ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ನಿಷ್ಠಾವಂತ ರಾಜಕಾರಿಣಿ ಪ್ರಸ್ತುತ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿವ ದಲಿತ ಸಮುದಾಯದ ಹಿರಿಯ ನಾಯಕರಾದ ಕೆ. ಹೆಚ್. ಮುನಿಯಪ್ಪ ನವರಿಗೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ನೂತನ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಹಾಗು ಕೆ ಹೆಚ್. ಮುನಿಯಪ್ಪ ಅಭಿಮಾನಿಗಳ ಸಂಫದ ಅಧ್ಯಕ್ಷರು ಆರ್ ವಿ. ಮಹೇಶ ಕಾಂಗ್ರೇಸ್ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ 7 ಬಾರಿ 1991ರಿಂದ 2006 ರವರೆಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ. ಯುಪಿಎ ಸರ್ಕಾರದಲ್ಲಿ ಕೇಂದ್ರದ ಸಂಪುಟದಲ್ಲಿ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಉದ್ಯಮಗಳ ಸಚಿವರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ ದಲಿತ ಸಮುದಾಯದ ದನಿಯಾಗಿ ದಶಕಗಳಿಂದ ಶೋಷಿತ ವರ್ಗಗಳ ಹಕ್ಕಿಗಾಗಿ ನಿರಂತರ ಹೋರಾಟ ಮಾಡಿ ಸಾಮಾಜಿಕ ನ್ಯಾಯದ ಪರವಾಗಿ ನಿಂತ ನಾಯಕರಾಗಿದ್ದಾರೆ.
ತಮ್ಮ ಸಂಪೂರ್ಣ ಜೀವನವನ್ನು ಕಾಂಗ್ರೇಸ್ ಪಕ್ಷಕ್ಕೆ ಮುಡುಪಾಗಿಟ್ಟು ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಕೇಂದ್ರ ಸರ್ಕಾರದ ಸಚಿವರಾಗಿದ್ದಾಗ ಕರ್ನಾಟಕಕ್ಕೆ ಹಲವು ಯೋಜನೆ ತಂದು ಕೊಡುಗೆ ನೀಡಿದ್ದಾರೆ.
ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವ ಮುನಿಯಪ್ಪ ಅವರು, ಪಕ್ಷದ ಆಂತರಿಕ ರಾಜಕೀಯ ಬಿಕ್ಕಟ್ಟು ಹಾಗೂ ಭಿನ್ನಮತದ ಸಂದರ್ಭಗಳಲ್ಲೂ ಪಕ್ಷದಲ್ಲೇ ಮುಂದುವರಿದು ಪಕ್ಷವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಕ್ಷದ ಹೈ ಕಮಾಂಡ್‌ನ ಸೂಚನೆಗಳಿಗೆ ಗೌರವ ನೀಡಿ, ಪಕ್ಷದ ನಾಯಕರೊಂದಿಗೆ ಸದಾ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.
ಸಾಮಾಜಿಕ ನ್ಯಾಯದ ಬದ್ದತೆಯನ್ನು ಎತ್ತಿ ಹಿಡಿಯುವ ಕಾಂಗ್ರೆಸ್ ಪಕ್ಷವು, ಹಿರಿಯ ದಲಿತ ನಾಯಕರಾದ ಮುನಿಯಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ರಾಜ್ಯದ ದಲಿತ, ಹಿಂದುಳಿದ ಹಾಗೂ ಶೋಷಿತ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಕಾಂಗ್ರೆಸ್ ನ ರಾಷ್ಟ್ರ ಮತ್ತು ರಾಜ್ಯಗಳ ಮುಖಂಡರಲ್ಲಿ ಆರ್ ವಿ ಮಹೇಶ್ ಮನವಿ ಮಾಡಿದ್ದಾರೆ.



