ಚಂದ್ರವಳ್ಳಿ ನ್ಯೂಸ್, ಶ್ರೀನಗರ:
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಲಷ್ಕರ್ಎ-ತೊಯ್ಬಾ ಸಂಘಟನೆಯ 'ಎ ಕೆಟಗರಿ' ಉಗ್ರ ಲತೀಫ್ ಭಟ್ (23) ಹತನಾಗಿದ್ದಾನೆ.
ಕಣಿವೆಯಲ್ಲಿ ಸಕ್ರಿಯವಾಗಿದ್ದ ಏಕೈಕ ಸ್ಥಳೀಯ ಉಗ್ರನಾಗಿದ್ದ ಈತ, 2025ರ ನವೆಂಬರ್ 18ರಂದು ಉಗ್ರ ಸಂಘಟನೆ ಸೇರಿದ್ದು, ಸರಿಯಾಗಿ ಒಂದು ವರ್ಷದ ಬಳಿಕ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.
ಮಸೀದಿಗೆ ಹಾನಿಯಾಗದಂತೆ ಕಾರ್ಯಾಚರಣೆ: ಕುಲ್ಗಾಂನ ಮಸೀದಿಯೊಂದರಲ್ಲಿ ಅಡಗಿಕೊಂಡಿದ್ದ ಲತೀಫ್ಗೆ ಶರಣಾಗಲು ಭದ್ರತಾ ಪಡೆಗಳು ಅವಕಾಶ ನೀಡಿದ್ದವು. ಆದರೆ, ಬೆಳಗಿನ ಜಾವ 2.45ರ ಸುಮಾರಿಗೆ ಆತ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪ್ರತಿದಾಳಿಯಲ್ಲಿ ಹತನಾಗಿದ್ದಾನೆ. ಕಾರ್ಯಾಚರಣೆಯ ವೇಳೆ ಮಸೀದಿಗೆ ಯಾವುದೇ ಹಾನಿಯಾಗದಂತೆ ಸೇನೆ ಎಚ್ಚರಿಕೆ ವಹಿಸಿದೆ.
ಮರಗೆಲಸ ಬಿಟ್ಟು ಉಗ್ರನಾಗಿದ್ದ: ಪದವಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮರಗೆಲಸ ಮಾಡುತ್ತಿದ್ದ ಕುಲ್ಗಾಂ ನಿವಾಸಿ ಲತೀಫ್, ಕಳೆದ ವರ್ಷ ಮನೆಯಿಂದ ನಾಪತ್ತೆಯಾಗಿ ಲಷ್ಕರ್ ಸೇರಿದ್ದ. ಅನಂತನಾಗ್ನಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆ, ಕುಲ್ಗಾಂನಲ್ಲಿ ಇಬ್ಬರು ವಲಸೆ ಕಾರ್ಮಿಕರ ಹತ್ಯೆ ಹಾಗೂ ನವೆಂಬರ್ 11ರಂದು ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ನಡೆದ ದಾಳಿ ಪ್ರಕರಣಗಳಲ್ಲಿ ಈತನ ಕೈವಾಡವಿತ್ತು.
ತೀವ್ರಗೊಂಡ ತನಿಖೆ: ನವೆಂಬರ್ 16ರಂದು ನಡೆದ ಎನ್ಕೌಂಟರ್ನಲ್ಲಿ ಈತನಿಗೆ ಆಶ್ರಯ ನೀಡಿದ್ದ ಸಹಚರ ಉಮರ್ ನಿಸಾರ್ ದಾರ್ ಹತನಾಗಿದ್ದ; ಅಂದು ತಪ್ಪಿಸಿಕೊಂಡಿದ್ದ ಲತೀಫ್ಗಾಗಿ ಭದ್ರತಾ ಪಡೆಗಳು ತೀವ್ರ ಶೋಧ ನಡೆಸಿದ್ದವು. ಇದೀಗ ಲತೀಫ್ ಹತ್ಯೆಯಾಗಿದ್ದು, ಆತನಿಗೆ ಶಸ್ತ್ರಾಸ್ತ್ರ ಪೂರೈಸಿದವರು ಹಾಗೂ ಪಾಕಿಸ್ತಾನದ ಸಂಪರ್ಕಕಾರರ ಜಾಲದ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.




