Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಿರಿಯೂರಿನ ‘ಸ್ಥಳೀಯ’ ಹೂಂಕಾರ: ವಲಸೆ ರಾಜಕಾರಣದ ವಿರುದ್ಧ ಸ್ವಾಭಿಮಾನದ ಜಾಗೃತಿ!

ಸಂಪಾದಕೀಯ...
ಹಿರಿಯೂರಿನ
ಸ್ಥಳೀಯಹೂಂಕಾರ: ವಲಸೆ ರಾಜಕಾರಣದ ವಿರುದ್ಧ ಸ್ವಾಭಿಮಾನದ ಜಾಗೃತಿ!
ಚುನಾವಣೆಗಳು ಬಂದಾಗಲೆಲ್ಲ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಯುವುದು ಸಾಮಾನ್ಯ. ಆದರೆ
, ಹಿರಿಯೂರು ವಿಧಾನಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಕೇಳಿಬಂದಿರುವ ಸ್ಥಳೀಯ ಅಭ್ಯರ್ಥಿಯ ಕೂಗು ಕೇವಲ ವೈಯಕ್ತಿಕ ಆಕಾಂಕ್ಷೆಯಲ್ಲ; ಅದು ದಶಕಗಳ ಕಾಲ ಕ್ಷೇತ್ರವನ್ನು ಆಳಿದ ಹೊರಗಿನವರ ರಾಜಕಾರಣದ ವಿರುದ್ಧ ಸ್ಥಳೀಯ ನಾಯಕರು ಮತ್ತು ನಿಷ್ಠಾವಂತ ಕಾರ್ಯಕರ್ತರು ಒಟ್ಟಾಗಿ ಮೊಳಗಿಸಿರುವ ಸ್ವಾಭಿಮಾನದ ಜಾಗೃತಿಯಾಗಿದೆ. ಮಂಗಳವಾರ ಹಿರಿಯೂರಿನ ವರವಲಯದ ವೈಟ್ ವಾಲ್ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಸಮಾನ ಮನಸ್ಕರ ಸಭೆಯು ಕೇವಲ ಒಂದು ರಾಜಕೀಯ ಸಭೆಯಾಗಿರದೆ, ಕ್ಷೇತ್ರದ ಭೌಗೋಳಿಕ ಮತ್ತು ಸಾಮಾಜಿಕ ಅಸ್ಮಿತೆಯನ್ನು ಮರಳಿ ಪಡೆಯುವ ಹಕ್ಕೊತ್ತಾಯದಂತೆ ಗೋಚರಿಸಿದೆ.

ಹಿರಿಯೂರು ಕ್ಷೇತ್ರದ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಸಭೆಯಲ್ಲಿ ವ್ಯಕ್ತವಾದ ಆಕ್ರೋಶಕ್ಕೆ ತಾರ್ಕಿಕ ಹಿನ್ನೆಲೆಯಿರುವುದು ಸ್ಪಷ್ಟವಾಗುತ್ತದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆಲೂರು ವಿ.ಮಸಿಯಪ್ಪ ಹಾಗೂ ಮಸ್ಕಲ್ ಆರ್. ರಾಮಯ್ಯ ಅವರಂತಹ ಕೆಲವೇ ಇಬ್ಬರು ಸ್ಥಳೀಯರನ್ನು ಬಿಟ್ಟರೆ, ಈ ಕ್ಷೇತ್ರವನ್ನು ಪ್ರತಿನಿಧಿಸಿದ ಬಹುತೇಕರು ಹೊರಗಿನವರೇ ಆಗಿದ್ದಾರೆ.

Advertisement

ಡಿ. ಮಂಜುನಾಥ್, ಕೆ. ರಂಗನಾಥ್ ಹಾಗೂ ಇತ್ತೀಚಿನ ದಶಕಗಳಲ್ಲಿ ಕ್ಷೇತ್ರವನ್ನು ಮುನ್ನಡೆಸಿದ ಡಿ. ಸುಧಾಕರ್, ಪೂರ್ಣಿಮಾ ಶ್ರೀನಿವಾಸ್ ಅವರು ಹಿರಿಯೂರಿನವರಲ್ಲದಿದ್ದರೂ ಇಲ್ಲಿನ ಮತದಾರರು ಅವರನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ, ಗೆಲ್ಲಿಸಿದ್ದಾರೆ. ಆದರೆ, ಇಷ್ಟೆಲ್ಲ ಉದಾರಿಗಳಾದ ಹಿರಿಯೂರಿನ ಜನರನ್ನು ಮತ್ತು ಇಲ್ಲಿನ ಸ್ಥಳೀಯ ನಾಯಕರನ್ನು ರಾಜಕೀಯ ಪಕ್ಷಗಳು ಸತತವಾಗಿ ಕಡೆಗಣಿಸುತ್ತಾ ಬಂದರೆ ಬಂಡಾಯದ ಸ್ಫೋಟ ಅನಿವಾರ್ಯವಾಗುವ ಸಾಧ್ಯತೆ ನಿಚ್ಚಳವಾಗಿದೆ.

