ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷ ಗೆಲ್ಲಬೇಕಾದರೆ ಕಾರ್ಯಕರ್ತರಲ್ಲಿ ಶಿಸ್ತು ಮತ್ತು ಒಗ್ಗಟ್ಟು ಮುಖ್ಯ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೀಮಸಮುದ್ರದ ಜಿ.ಎಸ್.ಮಂಜುನಾಥ್ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಮಹಾತ್ಮಗಾಂಧಿ ಹಾಗೂ ಲಾಲ್‌ಬಹದ್ದೂರ್‌ಶಾಸ್ತ್ರಿ ಜಯಂತಿಯಲ್ಲಿ ಭಾಗವಹಿಸಿ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ನಾನು ಪಕ್ಷದಲ್ಲಿದ್ದೇನೆ. ಆದರೆ ರಾಜಕೀಯದಲ್ಲಿಲ್ಲ. ಎರಡು ಬಾರಿ ಪಕ್ಷ ನನಗೆ ಟಿಕೆಟ್ ನೀಡಿದೆ. ಗೆಲ್ಲಲು ಆಗಲಿಲ್ಲ. ಅದಕ್ಕೆ ನಾನಾ ರೀತಿಯ ಕಾರಣಗಳಿರಬಹುದು. ಕಾರ್ಯಕರ್ತರು, ಮುಖಂಡರುಗಳು ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ಬಿಟ್ಟು ಪಕ್ಷ ಸಂಘಟನೆಗೆ ಒತ್ತು ಕೊಡಬೇಕು. ಅಧಿಕಾರದಲ್ಲಿದ್ದಾಗ ಪಕ್ಷದ ಕೆಲಸ ಮಾಡುವುದು ದೊಡ್ಡದಲ್ಲ. ಏನು ಇಲ್ಲದಿದ್ದಾಗ ಪಕ್ಷಕ್ಕೆ ತ್ಯಾಗ ಮಾಡುವ ಗುಣವಿರಬೇಕು. ಗಾಂಧಿಜಿ ಹಾಗೂ ಲಾಲ್‌ಬಹದ್ದೂರ್‌ಶಾಸ್ತ್ರಿ ಇವರುಗಳು ಪಕ್ಷ ಹಾಗೂ ದೇಶಕ್ಕಾಗಿಯೇ ಪ್ರಾಣ ಮುಡುಪಾಗಿಟ್ಟವರು. ಅಂತಹವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡಿ ಬ್ರಿಟೀಷರ ವಿರುದ್ದ ಮಹಾತ್ಮಗಾಂಧಿ ಹೋರಾಟ ನಡೆಸದಿದ್ದರೆ ದೇಶದ ಪರಿಸ್ಥಿತಿ ಎಷ್ಟು ಕರಾಳವಾಗಿರುತ್ತಿತ್ತು ಎನ್ನುವುದನ್ನು ಊಹಿಸಿಕೊಳ್ಳಲು ಆಗುವುದಿಲ್ಲ. ಸತ್ಯ ಮತ್ತು ಅಹಿಂಸೆಯೆ ಅವರ ಶಸ್ತ್ರವಾಗಿತ್ತು. ಶಾಂತಿ, ಅಹಿಂಸೆ, ಚಳುವಳಿಯ ಮೂಲಕ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟಂತ ಗಾಂಧಿ ಹಾಗೂ ಲಾಲ್‌ಬಹುದ್ದೂರ್‌ಶಾಸ್ತ್ರಿ ಇವರುಗಳ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಿರಿಯ ನ್ಯಾಯವಾದಿ ಜಿ.ಎಸ್.ಕುಮಾರ್‌ಗೌಡ ಮಾತನಾಡುತ್ತ ಕೋಮುವಾದಿ ಬಿಜೆಪಿ.ಯವರು ಅಪ ಪ್ರಚಾರದ ಮೂಲಕ ಗಾಂಧಿ ಹಾಗೂ ಲಾಲ್‌ಬಹದ್ದೂರ್‌ಶಾಸ್ತ್ರಿ ಇವರುಗಳ ಹೆಸರಿಗೆ ಮಸಿ ಬಳಿಯಲು ಹೊರಟಿರುವುದರ ವಿರುದ್ದ ಕಾರ್ಯಕರ್ತರು ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷದ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಸತ್ಯ ಮತ್ತು ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಮಹಾತ್ಮಗಾಂಧಿ ಐಕ್ಯತೆ ಮತ್ತು ಕೋಮುಸೌಹಾರ್ಧತೆಯಿಂದ ಎಲ್ಲರೂ ಬದುಕುವಂತ ಪಾಠ ಕಲಿಸಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿ.