ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷರು ಹಾಗೂ ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿರವರಿಗೆ ಈ ಬಾರಿಯ ಹೊಸ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡುವಂತೆ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್‌ಕುಮಾರ್ ಕಾಂಗ್ರೆಸ್ ನಾಯಕರುಗಳಲ್ಲಿ ಮನವಿ ಮಾಡಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಲ್ಕು ಬಾರಿ ಶಾಸಕರಾಗಿರುವ ಇವರನ್ನು ಬಂಜಾರ ಸಮಾಜ ನಾಯಕನನ್ನಾಗಿ ಒಪ್ಪಿಕೊಂಡಿದೆ. ೨೦೨೩ ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಬಂಜಾರ ಸಮಾಜದ ಬಹುಪಾಲು ಕೊಡುಗೆಯಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಲೆ
ರುದ್ರಪ್ಪ ಮಾನಪ್ಪ ಲಮಾಣಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಸಿಗಬೇಕಿತ್ತು. ಈಗ ಸಚಿವ ಸ್ಥಾನ ನೀಡುವ ಮೂಲಕ ಬಂಜಾರ ಸಮಾಜವನ್ನು ಗೌರವಿಸಬೇಕಿದೆ. ರಾಜ್ಯದಲ್ಲಿ ೩೫ ಲಕ್ಷ ಬಂಜಾರ ಜನಾಂಗದವರಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್‌ಗೆ ಮತ ನೀಡುತ್ತ ಬರುತ್ತಿರುವ ಈ ಜನಾಂಗವನ್ನು ಕಾಂಗ್ರೆಸ್ ನಾಯಕರುಗಳು ಯಾವುದೇ ಕಾರಣಕ್ಕೂ ಕಡೆಗಣಿಸಬಾರದೆಂದು ನರೇನಹಳ್ಳಿ ಅರುಣ್‌ಕುಮಾರ್ ಒತ್ತಾಯಿಸಿದರು.
ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನದ ಪ್ರಧಾನ ಕಾರ್ಯದರ್ಶಿ ಆರ್.ನಿಂಗಾನಾಯ್ಕ ಮಾತನಾಡಿ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಬಂಜಾರ ಜನಾಂಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೇಟ್ ನೀಡಿ ಚುನಾವಣೆಯಲ್ಲಿ ಗೆಲ್ಲಲು ಅವಕಾಶ ಕೊಡುತ್ತಾ ಬರುತ್ತಿದೆ. ಆದರೆ ಈಗ ಏಕೋ ಮುನಿಸಿಕೊಂಡಂತಿದೆ. ನಮ್ಮ ಏಕೈಕ ನಾಯಕ ರುದ್ರಪ್ಪ
ಮಾನಪ್ಪ ಲಮಾಣಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಕಲ್ಪಿಸಿ ಬಂಜಾರರ ಅಭಿವೃದ್ದಿಗೆ ಸಹಕರಿಸಬೇಕೆಂದು ಆಗ್ರಹಿಸಿದರು.
ರಾಜ್ಯದ ಮುಖ್ಯಮಂತ್ರಿಯಾಗಲಿರುವ ಡಿ.ಕೆ.ಶಿವಕುಮಾರ್ ಲಂಬಾಣಿ ಜನಾಂಗದವರೊಡನೆ ಒಡನಾಟವಿಟ್ಟುಕೊಂಡಿರುವುದರಿಂದ ರುದ್ರಪ್ಪ ಮಾನಪ್ಪ ಲಮಾಣಿಗೆ ಸಚಿವ ಸ್ಥಾನ ನೀಡುತ್ತಾರೆಂಬ ಭರವಸೆಯಿದೆ ಎಂದು ಹೇಳಿದರು.
ವೆಂಕಟನಾಯ್ಕ, ರಾಜನಾಯ್ಕ, ಜಿ.ಎಸ್.ಟಿ. ಚಂದ್ರನಾಯ್ಕ, ರಮೇಶ್‌ನಾಯ್ಕ, ಶಂಕರ್‌ಸಿಂಗ್‌ನಾಯ್ಕ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



