ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೇಮಕಾತಿ ಅಕ್ರಮ ಮತ್ತು ವಿಳಂಬದಿಂದ ವಿವಾದಕ್ಕೆ ಗುರಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್ಸಿ) ಕಾಯಕಲ್ಪ ನೀಡಲು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದ ವಿಧಾನಮಂಡಲದ ಸಮಿತಿ ಮುಂದಾಗಿದೆ. ಆಯೋಗದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರಲು ಸಮಿತಿಯು ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರಿಗೆ ಇತ್ತೀಚೆಗೆ ಮಹತ್ವದ ಶಿಫಾರಸುಗಳ ವರದಿಯನ್ನು ಸಲ್ಲಿಸಿದೆ.
ಸಮಿತಿಯ ಪ್ರಮುಖ ಶಿಫಾರಸುಗಳು: ರಾಜಕೀಯೇತರ ನೇಮಕ:
ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆಗೆ ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ವಿಪಕ್ಷ ನಾಯಕರನ್ನು ಒಳಗೊಂಡ ಸಮಿತಿ ರಚಿಸಬೇಕು. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು, ಕುಲಪತಿಗಳು ಹಾಗೂ ನಿವೃತ್ತ ಹಿರಿಯ ಅಧಿಕಾರಿಗಳಿಗೆ ಆದ್ಯತೆ ನೀಡಬೇಕು.
ಹುದ್ದೆಗಳ ವಿಂಗಡಣೆ: ಕೆಪಿಎಸ್ಸಿಯನ್ನು ಕೇವಲ ಗ್ರೂಪ್ 'ಎ' ಮತ್ತು 'ಬಿ' ಹುದ್ದೆಗಳ ನೇಮಕಾತಿಗೆ ಸೀಮಿತಗೊಳಿಸಿ, ಗ್ರೂಪ್ 'ಸಿ' ಹಾಗೂ ಒಎಂಆರ್ ಪರೀಕ್ಷೆಗಳ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸಬೇಕು. ವಿವಿಧ ಇಲಾಖೆಗಳ ಎಂಜಿನಿಯರ್ ಹುದ್ದೆಗಳಿಗೆ ಒಂದೇ ಸಾಮಾನ್ಯ ಪರೀಕ್ಷೆ ನಡೆಸಬೇಕು.
ಪಾರದರ್ಶಕ ಪರೀಕ್ಷೆ ಹಾಗೂ ಮೌಲ್ಯಮಾಪನ: ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕಂಪ್ಯೂಟರೀಕೃತ ಪ್ರಶ್ನೆ ಬ್ಯಾಂಕ್ ಸ್ಥಾಪಿಸಿ, ಪರೀಕ್ಷಾ ನಿಯಂತ್ರಕರಿಗೆ ನೇರ ಹೊಣೆಗಾರಿಕೆ ನಿಗದಿಪಡಿಸಬೇಕು. ಪರೀಕ್ಷೆ ನಡೆದ ದಿನವೇ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದರ ಜೊತೆಗೆ, ಕೀ ಉತ್ತರ ಪ್ರಕಟಿಸಬೇಕು.
ಯುಪಿಎಸ್ಸಿ ಮಾದರಿ ವೇಳಾಪಟ್ಟಿ: ವರ್ಷದ ಆರಂಭದಲ್ಲೇ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿ, ಪ್ರತಿವರ್ಷ ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕು. ಸಂದರ್ಶನ ಸಮಿತಿಯಲ್ಲಿ ಒಬ್ಬ ಕೆಪಿಎಸ್ಸಿ ಸದಸ್ಯ ಹಾಗೂ ಮೂವರು ತಜ್ಞರು ಮಾತ್ರ ಇರಬೇಕು.
ತಂತ್ರಜ್ಞಾನ ಮತ್ತು ಆಡಳಿತ ಸುಧಾರಣೆ: ಅಭ್ಯರ್ಥಿಗಳಿಗೆ 'ಒಮ್ಮೆ ಮಾತ್ರ ನೋಂದಣಿ' ವ್ಯವಸ್ಥೆ, ಪರೀಕ್ಷಾ ಕೇಂದ್ರಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಗೂ ಮುಖ ಚಹರೆ ದೃಢೀಕರಣ ಕಡ್ಡಾಯಗೊಳಿಸಬೇಕು. ಗುತ್ತಿಗೆ ಸಿಬ್ಬಂದಿ ನೇಮಕಾತಿ ರದ್ದುಪಡಿಸಿ, ಪ್ರಮುಖ ಅಧಿಕಾರಿಗಳಿಗೆ ಕನಿಷ್ಠ ಮೂರು ವರ್ಷಗಳ ಸೇವಾವಧಿ ನಿಗದಿಪಡಿಸಬೇಕು.
ನೇಮಕಾತಿ ಪ್ರಕ್ರಿಯೆಯಲ್ಲಿ ಹೊಣೆಗಾರಿಕೆ ಹೆಚ್ಚಿಸುವ ಉದ್ದೇಶದಿಂದ ಈ ವರದಿ ಸಿದ್ಧಪಡಿಸಲಾಗಿದ್ದು, ಸರ್ಕಾರದ ಮುಂದಿನ ನಿರ್ಧಾರದತ್ತ ಉದ್ಯೋಗಾಕಾಂಕ್ಷಿಗಳ ಚಿತ್ತ ನೆಟ್ಟಿದೆ.




