ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಅಂತರ ಹೆಚ್ಚಾಗಿದೆ.
ದೆಹಲಿಗೆ ಮೂವರ ಹೆಸರು ರವಾನೆ? ಹಿರಿಯೂರಿನಲ್ಲಿ ಬಿಜೆಪಿಯೇ ಸ್ಪರ್ಧಿಸಲಿ ಎಂದು ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ ಮುಂದೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ರಾಜಣ್ಣ, ಎ. ಮುರಳಿ ಹಾಗೂ ಎನ್.ಆರ್. ಲಕ್ಷ್ಮೀಕಾಂತ್ ಅವರ ಹೆಸರನ್ನು ರಾಜ್ಯ ಬಿಜೆಪಿ ಘಟಕ ದೆಹಲಿ ವರಿಷ್ಠರಿಗೆ ಶಿಫಾರಸು ಮಾಡಿದೆ ಎಂಬ ಮಾತು ಕೇಳಿಬರುತ್ತಿದೆ.
ಜೆಡಿಎಸ್ ಬಿಗಿಪಟ್ಟು: 2013ರಲ್ಲಿ ಕೇವಲ 1,205 ಮತಗಳಿಂದ ಸೋತಿದ್ದ ಜೆಡಿಎಸ್, ಕ್ಷೇತ್ರದಲ್ಲಿ ಗಟ್ಟಿ ಮತಬ್ಯಾಂಕ್ ಹೊಂದಿದೆ. ಹೀಗಾಗಿ ಕ್ಷೇತ್ರ ತಮಗೇ ಬೇಕೆಂದು ಜೆಡಿಎಸ್ ಪಟ್ಟು ಹಿಡಿದಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಿಲುವು ಈಗ ನಿರ್ಣಾಯಕವಾಗಿದೆ.
ಹೈಕಮಾಂಡ್ ಅಂಗಳದಲ್ಲಿ ಚೆಂಡು: ರಾಜ್ಯ ಬಿಜೆಪಿ ಕಳುಹಿಸಿದ ಪಟ್ಟಿಗೆ ಅಮಿತ್ ಶಾ ಅಸ್ತು ಅನ್ನುತ್ತಾರಾ ಅಥವಾ ಮೈತ್ರಿ ಧರ್ಮಕ್ಕಾಗಿ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುತ್ತಾರಾ ಎಂಬುದು ತೀವ್ರ ಕುತೂಹಲ ಮೂಡಿಸಿದೆ.




