ಚಂದ್ರವಳ್ಳಿ ನ್ಯೂಸ್, ಮೈಸೂರು:
ವಿಶೇಷ ಲೇಖನ | ನವೆಂಬರ್ ೨೬ – ಸಂವಿಧಾನ ದಿನ ರಚನೆ:
"ಭಾರತದ ಸಂವಿಧಾನವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲಕ ಪ್ರತಿಯೊಬ್ಬ ಪ್ರಜೆಗೂ ಘನತೆಯ ಬದುಕಿನ ಭರವಸೆ ನೀಡುವ ಪ್ರಜಾಪ್ರಭುತ್ವದ ಭದ್ರ ತಳಹದಿಯಾಗಿದೆ. ಅದರ ಆಶಯಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಹಕ್ಕುಗಳ ಗೌರವ ಮತ್ತು ಕರ್ತವ್ಯಗಳ ಪಾಲನೆಯ ಮೂಲಕ ದೈನಂದಿನ ಬದುಕಿನಲ್ಲಿ ಸಾಕಾರಗೊಳಿಸುವುದೇ ಸಂವಿಧಾನ ದಿನದ ನಿಜವಾದ ಸಂದೇಶ."
ನ್ಯಾಯದ ನೆಲೆಯಲಿ ಬದುಕು ಅರಳಲಿ
ಸಮಾನತೆಯ ಸೆಲೆಯಲಿ ನಾಡು ಬೆಳೆಯಲಿ
ಹಕ್ಕಿನ ಅರಿವಿನಲಿ ಕರ್ತವ್ಯ ಮೆರೆಯಲಿ
ಭಾರತದ ಏಕತೆ ಜಗದಲಿ ಹೊಳೆಯಲಿ.
ಮನುಷ್ಯನ ಬದುಕಿಗೆ ಉಸಿರು ಎಷ್ಟು ಮುಖ್ಯವೋ, ಒಂದು ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ ಸಂವಿಧಾನ ಅಷ್ಟೇ ಮುಖ್ಯ. ಅಧಿಕಾರಕ್ಕೆ ಮಿತಿ, ಆಡಳಿತಕ್ಕೆ ದಿಕ್ಕು, ಪ್ರಜೆಗಳಿಗೆ ಹಕ್ಕು, ಸಮಾಜಕ್ಕೆ ನ್ಯಾಯ ಮತ್ತು ಪ್ರತಿಯೊಬ್ಬರಿಗೂ ಘನತೆಯ ಬದುಕಿನ ಭರವಸೆ ನೀಡುವ ಶಕ್ತಿಯೇ ಸಂವಿಧಾನ. ಒಂದು ದೇಶದ ನಿಜವಾದ ಪ್ರಗತಿಯನ್ನು ಅದರ ಸಂಪತ್ತು, ವಿಜ್ಞಾನ, ತಂತ್ರಜ್ಞಾನ ಅಥವಾ ಅಭಿವೃದ್ಧಿಯ ಅಂಕಿಅಂಶಗಳಿಂದ ಮಾತ್ರ ಅಳೆಯಲಾಗದು. ಆ ದೇಶದಲ್ಲಿ ಸಾಮಾನ್ಯ ಪ್ರಜೆಗೆ ದೊರೆಯುವ ನ್ಯಾಯ, ದುರ್ಬಲರಿಗೆ ಸಿಗುವ ರಕ್ಷಣೆ, ಮಹಿಳೆಯರಿಗೆ ಲಭಿಸುವ ಸಮಾನ ಅವಕಾಶ ಮತ್ತು ಭಿನ್ನತೆಯ ನಡುವೆಯೂ ಜನರು ಹೊಂದಿರುವ ಸಹಬಾಳ್ವೆಯ ಮನೋಭಾವವೇ ಅದರ ನೈಜ ಪ್ರಗತಿಯ ಮಾನದಂಡ. ಇಂತಹ ಉದಾತ್ತ ಆಶಯಗಳಿಗೆ ಭದ್ರವಾದ ನೆಲೆ ಒದಗಿಸಿರುವ ಭಾರತದ ಸಂವಿಧಾನವನ್ನು ಸ್ಮರಿಸುವ ದಿನವೇ ನವೆಂಬರ್ ೨೬.
