Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೃಷಿ ಜಮೀನುಗಳ ಸುತ್ತ ಜೀವಂತ ರೈತರ ಬೇಲಿ ಕಳ್ಳಿ

ಚಂದ್ರವಳ್ಳಿ ನ್ಯೂಸ್ ಹಿರಿಯೂರು           ಶಾಲೆಯ ರಜಾ ದಿನಗಳಲ್ಲಿ ನಾವು ಸಾಮಾನ್ಯವಾಗಿ ನಮ್ಮ ಸ್ವಗ್ರಾಮವಾದ ಭರಂಪುರಕ್ಕೆ ಹೋಗುತ್ತಿದ್ದೆವು. ಬೇಸಿಗೆ ರಜೆ ಮತ್ತು ದಸರಾ ರಜೆಯನ್ನು ಅಲ್ಲಿಯೇ ಕಳೆಯುತ್ತಿದ್ದೆವು. ಆಗ ಊರಿನ ಎಲ್ಲೆಡೆ ಸಾಮಾನ್ಯವಾಗಿ ಕಾಣಸಿಗುತ್ತಿದ್ದ ಒಂದು ಸಸ್ಯವೆಂದರೆ ಕಳ್ಳಿ. ಗ್ರಾಮಸ್ಥರು ಇದನ್ನು ಕಳ್ಳಿ ಮರ, ಕಳ್ಳಿ ಗಿಡ, ಕಳ್ಳಿ ಬೇಲಿ, ಕಳ್ಳಿ ಪೊದೆ ಎಂಬ ವಿವಿಧ ಹೆಸರಿನಿಂದ ಕರೆಯುತ್ತಿದ್ದರು.

ಈ ಸಸ್ಯವು ಕೃಷಿ ಜಮೀನುಗಳ ಸುತ್ತಲಿನ ಜೀವಂತ ಬೇಲಿಯಾಗಿ, ಖಾಲಿ ಜಾಗಗಳಲ್ಲಿ, ಊರಿನ ಹೊರವಲಯಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿತ್ತು. ಎಲ್ಲೆಡೆ ನೋಡಿದರೂ ಕಳ್ಳಿ ಗಿಡ ಹೇರಳವಾಗಿ ಬೆಳೆಯುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು.
ಕಳ್ಳಿ ಗಿಡವು ಭಾರತದ ಮೂಲ ಸಸ್ಯವಲ್ಲ. ಇದು ಉಷ್ಣವಲಯದ ಆಫ್ರಿಕಾ ಖಂಡದ ಮೂಲದ ಸಸ್ಯವಾಗಿದ್ದು, ನಂತರ ಬೇಲಿಗಾಗಿ ಭಾರತಕ್ಕೆ ಪರಿಚಯಿಸಲಾಯಿತು. ಇದರ ವೈಜ್ಞಾನಿಕ ಹೆಸರು Euphorbia tirucalli. ಇದು Euphorbiaceae ಕುಟುಂಬಕ್ಕೆ ಸೇರಿದೆ. ಇಂಗ್ಲಿಷ್‌ನಲ್ಲಿ ಇದನ್ನು Pencil Tree, Pencil Cactus, Milk Bush ಎಂದು ಕರೆಯುತ್ತಾರೆ. ಕನ್ನಡದಲ್ಲಿ ಸಾಮಾನ್ಯವಾಗಿ ಕಳ್ಳಿ ಅಥವಾ ತಿರುಕಳ್ಳಿ ಎಂದು ಕರೆಯಲಾಗುತ್ತದೆ.

Advertisement

ಇದು ರಸವತ್ತಾದ (Succulent) ಸಸ್ಯವಾಗಿದ್ದು, ಅತಿ ಕಡಿಮೆ ನೀರಿನಲ್ಲಿಯೂ ಬದುಕುವ ಸಾಮರ್ಥ್ಯ ಹೊಂದಿದೆ. ಇದರ ಎಲೆಗಳು ತುಂಬಾ ಚಿಕ್ಕದಾಗಿದ್ದು ಬೇಗ ಉದುರುತ್ತವೆ. ಹಸಿರು ಬಣ್ಣದ ಪೆನ್ಸಿಲ್‌ನಂತಹ ದುಂಡಗಿನ ಕೊಂಬೆಗಳೇ ಇದರ ಮುಖ್ಯ ಲಕ್ಷಣ. ಇದು ಸುಮಾರು 3 ರಿಂದ 10 ಮೀಟರ್ ಎತ್ತರದವರೆಗೆ ಬೆಳೆಯಬಲ್ಲದು. ಬರಗಾಲವನ್ನೂ ಸುಲಭವಾಗಿ ತಡೆದುಕೊಳ್ಳುವ ಗುಣ ಹೊಂದಿದೆ.

ಈ ಸಸ್ಯವನ್ನು ಬೆಳೆಸುವುದು ಬಹಳ ಸುಲಭ. ಒಂದು ಕೊಂಬೆಯನ್ನು ಕತ್ತರಿಸಿ ನೆಟ್ಟರೆ ಹೊಸ ಗಿಡ ಬೆಳೆಯುತ್ತದೆ. ಕತ್ತರಿಸಿದ ಕೊಂಬೆಯನ್ನು 2–3 ದಿನ ನೆರಳಿನಲ್ಲಿ ಒಣಗಿಸಿ ನಂತರ ನೆಟ್ಟರೆ ಬೇರು ಬಿಡುವ ಸಾಧ್ಯತೆ ಇನ್ನಷ್ಟು ಹೆಚ್ಚಿರುತ್ತದೆ.

news_1783126637_0_538.jpg

 

ಕೃಷಿ ಜಮೀನುಗಳ ಸುತ್ತ ಜೀವಂತ ಬೇಲಿಯಾಗಿ ಕಳ್ಳಿ ಗಿಡವನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಲ್ಲಿ ಶೌಚಾಲಯಗಳ ಕೊರತೆ ಇದ್ದ ಕಾಲದಲ್ಲಿ, ದಟ್ಟವಾದ ಕಳ್ಳಿ ಬೇಲಿಗಳು ಗೌಪ್ಯತೆಯನ್ನು ಒದಗಿಸುತ್ತಿದ್ದವು. ಇಂದಿಗೂ ಕೆಲವೆಡೆ ಮದುವೆ ಮಂಟಪಗಳು ಹಾಗೂ ತಾತ್ಕಾಲಿಕ ಅಲಂಕಾರಿಕ ಕಮಾನುಗಳ ನಿರ್ಮಾಣದಲ್ಲಿಯೂ ಇದರ ಕೊಂಬೆಗಳನ್ನು ಬಳಸುತ್ತಾರೆ. ಸಾಂಪ್ರದಾಯಿಕವಾಗಿ, ಮನೆಯ ಪ್ರವೇಶದ್ವಾರದ ಬಳಿ ಕಳ್ಳಿ ಕೊಂಬೆಗಳನ್ನು ಇಟ್ಟರೆ ಕೀಟಗಳು, ಹಾವುಗಳು ಹಾಗೂ ಇತರ ಹಾನಿಕಾರಕ ಜೀವಿಗಳು ಮನೆಗೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆಯಿತ್ತು. ಕೆಲವು ಪ್ರದೇಶಗಳಲ್ಲಿ ಈ ಸಸ್ಯವನ್ನು ಜನಪದ ಔಷಧೀಯ ಬಳಕೆಯಲ್ಲಿಯೂ ಉಪಯೋಗಿಸುತ್ತಿದ್ದರು. ಆದರೆ ಈ ಔಷಧೀಯ ಗುಣಗಳ ಬಹುತೇಕವು ಇನ್ನೂ ವೈಜ್ಞಾನಿಕವಾಗಿ ಸಂಪೂರ್ಣವಾಗಿ ದೃಢಪಟ್ಟಿಲ್ಲ. ಒಲೆ ಉರಿಸುವ ಸೌದೆಗಳಾಗಿ ಒಣಗಿದ ಈ ಸಸ್ಯದ ಭಾಗಗಳನ್ನು ಉಪಯೋಗಿಸುತ್ತಿದ್ದರು
ಈ ಸಸ್ಯವನ್ನು ಕತ್ತರಿಸಿದಾಗ ಬಿಳಿ ಬಣ್ಣದ ಹಾಲಿನಂತಹ ದ್ರವ (Latex) ಹೊರಬರುತ್ತದೆ. ಈ ಹಾಲು ಚರ್ಮಕ್ಕೆ ತಗುಲಿದರೆ ಉರಿ, ತುರಿಕೆ ಅಥವಾ ಅಲರ್ಜಿ ಉಂಟಾಗಬಹುದು. ಕಣ್ಣಿಗೆ ಬಿದ್ದರೆ ತೀವ್ರ ಉರಿ ಹಾಗೂ ಕಣ್ಣಿನ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಆದ್ದರಿಂದ ನಮ್ಮ ಹಿರಿಯರು ಮಕ್ಕಳು ಹಾಗೂ ಸಾಕು ಪ್ರಾಣಿಗಳನ್ನು ಈ ಸಸ್ಯದಿಂದ ದೂರವಿಡುತ್ತಿದ್ದರು.