ಜೆ.ಪಿ. ದೇಶದಲ್ಲಿ ಕೋಮು ಸೌಹಾರ್ಧತೆಯನ್ನು ಹಾಳು ಮಾಡುತ್ತಿದೆ. ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು, ಶೋಷಿತರು ಮೈಮರೆಯಬಾರದು ಎಂದು ಜಾಗೃತಿಗೊಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ ಸತ್ಯ ಮತ್ತು ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಗಾಂಧಿ ಬಗ್ಗೆ ಅಪ ಪ್ರಚಾರ ಮಾಡುತ್ತಿರುವ ಆರ್.ಎಸ್.ಎಸ್. ಮತ್ತು ಬಿಜೆಪಿ.ಯವರ ಹೇಡಿತನವನ್ನು ಪ್ರತಿಯೊಬ್ಬರು ಖಂಡಿಸಬೇಕಿದೆ. ಲಾಲ್‌ಬಹದ್ದೂರ್‌ಶಾಸ್ತ್ರಿ ಹಾಗೂ ಮಹಾತ್ಮಗಾಂಧಿರವರ ತ್ಯಾಗ ಬಲಿದಾನದಿಂದ ಭಾರತ ಸ್ವಾತಂತ್ರ್ಯವಾಗಿದೆ. ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ನೀಡಿದೆ. ಆದರೆ ಕೇಂದ್ರ ಬಿಜೆಪಿ.ಸರ್ಕಾರ ಎಸ್.ಐ.ಆರ್.ಮೂಲಕ ಅಲ್ಪಸಂಖ್ಯಾತರು ಹಾಗೂ ಕಾಂಗ್ರೆಸ್ ಮತಗಳನ್ನು ಮತ ಪಟ್ಟಿಯಿಂದ ತೆಗೆದು ಹಾಕುವ ಕುತಂತ್ರ ನಡೆಸುತ್ತಿದೆ. ಫಾರಂ ನಂ.೭ ರ ಮೂಲಕ ಬಿಜೆಪಿ. ಮತದಾನದ ಹಕ್ಕು ಕಸಿಯುತ್ತಿರುವುದರ ವಿರುದ್ದ ಜಿಲ್ಲಾಧಿಕಾರಿ ಬಳಿ ಹೋಗಿ ಮತಗಳನ್ನು ರಕ್ಷಣೆ ಮಾಡುವಂತೆ ಕೇಳೋಣ. ಬೂತ್ ಮಟ್ಟದಲ್ಲಿ ಇಂತಹ ನೀಚ ಕೆಲಸ ಮಾಡುವವರನ್ನು ಪತ್ತೆ ಹಚ್ಚಿ ಅಂತಹವರ ಮನೆಗಳಿಗೆ ಮುತ್ತಿಗೆ ಹಾಕೋಣ ಎಂದು ಕಾರ್ಯಕರ್ತರನ್ನು ಜಾಗೃತಿಗೊಳಿಸಿದರು.
ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಮಾತನಾಡುತ್ತ ಸತ್ಯ ಮತ್ತು ಅಹಿಂಸೆಯ ಮೂಲಕ ಬ್ರಿಟೀಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಂತ ಗಾಂಧಿ ಹಾಗೂ ಲಾಲ್‌ಬಹದ್ದೂರ್‌ಶಾಸ್ತ್ರಿ ಇವರುಗಳ ಕೊಡುಗೆಯನ್ನು ಎಲ್ಲರೂ ನೆನೆಯುವುದರ ಜೊತೆಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಬಿಜೆಪಿ. ಸರ್ಕಾರ ಫೋನ್‌ಪೇ ಮತ್ತು ಗೂಗಲ್‌ಪೇ ಮೂಲಕ ದೇಶದ ಜನರ ಮೇಲೆ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಹೇರಿದೆ. ರೈತನನ್ನು ದೇಶದ ಬೆನ್ನೆಲುಬು ಎಂದು ಘೋಷಿಸಿದ್ದು, ಲಾಲ್‌ಬಹದ್ದೂರ್‌ಶಾಸ್ತ್ರಿ. ಅಹಿಂಸೆಯ ಮೂಲಕ ನಾವುಗಳು ವಿರೋಧಿಗಳ ಎದುರು ಹೋರಾಡೋಣ ಎಂದು ವಿನಂತಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡಿ ದೇಶದ ಸ್ವಾತಂತ್ರಕ್ಕಾಗಿ ಯಾವೊಬ್ಬ ಆರ್.