ಭಾರತದ ಸ್ವಾತಂತ್ರ್ಯವು ಹೊಸ ರಾಷ್ಟ್ರದ ಉದಯಕ್ಕೆ ನಾಂದಿ ಹಾಡಿದರೂ, ಅದರ ಮುಂದಿದ್ದ ಸವಾಲುಗಳು ಅಸಾಮಾನ್ಯ ವಾಗಿದ್ದವು. ಭಾಷೆ, ಧರ್ಮ, ಜಾತಿ, ಸಂಸ್ಕೃತಿ, ಸಂಪ್ರದಾಯ ಮತ್ತು ಪ್ರಾದೇಶಿಕ ವೈವಿಧ್ಯಗಳಿಂದ ಕೂಡಿದ ವಿಶಾಲ ದೇಶವನ್ನು ಏಕತೆಯ ಸೂತ್ರದಲ್ಲಿ ಬೆಸೆಯಬೇಕಿತ್ತು. ಶತಮಾನಗಳಿಂದ ಬೇರೂರಿದ್ದ ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ, ಶೋಷಣೆ ಮತ್ತು ಅನ್ಯಾಯಗಳನ್ನು ನಿವಾರಿಸಿ ಪ್ರತಿಯೊಬ್ಬರಿಗೂ ಸಮಾನ ಸ್ಥಾನಮಾನ ಕಲ್ಪಿಸಬೇಕಿತ್ತು. ಸ್ವಾತಂತ್ರ್ಯದ ಫಲವು ಸಮಾಜದ ಎಲ್ಲ ವರ್ಗಗಳಿಗೂ ತಲುಪಬೇಕು ಎಂಬ ಆಶಯಕ್ಕೆ ಕಾನೂನಿನ ಭದ್ರತೆ ನೀಡಬೇಕಿತ್ತು. ಈ ಐತಿಹಾಸಿಕ ಹೊಣೆಗಾರಿಕೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಸಂವಿಧಾನ ಸಭೆಯು ಮಹತ್ವದ ಕಾರ್ಯವನ್ನು ಕೈಗೊಂಡಿತು.
೧೯೪೬ರಲ್ಲಿ ರಚನೆಯಾದ ಸಂವಿಧಾನ ಸಭೆಯು ದೇಶದ ಭವಿಷ್ಯವನ್ನು ರೂಪಿಸುವ ಕಾರ್ಯದಲ್ಲಿ ತೊಡಗಿತು. ೧೯೪೭ರ ಆಗಸ್ಟ್ ೨೯ರಂದು ಕರಡು ಸಮಿತಿಯನ್ನು ರಚಿಸಿ, ಅದರ ಅಧ್ಯಕ್ಷರಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನೇಮಿಸಲಾಯಿತು. ಅವರ ಕಾನೂನು ಪಾಂಡಿತ್ಯ, ಆಳವಾದ ಅಧ್ಯಯನ, ದೂರದೃಷ್ಟಿ ಮತ್ತು ಸಾಮಾಜಿಕ ನ್ಯಾಯದ ಬಗೆಗಿನ ಬದ್ಧತೆ ಸಂವಿಧಾನದ ರೂಪುಗೊಳ್ಳುವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿತು. ಸಂವಿಧಾನ ಸಭೆಯ ಸದಸ್ಯರು ಅನೇಕ ಚರ್ಚೆ, ತಿದ್ದುಪಡಿ ಮತ್ತು ವಿಚಾರವಿಮರ್ಶೆಗಳ ಮೂಲಕ ಸಂವಿಧಾನವನ್ನು ರೂಪಿಸಿದರು. ಸುಮಾರು ಎರಡು ವರ್ಷ, ಹನ್ನೊಂದು ತಿಂಗಳು, ಹದಿನೆಂಟು ದಿನಗಳ ಪರಿಶ್ರಮದ ನಂತರ ೧೯೪೯ರ ನವೆಂಬರ್ ೨೬ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ೧೯೫೦ರ ಜನವರಿ ೨೬ರಂದು ಅದು ಜಾರಿಗೆ ಬಂತು. ಈ ಐತಿಹಾಸಿಕ ಅಂಗೀಕಾರದ ನೆನಪಿಗಾಗಿ ೨೦೧೫ರಿಂದ ನವೆಂಬರ್ ೨೬ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು ಸಾಮಾಜಿಕ ನ್ಯಾಯದ ಹೋರಾಟಕ್ಕೆ ಪ್ರೇರಣಾದಾಯಕ ಅಧ್ಯಾಯವಾ ಗಿದೆ. ಜಾತಿ ಆಧಾರಿತ ತಾರತಮ್ಯ ಮತ್ತು ಅವಮಾನಗಳನ್ನು ಎದುರಿಸಿದ ಅವರು ಶಿಕ್ಷಣವನ್ನು ವ್ಯಕ್ತಿಯ ಮತ್ತು ಸಮಾಜದ ವಿಮೋಚನೆಯ ಸಾಧನವೆಂದು ಪರಿಗಣಿಸಿದರು. ಸಮಾನತೆ, ಸ್ವಾಭಿಮಾನ, ಮಾನವ ಘನತೆ ಮತ್ತು ಅವಕಾಶಗಳ ನ್ಯಾಯಯುತ ಹಂಚಿಕೆ ಅವರ ಚಿಂತನೆಯ ಪ್ರಮುಖ ಆಶಯಗಳಾಗಿದ್ದವು. ಸಮಾಜದಲ್ಲಿ ಯಾರೂ ಹುಟ್ಟಿನಿಂದ ಮೇಲು ಅಥವಾ ಕೀಳಲ್ಲ, ಪ್ರತಿಯೊಬ್ಬರಿಗೂ ಗೌರವದಿಂದ ಬದುಕುವ ಹಕ್ಕಿದೆ ಎಂಬ ತತ್ವವನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಸಂವಿಧಾನ ರಚನೆಯಲ್ಲಿ ಅವರ ಪಾತ್ರವನ್ನು ಸ್ಮರಿಸುವುದರ ಜೊತೆಗೆ, ಅವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ಆಶಯಗಳನ್ನು ನಮ್ಮ ಬದುಕಿನಲ್ಲಿ ಸಾಕಾರಗೊಳಿಸುವುದು ಇಂದಿನ ಅಗತ್ಯವಾಗಿದೆ.

ಭಾರತೀಯ ಸಂವಿಧಾನದ ಪ್ರಸ್ತಾವನೆಯು ರಾಷ್ಟ್ರದ ಮೂಲ ಆಶಯಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ. ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವೆಂಬ ಭಾರತದ ಸ್ವರೂಪದೊಂದಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ಹಾಗೂ ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ, ಅಖಂಡತೆಯನ್ನು ಬಲಪಡಿಸುವ ಭ್ರಾತೃತ್ವದ ಮೌಲ್ಯಗಳನ್ನು ಸಾರುತ್ತದೆ. ಇವು ಕೇವಲ ಘೋಷಣೆಗಳಲ್ಲ. ನಮ್ಮ ಸಾರ್ವಜನಿಕ ಬದುಕು, ಆಡಳಿತ ವ್ಯವಸ್ಥೆ ಮತ್ತು ಸಾಮಾಜಿಕ ಸಂಬಂಧಗಳನ್ನು ರೂಪಿಸಬೇಕಾದ ಮೂಲತತ್ವಗಳಾಗಿವೆ.
ಸಂವಿಧಾನವು ನಾಗರಿಕರಿಗೆ ಆರು ವಿಧದ ಮೂಲಭೂತ ಹಕ್ಕುಗಳನ್ನು ಒದಗಿಸಿದೆ. ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು ಹಾಗೂ ಸಂವಿಧಾನಾತ್ಮಕ ಪರಿಹಾರಗಳ ಹಕ್ಕುಗಳು ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಘನತೆಯನ್ನು ರಕ್ಷಿಸುತ್ತವೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವು ಪ್ರಜಾಪ್ರಭುತ್ವದ ಜೀವಾಳವಾಗಿದೆ. ಅಧಿಕಾರ, ಹಣ, ಜಾತಿ ಅಥವಾ ಪ್ರಭಾವದ ಆಧಾರದ ಮೇಲೆ ನ್ಯಾಯದ ತಕ್ಕಡಿ ಬದಲಾಗಬಾರದು. ಸಾಮಾನ್ಯ ನಾಗರಿಕನಿಗೂ ನ್ಯಾಯಕ್ಕಾಗಿ ಧ್ವನಿ ಎತ್ತುವ ಅವಕಾಶವಿರಬೇಕು ಎಂಬುದು ಸಂವಿಧಾನದ ಮಹತ್ತರ ಆಶಯವಾಗಿದೆ.
