ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕವನ್ನು ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಜಾಗತಿಕ ಮುಂಚೂಣಿ ಎಐ ಸಂಸ್ಥೆಯಾದ ಆಂಥ್ರೋಪಿಕ್ (Anthropic) ನ ಹಿರಿಯ ನಿಯೋಗವು ಮುಖ್ಯಮಂತ್ರಿಗಳನ್ನು ಹಾಗೂ ಸಚಿವರನ್ನು ಭೇಟಿಯಾಗಿ ಮಹತ್ವದ ಸಮಾಲೋಚನೆ ನಡೆಸಿದೆ.
ಈ ಸಭೆಯಲ್ಲಿ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳೂ ಉಪಸ್ಥಿತರಿದ್ದು, ಮುಖ್ಯವಾಗಿ ಮೂರು ಪ್ರಮುಖ ವಿಷಯಗಳ ಕುರಿತು ಚರ್ಚೆಗಳು ನಡೆದಿವೆ.
ಎಐ ಕೌಶಲ್ಯಾಭಿವೃದ್ಧಿ (AI Skilling): ರಾಜ್ಯದ ಯುವಜನತೆಯಲ್ಲಿ ಎಐ ತಂತ್ರಜ್ಞಾನದ ಕೌಶಲ್ಯಗಳನ್ನು ಹೆಚ್ಚಿಸುವುದು ಮತ್ತು ತರಬೇತಿ ನೀಡುವುದು.
ಎಐ ವಿಶ್ವವಿದ್ಯಾಲಯ (AI University): ಕರ್ನಾಟಕ ಸರ್ಕಾರವು ಪ್ರಸ್ತಾಪಿಸಿರುವ ಎಐ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತು ಅದರ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಹಯೋಗ.
ಸಾರ್ವಜನಿಕ ಸೇವೆ ಮತ್ತು ಆಡಳಿತ ಸುಧಾರಣೆ: ಸಾರ್ವಜನಿಕ ಸೇವೆಗಳನ್ನು ಹೆಚ್ಚು ಸುಲಭ, ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸಲು ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು.
ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕದ ಎಐ ಕನಸುಗಳಿಗೆ ಹಾಗೂ ಆಡಳಿತದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚಿಸಲು ಈ ದೀರ್ಘಕಾಲೀನ ಸಹಭಾಗಿತ್ವವು ದೊಡ್ಡ ಮಟ್ಟದ ತಿರುವು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ.



