ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಮುಖಂಡ ಅಬ್ದುಲ್ ಜಬ್ಬಾರ್ ಅವರ ಅಮಾನತು ಆದೇಶವನ್ನು ಹಿಂಪಡೆಯುವ ಕುರಿತು ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ಕುಮಾರಪಾರ್ಕ್‌ನಲ್ಲಿರುವ ಡಿಸಿಎಂ ಅವರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, "ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ದಲಿತರು ಮತ್ತು ಅಲ್ಪಸಂಖ್ಯಾತರು ನಮ್ಮ ಪ್ರಮುಖ ಮತದಾರರು. ಕೆಲವೊಮ್ಮೆ ತರಾತುರಿಯಲ್ಲಿ ನಿರ್ಧಾರಗಳಾಗುತ್ತವೆ, ಅವುಗಳನ್ನು ಸರಿಪಡಿಸಿ ಡ್ಯಾಮೇಜ್ ಕಂಟ್ರೋಲ್ ಮಾಡುವುದು ನಮ್ಮ ಉದ್ದೇಶ. ಅಬ್ದುಲ್ ಜಬ್ಬಾರ್ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲಿ, ಹೈಕಮಾಂಡ್ ಅನುಮೋದನೆ ನೀಡಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು," ಎಂದು ತಿಳಿಸಿದರು.
ಶಿಸ್ತು ಮುಖ್ಯ, ದೆಹಲಿ ಸೂಚನೆಯಂತೆ ಕ್ರಮ: ಡಿ.ಕೆ. ಶಿವಕುಮಾರ್
ಇದೇ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ಅಬ್ದುಲ್ ಜಬ್ಬಾರ್ ಅವರ ಮೇಲಿನ ಕ್ರಮವು ವೈಯಕ್ತಿಕ ನಿರ್ಧಾರವಲ್ಲ, ಬದಲಾಗಿ ಹೈಕಮಾಂಡ್ ಮತ್ತು ಪಕ್ಷದ ವರದಿಗಳ ಆಧಾರದ ಮೇಲೆ ತೆಗೆದುಕೊಂಡ ಶಿಸ್ತು ಕ್ರಮವಾಗಿದೆ ಎಂದು ಸ್ಪಷ್ಟಪಡಿಸಿದರು. "ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ನಮ್ಮ ಪಕ್ಷ ಯಾವಾಗಲೂ ಪರಿಶಿಷ್ಟರು, ಅಲ್ಪಸಂಖ್ಯಾತರು ಮತ್ತು ಅಹಿಂದ ವರ್ಗಗಳ ಪರವಾಗಿದೆ. ಎಲ್ಲರೂ ನನ್ನ ಮೇಲೆ ದೂಷಣೆ ಮಾಡಬಹುದು, ಅದಕ್ಕೆ ನಾನೇನು ತಲೆಕೆಡಿಸಿಕೊಳ್ಳುವುದಿಲ್ಲ," ಎಂದರು.
ನಮ್ಮಲ್ಲಿರುವುದು ಒಂದೇ ಗುಂಪು - ಅದು ಕಾಂಗ್ರೆಸ್ ಗುಂಪು!
ಪಕ್ಷದಲ್ಲಿ ಗುಂಪುಗಾರಿಕೆ ಇದೆ ಎಂಬ ಸುದ್ದಿಗಳ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, "ಸಿದ್ದರಾಮಯ್ಯ ಗುಂಪು ಅಥವಾ ಡಿ.ಕೆ. ಶಿವಕುಮಾರ್ ಗುಂಪು ಎನ್ನುವುದು ಮಾಧ್ಯಮಗಳ ಸೃಷ್ಟಿ. ನಮ್ಮ 146 ಶಾಸಕರೂ ಒಂದೇ ಗುಂಪಿನವರು. ನಾನು ಮತ್ತು ಮುಖ್ಯಮಂತ್ರಿಗಳು ಪ್ರತಿದಿನ ಭೇಟಿಯಾಗಿ ಚರ್ಚಿಸುತ್ತೇವೆ. ಯಾರೂ ತಮ್ಮ ಮನೆಯ ಮುಂದೆ ಇಂತದ್ದೇ ಗುಂಪು ಎಂದು ಬೋರ್ಡ್ ಹಾಕಿಕೊಂಡಿಲ್ಲ. ಕಾಂಗ್ರೆಸ್‌ನಲ್ಲಿ ಇರುವುದು ಒಂದೇ ಗುಂಪು, ಅದು 'ಕಾಂಗ್ರೆಸ್ ಗುಂಪು'," ಎಂದು ವದಂತಿಗಳಿಗೆ ತೆರೆ ಎಳೆದರು.