ಹಕ್ಕುಗಳ ಜೊತೆಗೆ ಕರ್ತವ್ಯಗಳ ಪಾಲನೆಯೂ ನಾಗರಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸಂವಿಧಾನವು ಹನ್ನೊಂದು ಮೂಲಭೂತ ಕರ್ತವ್ಯಗಳನ್ನು ನಿರ್ದಿಷ್ಟಪಡಿಸಿದೆ. ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು, ಸಂವಿಧಾನ ಮತ್ತು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು, ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು, ಪರಿಸರ ಸಂರಕ್ಷಣೆ, ವೈಜ್ಞಾನಿಕ ಮನೋಭಾವ ಬೆಳೆಸುವುದು ಮತ್ತು ಎಲ್ಲರಲ್ಲೂ ಸೌಹಾರ್ದತೆ ಮೂಡಿಸುವುದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗಿದೆ. ಹಕ್ಕುಗಳನ್ನು ಕೇಳುವಾಗ ಕರ್ತವ್ಯಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಹಕ್ಕುಗಳು ವ್ಯಕ್ತಿಯ ಸ್ವಾತಂತ್ರ್ಯವನ್ನು ಕಾಪಾಡಿದರೆ, ಕರ್ತವ್ಯಗಳು ಸಮಾಜದ ಸ್ವಾಸ್ಥ್ಯವನ್ನು ಉಳಿಸುತ್ತವೆ.
ಇಂದಿನ ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಿದಾಗ ಸಂವಿಧಾನದ ಆಶಯಗಳು ಇನ್ನಷ್ಟು ಪ್ರಸ್ತುತವೆನಿಸುತ್ತವೆ. ಜಾತೀಯತೆ, ಧರ್ಮದ್ವೇಷ, ಲಿಂಗತಾರತಮ್ಯ, ಭ್ರಷ್ಟಾಚಾರ, ಆರ್ಥಿಕ ಅಸಮಾನತೆ, ಶೋಷಣೆ ಮತ್ತು ಅಧಿಕಾರದ ದುರುಪಯೋಗದಂತಹ ಸಮಸ್ಯೆಗಳು ಇನ್ನೂ ಸಮಾಜವನ್ನು ಕಾಡುತ್ತಿವೆ. ಸಂವಿಧಾನವು ಸಮಾನತೆಯನ್ನು ಸಾರಿದರೂ ಸಮಾಜದಲ್ಲಿ ತಾರತಮ್ಯ ಏಕೆ ಉಳಿದಿದೆ? ಮಹಿಳೆಯರಿಗೆ ಸಮಾನ ಹಕ್ಕುಗಳಿದ್ದರೂ ಅವರ ಸುರಕ್ಷತೆ ಮತ್ತು ಸ್ವಾತಂತ್ರ್ಯಕ್ಕೆ ಅಡ್ಡಿಗಳು ಏಕೆ ಎದುರಾಗುತ್ತಿವೆ? ಬಡತನ ಮತ್ತು ನಿರುದ್ಯೋಗದಿಂದ ಅನೇಕರು ಇನ್ನೂ ಅವಕಾಶ ವಂಚಿತರಾಗಿರುವುದೇಕೆ? ಇಂತಹ ಪ್ರಶ್ನೆಗಳು ನಮ್ಮನ್ನು ಆತ್ಮಾವಲೋಕನಕ್ಕೆ ಪ್ರೇರೇಪಿಸಬೇಕು. ಸಂವಿಧಾನದ ಆಶಯಗಳು ಕಾನೂನಿನ ಪುಟಗಳಲ್ಲಿ ಮಾತ್ರ ಉಳಿಯದೆ ಜನರ ಬದುಕಿನಲ್ಲಿ ಪ್ರತಿಫಲಿಸಬೇಕು.
ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ ಮತ್ತು ಮತದಾನವಲ್ಲ. ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವ ಹಕ್ಕು, ಆಡಳಿತದಲ್ಲಿ ಪಾರದರ್ಶಕತೆ ಬಯಸುವ ಪ್ರಜ್ಞೆ, ಸಾರ್ವಜನಿಕ ಸಂಪತ್ತಿನ ಸದ್ಬಳಕೆಯ ಬಗ್ಗೆ ಕಾಳಜಿ ಮತ್ತು ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮನೋಭಾವವೂ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗಗಳಾಗಿವೆ. ಬಹುಮತದ ಅಧಿಕಾರವು ಯಾರ ಹಕ್ಕನ್ನೂ ಕಸಿದುಕೊಳ್ಳುವ ಸಾಧನವಾಗಬಾರದು. ಅಲ್ಪಸಂಖ್ಯಾತರು, ಹಿಂದುಳಿದವರು, ದುರ್ಬಲರು ಮತ್ತು ಅವಕಾಶ ವಂಚಿತರಿಗೆ ನ್ಯಾಯ ದೊರೆಯುವಂತೆ ನೋಡಿಕೊಳ್ಳುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ನಿಜವಾದ ಪರೀಕ್ಷೆಯಾಗಿದೆ.
