ಚಂದ್ರವಳ್ಳಿ ನ್ಯೂಸ್, ಮೈಸೂರು:
ಸಾಹಿತ್ಯವು ವ್ಯಕ್ತಿಯ ಚಿಂತನೆಗೆ ಹೊಸ ದಿಕ್ಕು ನೀಡುವ ಶಕ್ತಿಯಾಗಿದ್ದು, ಮನಸ್ಸಿಗೆ ಚೈತನ್ಯ ತುಂಬುವ ಮೂಲಕ ಆರೋಗ್ಯಕರ ಜೀವನಕ್ಕೆ ಭದ್ರ ಅಡಿಪಾಯ ಹಾಕುತ್ತದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸೂಪರಿಂಟೆಂಡೆಂಟ್ ಹಾಗೂ ಹಿರಿಯ ಹೃದ್ರೋಗ ತಜ್ಞರಾದ ಡಾ. ಸದಾನಂದ ಹೇಳಿದರು.
ಅವರು ಲೇಖಕ ಕಾಶಿಗೌ ಅವರ "ಚಿಂತನೆ ಬಿತ್ತನೆ ಬೆಳೆ" ಹಾಗೂ "ಮತಿ ಬೆರಗು" ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇಂದಿನ ಒತ್ತಡಭರಿತ ಜೀವನದಲ್ಲಿ ಓದು, ಬರವಣಿಗೆ, ಸಾಹಿತ್ಯ, ಸಂಗೀತ ಮತ್ತು ಇತರ ಸೃಜನಾತ್ಮಕ ಚಟುವಟಿಕೆಗಳು ಮನಸ್ಸಿಗೆ ನೆಮ್ಮದಿ ನೀಡುವುದರೊಂದಿಗೆ ಮೆದುಳಿನ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತವೆ. ಸ್ಮರಣಶಕ್ತಿ, ಏಕಾಗ್ರತೆ ಹಾಗೂ ಚಿಂತನಶಕ್ತಿಯನ್ನು ವೃದ್ಧಿಸುವ ಇಂತಹ ಚಟುವಟಿಕೆಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಸಕಾರಾತ್ಮಕ ಮನೋಭಾವವನ್ನು ಬೆಳೆಸುತ್ತವೆ. ಆರೋಗ್ಯವಂತ ಮನಸ್ಸು ಆರೋಗ್ಯವಂತ ಹೃದಯದ ಆಧಾರವಾಗಿದ್ದು, ಸಾಹಿತ್ಯದ ಒಡನಾಟವು ಆರೋಗ್ಯಕರ ಜೀವನಶೈಲಿಯನ್ನು ರೂಪಿಸಲು ಮಹತ್ವದ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.
ಲೇಖಕ ಕಾಶಿಗೌ ಅವರ ಸಾಹಿತ್ಯ ಸೇವೆಯನ್ನು ಶ್ಲಾಘಿಸಿದ ಡಾ. ಸದಾನಂದ, "ಚಿಂತನೆ ಬಿತ್ತನೆ ಬೆಳೆ" ಮತ್ತು "ಮತಿ ಬೆರಗು" ಕೃತಿಗಳು ಓದುಗರಲ್ಲಿ ಉತ್ತಮ ಚಿಂತನೆ, ಮೌಲ್ಯಪ್ರಜ್ಞೆ ಹಾಗೂ ಸೃಜನಶೀಲ ಬದುಕಿನ ಮನೋಭಾವವನ್ನು ಬೆಳೆಸಿ ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.