ಮಾಜಿ ನಗರಸಭೆ ಸದಸ್ಯ ಧನಂಜಯ್ ಕುಮಾರ್ ಅವರು ಸಭೆಯಲ್ಲಿ ವ್ಯಕ್ತಪಡಿಸಿದ ನೋವು ಪ್ರತಿಯೊಬ್ಬ ಸ್ವಾಭಿಮಾನಿ ಹಿರಿಯೂರು ನಾಗರಿಕನ ಧ್ವನಿಯಾಗಿದೆ. "ಹಣವಿದ್ದರೆ ಹಿರಿಯೂರು ಕ್ಷೇತ್ರವನ್ನು ಕೊಂಡುಕೊಳ್ಳಬಹುದು" ಎಂಬ ಮಾಧ್ಯಮಗಳ ವಿಶ್ಲೇಷಣೆಗಳು ಪ್ರಜಾಪ್ರಭುತ್ವದ ಆಶಯಗಳಿಗೇ ಧಕ್ಕೆ ತರುವಂಥದ್ದು. ಹಿರಿಯೂರು ಎಂದರೆ ಕೇವಲ ಹಣಬಲ, ತೋಳ್ಬಲದ ರಾಜಕಾರಣಿಗಳು ಬಂದು ಆಳ್ವಿಕೆ ನಡೆಸಿ ಹೋಗುವ ಜಾಗವಲ್ಲ. ಅದು ವಿ.ವಿ. ಸಾಗರದ ನೀರುಣ್ಣುವ, ಹತ್ತಾರು ಜಲ ಹೋರಾಟಗಳನ್ನು ಕಂಡ, ನಿಷ್ಠಾವಂತ ಕಾರ್ಯಕರ್ತರ ಬೆವರಿನಿಂದ ಕಟ್ಟಿದ ಸತ್ವಯುತ ಭೂಮಿ. ಇಂತಹ ಕ್ಷೇತ್ರದಲ್ಲಿ ಗನ್ನಾಯಕನಹಳ್ಳಿ ಆರ್. ಮಂಜುನಾಥ್ ಅವರಂತಹ ಸ್ಥಳೀಯ, ಪಕ್ಷಕ್ಕಾಗಿ ದುಡಿದ ಹಿರಿಯ ಮುಖಂಡರನ್ನು ಮುಂಚೂಣಿಗೆ ತರಬೇಕು ಎಂಬ ಆಗ್ರಹದಲ್ಲಿ ರಾಜಕೀಯ ನ್ಯಾಯವಿದೆ.

ಮತ್ತೊಂದೆಡೆ, ನಗರಸಭೆ ಮಾಜಿ ಸದಸ್ಯ ಪದ್ಮನಾಭ ಅವರು ಪ್ರಸ್ತಾಪಿಸಿದ 'ಬಹುಸಂಖ್ಯಾತ ಜಾತಿಗಳ ಕಡೆಗಣನೆ' ಹಾಗೂ 'ಲೋಕಸಭಾ ಚುನಾವಣೆಯ ಹಿನ್ನಡೆ'ಯ ವಿಶ್ಲೇಷಣೆ ಕಾಂಗ್ರೆಸ್ ಹೈಕಮಾಂಡ್‌ಗೆ ಅತ್ಯಂತ ಎಚ್ಚರಿಕೆಯ ಪಾಠವಾಗಿದೆ. ಸ್ಥಳೀಯ ಸಾಮಾಜಿಕ ಸಮೀಕರಣಗಳನ್ನು ಮತ್ತು ಬಹುಸಂಖ್ಯಾತ ಕುಂಚಿಟಿಗ, ಕಾಡುಗೊಲ್ಲ ಸಮುದಾಯಗಳನ್ನು ಕಡೆಗಣಿಸಿ, ಹೊರಗಿನವರು, ಹಣವಂತರು, ಕೇವಲ ಪ್ರಭಾವಿ ನಾಯಕರ ಒಲವು ಅಥವಾ ವಲಸಿಗರ ಹಿತಾಸಕ್ತಿ ಕಾಯಲು ಹೋದರೆ ಪಕ್ಷ ತಳಮಟ್ಟದಲ್ಲಿ ಹೇಗೆ ದುರ್ಬಲಗೊಳ್ಳುತ್ತದೆ ಎಂಬುದಕ್ಕೆ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶವೇ ಕಣ್ಣೆದುರಿನ ಸಾಕ್ಷಿಯಾಗಿದೆ. ತಳಮಟ್ಟದ ಕಾರ್ಯಕರ್ತರನ್ನು ಕಡೆಗಣಿಸಿ ಚುನಾವಣೆ ಗೆಲ್ಲುವುದು ಅಸಾಧ್ಯ ಎಂಬ ಸತ್ಯವನ್ನು ರಾಜ್ಯ ನಾಯಕತ್ವ ಅರಿಯಬೇಕಿದೆ.