ವಿಶೇಷವಾಗಿ ಯುವಜನರಲ್ಲಿ ಸಂವಿಧಾನದ ಅರಿವು ಮೂಡಿಸುವುದು ಅತ್ಯಂತ ಅಗತ್ಯ. ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಂವಿಧಾನದ ಪ್ರಸ್ತಾವನೆ, ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಚರ್ಚೆ, ಸಂವಾದ ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳುಮಾಹಿತಿ ಮತ್ತು ದ್ವೇಷದ ಸಂದೇಶಗಳಿಗೆ ಮರುಳಾಗದೆ ಸತ್ಯಾಸತ್ಯತೆಯನ್ನು ಪರಿಶೀಲಿಸುವ ವಿವೇಚನೆ ಬೆಳೆಸಿಕೊಳ್ಳಬೇಕು. ದೇಶಪ್ರೇಮವೆಂದರೆ ಕೇವಲ ಘೋಷಣೆ ಕೂಗುವುದಲ್ಲ, ದೇಶದ ಕಾನೂನುಗಳನ್ನು ಗೌರವಿಸುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಮತ್ತು ಸಹನಾಗರಿಕರ ಹಕ್ಕುಗಳನ್ನು ಮಾನ್ಯ ಮಾಡುವುದು ಕೂಡ ಆಗಿದೆ.
ಸಂವಿಧಾನ ದಿನದಂದು ಸಂವಿಧಾನದ ಪ್ರಸ್ತಾವನೆಯನ್ನು ಓದುವುದು, ಪ್ರತಿಜ್ಞೆ ಸ್ವೀಕರಿಸುವುದು, ವಿಚಾರಗೋಷ್ಠಿ, ಪ್ರಬಂಧ ಸ್ಪರ್ಧೆ ಮತ್ತು ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸುವುದು ಅರ್ಥಪೂರ್ಣ ಆಚರಣೆಯಾಗಿದೆ. ಆದರೆ ಈ ಆಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗ ಬಾರದು. ಮನೆಯಲ್ಲಿನ ಮಕ್ಕಳಿಗೆ ಸಮಾನತೆಯ ಪಾಠ ಕಲಿಸುವುದರಿಂದ ಹಿಡಿದು ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕತೆಯನ್ನು ಪಾಲಿಸುವವರೆಗೆ ಸಂವಿಧಾನದ ಮೌಲ್ಯಗಳು ನಮ್ಮ ಪ್ರತಿಯೊಂದು ನಡವಳಿಕೆಯಲ್ಲಿ ಕಾಣಿಸಿಕೊಳ್ಳಬೇಕು.
ಸಂವಿಧಾನವು ನಮಗೆ ನ್ಯಾಯದ ನೆಲೆ ಒದಗಿಸಿದೆ, ಸಮಾನತೆಯ ಸೆಲೆಯನ್ನು ಹರಿಸಿದೆ. ಅದರ ರಕ್ಷಣೆ ಕೇವಲ ನ್ಯಾಯಾಂಗ, ಶಾಸಕಾಂಗ ಅಥವಾ ಕಾರ್ಯಾಂಗದ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಆಶಯಗಳನ್ನು ಗೌರವಿಸುವ ಮೂಲಕ ಈ ರಾಷ್ಟ್ರೀಯ ಹೊಣೆಗಾರಿಕೆಯಲ್ಲಿ ಪಾಲ್ಗೊಳ್ಳಬೇಕು. ಅನ್ಯಾಯದ ಎದುರು ಮೌನವಾಗದೆ, ಭಿನ್ನತೆಯ ನಡುವೆ ದ್ವೇಷ ಬೆಳೆಸದೆ, ಅಧಿಕಾರದ ಎದುರು ವಿವೇಕ ಕಳೆದುಕೊಳ್ಳದೆ, ಮಾನವೀಯತೆಯ ನೆಲೆಯಲ್ಲಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು.
ಸಂವಿಧಾನವು ನಮಗೆ ಹಕ್ಕುಗಳ ಭರವಸೆ ನೀಡಿದೆ. ಆ ಹಕ್ಕುಗಳಿಗೆ ಗೌರವ ನೀಡುವ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನ್ಯಾಯವು ಪ್ರತಿಯೊಬ್ಬರಿಗೂ ತಲುಪಿ, ಸಮಾನತೆ ಪ್ರತಿಯೊಂದು ಬದುಕಿನಲ್ಲೂ ಅರಳಿದಾಗಲೇ ಸಂವಿಧಾನದ ಆಶಯ ಸಾಕಾರಗೊಳ್ಳುತ್ತದೆ.
ಲೇಖನ : ಕೆ ಎಸ್ ಪ್ರಮೋದ್ ಕುಮಾರ್, ಮೈಸೂರು.




