ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ವಿಧಾನಸೌಧದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯದ ಆರ್ಥಿಕ ಶಿಸ್ತು, ಪ್ರಗತಿ ಹಾಗೂ ಪ್ರಮುಖ ಯೋಜನೆಗಳ ಅನುಷ್ಠಾನದ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಯಿತು.
ಗ್ಯಾರಂಟಿ ಮತ್ತು ಅಭಿವೃದ್ಧಿ ಯೋಜನೆಗಳ ಸಮನ್ವಯ:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಿಗೆ ನಿರಂತರವಾಗಿ ಅನುದಾನ ಒದಗಿಸುವ ಜೊತೆಯಲ್ಲೇ, ರಾಜ್ಯದ ಮೂಲಸೌಕರ್ಯ ಹಾಗೂ ಇತರೆ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೂ ಯಾವುದೇ ತೊಂದರೆಯಾಗದಂತೆ ಹಣಕಾಸು ನಿರ್ವಹಣೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಗ್ಯಾರಂಟಿ ಹಾಗೂ ಅಭಿವೃದ್ಧಿ ಎರಡನ್ನೂ ಸಮಾನವಾಗಿ ಕೊಂಡೊಯ್ಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಬಜೆಟ್ ಅನುಷ್ಠಾನ: ಪ್ರಸಕ್ತ ಸಾಲಿನ ಆಯವ್ಯಯದಲ್ಲಿ (ಬಜೆಟ್) ಘೋಷಿಸಲಾದ ಯೋಜನೆಗಳ ಅನುಷ್ಠಾನದ ಪ್ರಸ್ತುತ ಸ್ಥಿಗತಿ ಹಾಗೂ ಅದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲಗಳ ಕುರಿತು ಪರಾಮರ್ಶೆ ನಡೆಸಲಾಯಿತು.
ತೆರಿಗೆ ಸಂಗ್ರಹಕ್ಕೆ ವೇಗ: ರಾಜ್ಯದ ಸ್ವಂತ ತೆರಿಗೆ ಆದಾಯವನ್ನು ಹೆಚ್ಚಿಸಲು ವಿವಿಧ ಇಲಾಖೆಗಳ ತೆರಿಗೆ ಸಂಗ್ರಹದ ಗುರಿಯನ್ನು ಪರಿಶೀಲಿಸಲಾಯಿತು ಮತ್ತು ಪ್ರಗತಿಯನ್ನು ಚುರುಕುಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು.
ಆಸ್ತಿ ಸೃಜನೆ: ಸರ್ಕಾರದ ಆದಾಯ ಮೂಲಗಳನ್ನು ವೃದ್ಧಿಸಲು ಮತ್ತು ರಾಜ್ಯದ ಆರ್ಥಿಕತೆಯನ್ನು ಬಲಪಡಿಸಲು ಹೊಸ ಆಸ್ತಿ ಸೃಜನೆಗೆ ಒತ್ತು ನೀಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ರಾಜ್ಯದ ಒಟ್ಟಾರೆ ಆರ್ಥಿಕ ಪ್ರಗತಿಯನ್ನು ಉತ್ತಮ ಸ್ಥಿತಿಯಲ್ಲಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯದ ಹಣಕಾಸು ಪರಿಸ್ಥಿತಿಯ ಸಂಪೂರ್ಣ ಚಿತ್ರಣವನ್ನು ನೀಡಿದರು. ಸಾರ್ವಜನಿಕ ಹಣದ ಸದ್ಬಳಕೆ ಹಾಗೂ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಬದ್ಧವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಮಾರ್ಗದರ್ಶನ ನೀಡಲಾಯಿತು.