ಹಾ...! ಇದೆಲ್ಲವನ್ನು ಇಂದು ನಿಮಗೆ ಏಕೆ  ಹೇಳುತ್ತಿದ್ದೇನೆ ಎಂದರೆ? 
ಒಂದು ಕಾಲದಲ್ಲಿ ಎಲ್ಲೆಡೆ ಹೇರಳವಾಗಿ ಕಾಣಸಿಗುತ್ತಿದ್ದ ಕಳ್ಳಿ ಗಿಡ ಇಂದು ನಿಧಾನವಾಗಿ ಮರೆಯಾಗುತ್ತಿದೆ. ಇದರ ಅನುಕೂಲಗಳು ಹೆಚ್ಚು ಅಥವಾ ಅನಾನುಕೂಲಗಳು ಹೆಚ್ಚು ಎಂಬುದು ಬೇರೆ ಚರ್ಚೆಯ ವಿಷಯ. ಆದರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಆಗುತ್ತಿರುವ ಇಂತಹ ಬದಲಾವಣೆಗಳನ್ನು ಗಮನಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
ನಮ್ಮ ಪರಿಸರದಲ್ಲಾಗುವ ಬದಲಾವಣೆಗಳು ಅನೇಕ ಜೀವಿಗಳ ಬದುಕಿನ ಮೇಲೆ ನೇರ ಹಾಗೂ ಪರೋಕ್ಷ ಪರಿಣಾಮ ಬೀರುತ್ತವೆ. ಇಂತಹ ಪರಿಸರದ ಪ್ರಭಾವಗಳನ್ನೇ ಆಧರಿಸಿ ಚಾರ್ಲ್ಸ್ ಡಾರ್ವಿನ್ ಅವರು ವಿಕಾಸ ಸಿದ್ಧಾಂತ (Theory of Evolution) ಹಾಗೂ ನೈಸರ್ಗಿಕ ಆಯ್ಕೆ (Natural Selection) ಎಂಬ ಪರಿಕಲ್ಪನೆಗಳನ್ನು ವಿವರಿಸಿದರು.

ನಗರೀಕರಣ, ಕೃಷಿ ಭೂಮಿಯ ವಿಸ್ತರಣೆ, ರಸ್ತೆ ನಿರ್ಮಾಣ, ಕಟ್ಟಡಗಳ ನಿರ್ಮಾಣ, ಭೂಬಳಕೆಯ ಬದಲಾವಣೆ, ಅತಿಯಾದ ಕಡಿತ, ಹಿಮಪಾತದ ಪರಿಣಾಮ, ಬೇರು ರೋಗಗಳು, ನೀರು ನಿಲ್ಲುವಿಕೆ, ಕೀಟಗಳ ಹಾವಳಿ ಹಾಗೂ ವಿವಿಧ ಸಸ್ಯ ರೋಗಗಳಿಂದ ಕಳ್ಳಿ ಗಿಡ ಬೆಳೆಯುತ್ತಿದ್ದ ನೈಸರ್ಗಿಕ ವಾಸಸ್ಥಾನಗಳು ಕ್ರಮೇಣ ಕಡಿಮೆಯಾಗುತ್ತಿವೆ. ಜೊತೆಗೆ ಇದರ ಹಾಲು ಚರ್ಮ ಮತ್ತು ಕಣ್ಣಿಗೆ ಹಾನಿಕಾರಕವಾಗಿರುವ ಕಾರಣದಿಂದಲೂ ಅನೇಕರು ಈ ಸಸ್ಯವನ್ನು ಕಿತ್ತುಹಾಕುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಕಳ್ಳಿ ಗಿಡವು ಅನೇಕ ಪ್ರದೇಶಗಳಲ್ಲಿ ನಿಧಾನವಾಗಿ ಕಾಣೆಯಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಇದು ಇನ್ನೂ ಅಳಿವಿನಂಚಿನ ಸಸ್ಯ ಎಂದು ಪರಿಗಣಿಸಲ್ಪಟ್ಟಿಲ್ಲ. ಆದಾಗ್ಯೂ ಸ್ಥಳೀಯ ಮಟ್ಟದಲ್ಲಿ ಇದರ ಸಂಖ್ಯೆಯಲ್ಲಿ ಕಂಡುಬರುವ ಇಳಿಕೆ, ಪರಿಸರದಲ್ಲಿನ ಸಣ್ಣ ಬದಲಾವಣೆಗಳೂ ನಮ್ಮ ಸುತ್ತಲಿನ ಜೀವವೈವಿಧ್ಯ ಮತ್ತು ಭೂದೃಶ್ಯವನ್ನು ಹೇಗೆ ಬದಲಾಯಿಸಬಲ್ಲವು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.
ಇಂತಹ ಪರಿಸರ ಬದಲಾವಣೆಗಳ ಬಗ್ಗೆ ನಾವು ಜಾಗೃತರಾಗಬೇಕು. ಉಪಯುಕ್ತ ಸಸ್ಯಗಳನ್ನು ಸೂಕ್ತ ಸ್ಥಳಗಳಲ್ಲಿ ಸಂರಕ್ಷಿಸಬೇಕು. ಮುಂದಿನ ಪೀಳಿಗೆಗಳಿಗಾಗಿ ಪರಿಸರ ಸಮತೋಲನ ಮತ್ತು ಜೀವವೈವಿಧ್ಯವನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಲೇಖನ:ವೇಣುಕುಮಾರ್. ಎಂ. ಭರಂಪುರ

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