳಿಕೆಯಂತೆ, ನೀವೀಗ "ಧರ್ಮ ರಾಜಕಾರಣ" ಶುರು ಮಾಡಿರುವುದು ನಾಯಕ ಎನಿಸಿಕೊಳ್ಳುವುದಕ್ಕಾ ಅಥವಾ ಅಭದ್ರತೆಯಲ್ಲಿರುವ ವಿಪಕ್ಷ ನಾಯಕನ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕಾ? ಎಂದು ಪ್ರಶ್ನಿಸಿರುವ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಹಾಗೂ ರಾಜ್ಯದಲ್ಲಿ ಕೋಮುಸಂಘರ್ಷ ನಿಗ್ರಹಿಸುವ ವಿಷಯದಲ್ಲಿ ನಾನು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಪೊಲೀಸರ ಮೇಲೆ ನಿಮ್ಮ ದರ್ಪ ದೌರ್ಜನ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಆರ್.ಅಶೋಕ್ ವಿರುದ್ಧ ತೀವ್ರವಾಗಿ ಗುಡುಗಿದ್ದಾರೆ.