ಎಚ್.ಆರ್. ತಿಮ್ಮಯ್ಯ ಅವರು ನೆನಪಿಸಿದ ಭದ್ರಾ ಮೇಲ್ದಂಡೆ ಯೋಜನೆ ಮತ್ತು ವಿ.ವಿ. ಸಾಗರಕ್ಕಾಗಿ ನಡೆದ 541 ದಿನಗಳ ಸತ್ಯಾಗ್ರಹದ ಇತಿಹಾಸವು, ಹಿರಿಯೂರಿನ ಜನಸಾಮಾನ್ಯರ ಹೋರಾಟದ ಗುಣವನ್ನು ನೆನಪಿಸುತ್ತದೆ. ಈ ಮಣ್ಣಿನ ಹೋರಾಟದ ತೀವ್ರತೆ ಗೊತ್ತಿರುವುದು ಇಲ್ಲಿನ ತಳಮಟ್ಟದ ನಾಯಕರಿಗೇ ಹೊರತು, ಕೇವಲ ಚುನಾವಣೆಯ ಹೊತ್ತಿಗೆ ಬಂದು ಹೋಗುವ ವಲಸಿಗರಿಗಲ್ಲ.

ಈಗ ಚೆಂಡು ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ರಾಜ್ಯ ನಾಯಕತ್ವದ ಅಂಗಳದಲ್ಲಿದೆ. ಹಿರಿಯೂರು ಕಾಂಗ್ರೆಸ್‌ನ ಈ ಸಮಾನ ಮನಸ್ಕರ, ಹಿರಿಯರ ಮತ್ತು ಚಿಂತಕರ ಒಕ್ಕೊರಲಿನ ಎಚ್ಚರಿಕೆಯನ್ನು ಕೇವಲ ಆಂತರಿಕ ಅಸಮಾಧಾನ ಎಂದು ನಿರ್ಲಕ್ಷಿಸಿದರೆ, ಅದು ಮುಂಬರುವ ಉಪಸಮರದಲ್ಲಿ ಪಕ್ಷಕ್ಕೆ ಭಾರಿ ಮುಖಭಂಗ ತರಬಲ್ಲದು. ಹಿರಿಯೂರಿನ ಸ್ವಾಭಿಮಾನಕ್ಕೆ ಮಣೆ ಹಾಕಿ, ಸ್ಥಳೀಯ ನಿಷ್ಠಾವಂತ ನಾಯಕನಿಗೆ ಬಿ-ಫಾರಂ ನೀಡುತ್ತಾರೋ ಅಥವಾ ಹಣಬಲ-ಪ್ರಭಾವದ ಹಳೇ ಹಾದಿಯನ್ನೇ ಹಿಡಿದು ರಾಜಕೀಯ ದುರಂತಕ್ಕೆ ಹಾದಿ ಮಾಡಿಕೊಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಹಿರಿಯೂರಿನ ವೈಟ್ ವಾಲ್ ಸಭೆ ಇಡೀ ಜಿಲ್ಲೆಯ ರಾಜಕಾರಣಕ್ಕೊಂದು ಹೊಸ ದಿಕ್ಸೂಚಿಯನ್ನಂತೂ ನೀಡಿದೆ.

 

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು