ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡುವ ಬಣ ಒಂದಾದರೆ ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿಯುವ ಕಾರ್ಯಕರ್ತರ ಬಣ ಒಂದಾಗಿದೆ ಇವೆರಡನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ದೊಡ್ಡತನವನ್ನು ಜಿಲ್ಲಾಧ್ಯಕ್ಷರು ತೋರಬೇಕಿದೆ ಎಂದು ರಾಜ್ಯ ಜೆಡಿಎಸ್ ಪ್ರಮುಖರಾದ ಹುಸ್ಕೂರ್ ಆನಂದ್ ತಿಳಿಸಿದರು.
ದೊಡ್ಡ ಬೆಳವಂಗಲ ಗ್ರಾಮದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಜಾತ್ಯತೀತ ಜನತಾ ದಳದ ೨೫ನೇ ವರ್ಷದ ಬೆಳ್ಳಿಹಬ್ಬದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ ತಾಲ್ಲೂಕಿನ ಜೆಡಿಎಸ್ ಪ್ರಮುಖರಾದ ಬಿ ಮುನೇಗೌಡ ಅವರ ಜೊತೆ ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಳ್ಳಬೇಕಾಗಿದ್ದು ಜೆಡಿಎಸ್ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಭಾಗವಹಿಸುವ ಮೂಲಕ ನಮ್ಮ ಶಕ್ತಿ ತೋರಿಸಬೇಕು.ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಯಾರೋ ಕೆಲವರ ಅಭಿಪ್ರಾಯಗಳಿಗೆ ಮನ್ನಣೆ ನೀಡಿರುವ ಜಿಲ್ಲಾಧ್ಯಕ್ಷರ ದೋರಣೆ ಬದಲಿಸಿ ಕೊಳ್ಳಬೇಕಿದೆ. ಸುಮಾರು ವರ್ಷಗಳಿಂದ ಪಕ್ಷದ ಸರ್ವೋಚ್ಚ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡರ ಮೇಲೆ ವಿಶ್ವಾಸವಿಟ್ಟು ವಿರೋಧ ಪಕ್ಷಗಳ ಯಾವುದೇ ಆಮಿಷಗಳಿಗೆ ಬಲಿಯಾಗದೆ ಪಕ್ಷಕ್ಕಾಗಿ ದುಡಿದಿರುವ ಸಾವಿರಾರು ಕಾರ್ಯಕರ್ತರು ದೊಡ್ಡಬಳ್ಳಾಪುರ ತಾಲೂಕಿನಲ್ಲಿದ್ದಾರೆ ಅಂತವರನ್ನು ಗುರ್ತಿಸಿ ಅವರಿಗೆ ಪಕ್ಷದ ಉನ್ನತ ಸ್ಥಾನಮಾನಗಳನ್ನು ನೀಡಿದರೆ ಜೆಡಿಎಸ್ ತಾಲೂಕಿನಲ್ಲಿ ಮತ್ತಷ್ಟು ಪ್ರಬಲವಾಗಲಿದೆ. ಇದನ್ನು ಪಕ್ಷದ ವರಿಷ್ಟರು ಗಮನಿಸಬೇಕಿದೆ. ತಾಲೂಕಿನ ಪಕ್ಷದ ಸಂಘಟನೆ ಬಗ್ಗೆ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ರವರ ಬಳಿ ಚರ್ಚಿಸಲಾಗಿ ರಜತೋತ್ಸವ ಕಾರ್ಯಕ್ರಮದ ನಂತರ ಸರಿಪಡಿಸುವ ಬರವಸೆಯನ್ನು ನಿಖಿಲ್ ಕುಮಾರಸ್ವಾಮಿ ರವರು ನೀಡಿದ್ದಾರೆ. ಹಾಗಾಗಿ ಪಕ್ಷದ ಎಲ್ಲಾ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ಪಕ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸೋಣ ಎಂದು ಹುಸ್ಕೂರ್ ಆನಂದ್ ಹೇಳಿದರು.
ಯುವ ಜೆಡಿಎಸ್ ಮುಖಂಡರಾದ ಶ್ರೀನಿವಾಸ್ ಗೌಡ ಮಾತನಾಡಿ ಇದು ನಿಷ್ಠಾವಂತ ಕಾರ್ಯಕರ್ತರ ಒಗ್ಗೂಡಿಸುವ ಕಾರ್ಯ. ನಮ್ಮನಾಯಕರಾದ ಹುಸ್ಕೂರ್ ಆನಂದ್ ರವರ ನೇತೃತ್ವದಲ್ಲಿ ಮಾಡುತ್ತಿದ್ದೇವೆ, ಮೇ ೦೮ರಂದು ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದು ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ನಿಷ್ಠಾವಂತ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿದೆ ಎಂದು ಹೇಳಿದರು.
ನಿರ್ಮಾಕರಾದ ಪುಟ್ಟರಾಜುಗೌಡ ಮಾತನಾಡಿ ಮುನೇಗೌಡ ಹಾಗೂ ಚೆನ್ನಿಗಪ್ಪ ನಡುವೆ ಪ್ರಾರಂಭವಾದ ಒಡಕು ಇಂದಿಗೂ ಸಾಗುತ್ತಿದೆ. ಈ ಬಿನ್ನಾಭಿಪ್ರಾಯವನ್ನು ನಾವು ಸರಿಪಡಿಸುತ್ತೇವೆ. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಾವು ಪಕ್ಷಕ್ಕಾಗಿ ೩೦ವರ್ಷಗಳಿಂದ ನಿರಂತರವಾಗಿ ದುಡಿದಿದ್ದೇವೆ. ನಮ್ಮ ತಾಲ್ಲೂಕಿನಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯ ನಡೆಯಲಿದೆ.
ನಾವು ಯಾರ ವಿರೋಧಿಗಳಲ್ಲ. ನಮ್ಮ ಅಗ್ರಹ ಇಷ್ಟೇ ಎಲ್ಲರ ಜೊತೆಗೂಡಿ ಪಕ್ಷ ಸಂಘಟನೆ ಮಾಡಿ ಎಂಬುದಷ್ಟೇ. ನಮ್ಮಿಂದ ಮೇ ೦೮ರ ಬೆಳ್ಳಿಹಬ್ಬ ಕಾರ್ಯಕ್ರಮಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ .ಎಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದರು.
ವಕೀಲರಾದ ಸತೀಶ್ ಮಾತನಾಡಿ ಕಳೆದ ೩೫ವರ್ಷಗಳಿಂದ ನಿರಂತರವಾಗಿ ಪಕ್ಷ ಕಟ್ಟುವ ಕೆಲಸ ಮಾಡಿದ್ದೇವೆ. ಈವರೆಗೂ ಯಾವುದೇ ಅಧಿಕಾರ ಬಯಸದೆ ಪಕ್ಷ ನಿಷ್ಠೆಯಿಂದ ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸಿದ್ದೇವೆ. ಕಳೆದ ಬಮೂಲ್ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಇಂದು ಅಧಿಕಾರ ನೀಡಿರುವುದು ನಮಗೆ ನೋವುಂಟುಮಾಡಿದೆ. ಪಕ್ಷದ ರಾಜ್ಯ ವರಿಷ್ಟರ ಹಾಗೂ ಜಿಲ್ಲಾ ವರಿಷ್ಟರ ಆದೇಶದ ಮೇರೆಗೆ ಹುಸ್ಕೂರ್ ಆನಂದ್ ಚುನಾವಣೆಗೆ ಸ್ಪರ್ದಿಸಿದ್ದರು.ಆದರೆ ಅವರಿಗೆ ಕೊಟ್ಟ ಬಳುವಳಿ ಸೋಲು. ಅವರ ವಿರುದ್ಧ ಕೆಲಸ ಮಾಡಿ ಪಕ್ಷದ ಸೋಲಿಗೆ ಕಾರಣರಾದವರೇ ಇಂದು ಅಧಿಕಾರ ಪಡೆದ್ದಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ.
ಇಂದು ತಾಲ್ಲೂಕಿನಲ್ಲಿ ಜೆಡಿಎಸ್ ತನ್ನ ಶಕ್ತಿ ಕಳೆದುಕೊಳ್ಳಲು ಪಕ್ಷ ವಿರೋಧಿ ಚಟುವಟಿಕೆಗಳೇ ಕಾರಣ.ಇನ್ನಾದರೂ ಇಂತಹ ಕಾರ್ಯಗಳು ನಿಲ್ಲಬೇಕು ನಾವು ಸಾಕಷ್ಟು ಸೋಲು ಕಂಡಿದ್ದೇವೆ. ಆದರೂ ಇಂದಿಗೂ ನಾವು ಜೆಡಿಎಸ್ ಪಕ್ಷ ಬಿಟ್ಟಿಲ್ಲ.ಇಂದಿಗೂ ಶಾಲು ಹಾಕುತ್ತೇವೆ ಅಂದರೆ ಅದು ದೇವೇಗೌಡರ ಮೇಲಿನ ಗೌರವ , ಎಚ್ ಡಿ ಕುಮಾರಸ್ವಾಮಿಯವರ ಮೇಲಿನ ಭರವಸೆ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ಮೇಲಿನ ಭವಿಷ್ಯದ ಆಶಯ. ಅದನ್ನು ಉಳಿಸುವ ಕಾರ್ಯ ವರಿಷ್ಠರಿಂದ ಆಗಬೇಕಿದೆ ಎಂದರು.
ಸ್ಥಳೀಯ ಮುಖಂಡ ಹನುಮಂತರಾಜು ಮಾತನಾಡಿ ಮೇ ೦೮ರ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕು ಜೆಡಿಎಸ್ ಶಕ್ತಿಯನ್ನು ರಾಜ್ಯಕ್ಕೆ ತೋರಿಸುವ ಕಾರ್ಯ ನಮ್ಮೆಲ್ಲರಿಂದ ಆಗಬೇಕಿದೆ. ತಾಲ್ಲೂಕಿನ ಪ್ರತಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ತಪ್ಪದೆ ಭಾಗವಹಿಬೇಕು ಜೆಡಿಎಸ್ ಕಾರ್ಯಕರ್ತರ ಒಗ್ಗಟಿನ ಪ್ರದರ್ಶನವಾಗಬೇಕಿದೆ ಎಂದು ತಿಳಿಸಿದರು.
ಚನ್ನೇಗೌಡ ಮಾತನಾಡಿ ದೊಡ್ಡಬೆಳವಂಗಲ ಭಾಗದಲ್ಲಿ ಪ್ರಮುಖವಾಗಿ ಹುಸ್ಕೂರ್ ಆನಂದ್ ಅವರು ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಪಾತ್ರವಿದೆ.ಇತ್ತೀಚಿನ ದಿನಗಳಲ್ಲಿ ಪಕ್ಷದ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರ ನೇಮಕಾತಿ ಸಮಯದಲ್ಲಿ ಸ್ಥಳೀಯ ಪ್ರಮುಖರ ಅಭಿಪ್ರಾಯ ಪಡೆಯದೇ ನಿರ್ಣಯ ಕೈಗೊಂಡಿರುವುದು ಸರಿಯಿಲ್ಲ.ಮುಂದೆ ತಾಲ್ಲೂಕಿನ ಮುಖಂಡರಾದ ಮುನೇಗೌಡ ಹಾಗೂ ಹುಸ್ಕೂರ್ ಆನಂದ್ ರವರನ್ನ ಜೊತೆಗೂಡಿ ಪಕ್ಷ ಚಟುವಟಿಕೆ ಹಾಗೂ ಸಂಘಟನೆಗೆ ಮುಂದಾಗಬೇಕು ಎಂದರು.
ಸುದ್ದಿ ಗೋಷ್ಠಿಯಲ್ಲಿ ರಾಜಣ್ಣ ಹನುಮಂತ ರಾಜು, ಸುರೇಶ, ಮೂರ್ತಿ, ನಾರಾಯಣ ಸ್ವಾಮಿ, ಅಶ್ವಥ್ ನಾರಾಯಣ್, ರಾಜು, ನಾಗರಾಜ್ ಹನುಮಂತರಾಯಪ್ಪ, ಜಗದೀಶ್, ಪುನೀತ್ ಅಪ್ಪು ಸೇರಿದಂತೆ ಬೆಳವಂಗಲ ಹೋಬಳಿಯ ಹಲವು ಪ್ರಮುಖರು ಹಾಜರಿದ್ದರು.