ಎಸ್.ಎಸ್.ನವರು ಬ್ರಿಟೀಷರ ವಿರುದ್ದ ಹೋರಾಡಿಲ್ಲ. ಗಾಂಧಿ ಮತ್ತು ಲಾಲ್‌ಬಹುದ್ದೂರ್‌ಶಾಸ್ತ್ರಿ ಇವರುಗಳು ಹೋರಾಟಕ್ಕಾಗಿಯೇ ತಮ್ಮ ಜೀವನವನ್ನು ಮೀಸಲಾಗಿಟ್ಟವರು. ಇಂತಹ ಮಹಾನ್‌ದೇಶ ಭಕ್ತರನ್ನು ಟೀಕಿಸುವ ನೈತಿಕತೆ ಬಿಜೆಪಿ. ಆರ್.ಎಸ್.ಎಸ್.ನವರಿಗಿಲ್ಲ. ಎಸ್.ಐ.ಆರ್.ಮೂಲಕ ಬಿಜೆಪಿ. ಅಲ್ಪಸಂಖ್ಯಾತರ ಮತಗಳನ್ನು ಮತ ಪಟ್ಟಿಯಿಂದ ಡಿಲಿಟ್ ಮಾಡುವ ಕೀಳು ರಾಜಕಾರಣಕ್ಕಿಳಿದಿದೆ. ಇದರ ವಿರುದ್ದ ಕಾರ್ಯಕರ್ತರು ಜಾಗೃತರಾಗಬೇಕಿದೆ ಎಂದರು.
ನಗರಸಭೆ ನಾಮ ನಿರ್ದೇಶಿತ ಸದಸ್ಯ ಹೆಚ್.ಶಬ್ಬಿರ್‌ಭಾಷ ಮಾತನಾಡುತ್ತ ಚಿತ್ರದುರ್ಗ ನಗರ ಒಂದರಲ್ಲಿಯೇ ಫಾರಂ ನಂ.೭ ರ ಮೂಲಕ ೨೩೦೦ ಅಲ್ಪಸಂಖ್ಯಾತರ ಮತಗಳನ್ನು ಪಟ್ಟಿಯಿಂದ ತೆಗೆದು ಹಾಕುವಂತೆ ಅರ್ಜಿ ಸಲ್ಲಿಸಿರುವವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಅನಗತ್ಯ ಅರ್ಜಿಗಳನ್ನು ನೀಡಿರುವವರ ಮೇಲೆ ಎಫ್.ಐ.ಆರ್. ದಾಖಲಿಸಬೇಕಿದೆ. ಅನವಶ್ಯಕವಾಗಿ ತಕರಾರು ಅರ್ಜಿಗಳನ್ನು ನೀಡಿ ಅರ್ಹ ಮತದಾರರಿಗೆ ವಂಚನೆ ಮಾಡಲು ಹೊರಟವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನುಡಿದರು.
ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಪರಿಶಿಷ್ಟ ಪಂಗಡಗಳ ವಿಭಾಗದ ಅಧ್ಯಕ್ಷ ಮಂಜುನಾಥ್, ಮರುಳಾರಾಧ್ಯ, ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಅಬ್ದುಲ್‌ರೆಹಮಾನ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಯು.ಲಕ್ಷ್ಮಿಕಾಂತ್, ಜವಾಹರಲಾಲ್ ಮಂಚ್ ಘಟಕದ ಜಿಲ್ಲಾಧ್ಯಕ್ಷ ಜಿ.ದಾದಾಪೀರ್, ನ್ಯಾಯವಾದಿಗಳಾದ ಜಗದೀಶ್ ಗುಂಡೇರಿ, ಸುದರ್ಶನ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಖುದ್ದೂಸ್, ಸೈಯದ್ ಮೊಹಿದ್ದೀನ್ ಚೋಟು, ಸೇವಾದಳದ ಇಂದಿರಾ, ವಸೀಂ, ಸೈಯದ್ ಸೈಫುಲ್ಲಾ, ಜಿ.ವಿ.ಮಧುಗೌಡ, ಆರತಿ ಮಹಡಿ ಶಿವಮೂರ್ತಿ ಚಾಂದ್‌ಪೀರ್, ನಗರ ಆಶ್ರಯ ಸಮಿತಿ ಸದಸ್ಯ ಉಮೇಶ್ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜಯಂತಿಯಲ್ಲಿ ಪಾಲ್ಗೊಂಡಿದ್ದರು.




