ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಐಮಂಗಲ ಹೋಬಳಿಯ ಕೆರೆಗಳಿಗೆ ಅತಿ ಶೀಘ್ರದಲ್ಲೇ ನೀರು ಹರಿಯಲಿದೆ ಎಂದು ನಿವೃತ್ತ ಪ್ರಧಾನ ಅಭಿಯಂತರ ಸಣ್ಣ ಚಿತ್ತಯ್ಯ ಅವರು ಭರವಸೆ ನೀಡಿದ್ದಾರೆ.
ಐಮಂಗಲ ಗ್ರಾಮದ ಹೊರವಲಯದ ಕಲ್ಕುಂಟೇಶ್ವರಿ ದೇವಸ್ಥಾನದ ಆವರಣದಲ್ಲಿ ಅಪ್ಪರ್ ಭದ್ರಾ ನೀರಾವರಿ ಹೋರಾಟ ಸಮಿತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಹಿರಿಯೂರು ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕುರಿತ "ಚಿಂತನ ಮಂಥನ" ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು.
ಶೇಕಡಾ ೯೫ ರಷ್ಟು ಕಾಮಗಾರಿ ಪೂರ್ಣ:
ಯೋಜನೆಯ ಪ್ರಗತಿ ಕುರಿತು ಮಾತನಾಡಿದ ಸಣ್ಣ ಚಿತ್ತಯ್ಯ, "ಯೋಜನೆಯ ಪ್ರಮುಖ ಕಾಮಗಾರಿಗಳು ಮುಗಿದಿದ್ದು, ಕೇವಲ ವಿದ್ಯುತ್ ಸಮಸ್ಯೆಯಿಂದಾಗಿ ಕೆಲಸ ಕೊಂಚ ನಿಧಾನವಾಗಿತ್ತು. ಪ್ರಸ್ತುತ ಶೇಕಡಾ 95 ರಷ್ಟು ಅಭಿವೃದ್ಧಿ ಕೆಲಸಗಳು ಮುಗಿದಿದ್ದು, ಕೇವಲ ಶೇ. 5 ರಷ್ಟು ಮಾತ್ರ ಬಾಕಿ ಇದೆ. ಇದು ಮುಗಿದ ತಕ್ಷಣವೇ ನೀರು ಹರಿಯಲಿದೆ. 2019ರಲ್ಲೇ ವೈ ಜಂಕ್ಷನ್ ಮೂಲಕ ವಾಣಿ ವಿಲಾಸ ಸಾಗರಕ್ಕೆ (ವಿವಿ ಸಾಗರ) ನೀರು ತರಲಾಗಿತ್ತು. ಪ್ರಸ್ತುತ ಜಲಾಶಯದಲ್ಲಿ 30 ಟಿಎಂಸಿ ನೀರು ಸಂಗ್ರಹವಿದ್ದು, 6 ಟಿಎಂಸಿ ನೀರನ್ನು ಬಳಕೆ ಮಾಡಲಾಗುತ್ತಿದೆ. ಇನ್ನು ನಾಲ್ಕು ವರ್ಷ ಮಳೆ ಬಾರದೇ ಹೋದರೂ ವಿವಿ ಸಾಗರದಲ್ಲಿ ನೀರಿನ ತೊಂದರೆ ಇರುವುದಿಲ್ಲ," ಎಂದು ಅಂಕಿ-ಅಂಶಗಳೊಂದಿಗೆ ವಿವರಿಸಿದರು.
೬೪ ಕೆರೆಗಳು, ೯೧,೫೪೫ ಎಕರೆಗೆ ಸೂಕ್ಷ್ಮ ನೀರಾವರಿಛ
"ಹಿರಿಯೂರು ತಾಲೂಕಿನ ಐಮಂಗಲ, ಕಸಬಾ ಹಾಗೂ ಧರ್ಮಪುರ ಹೋಬಳಿಗಳ ವ್ಯಾಪ್ತಿಗೆ ಬರುವ 64 ಕೆರೆಗಳಿಗೆ ಮತ್ತು 91,545 ಎಕರೆ ಕೃಷಿ ಭೂಮಿಗೆ ಚಿತ್ರದುರ್ಗ ಶಾಖ ಕಾಲುವೆ ಮೂಲಕ ಸೂಕ್ಷ್ಮ ನೀರಾವರಿ ಯೋಜನೆಗೆ ಅನುಮೋದನೆ ದೊರೆತು ಕಾಮಗಾರಿ ಆರಂಭವಾಗಿದೆ. ಇದರಿಂದ ಒಟ್ಟು 90 ಕೆರೆಗಳಿಗೆ ನೀರು ಹರಿಯಲಿದೆ.
ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡಿರುವುದರಿಂದ ಕಾಮಗಾರಿ ತ್ವರಿತವಾಗಿ ನಡೆದಿದೆ. ಆದರೆ ಕೇಂದ್ರ ಸರ್ಕಾರ ನಿಗದಿಪಡಿಸಿದ ರಾಷ್ಟ್ರೀಯ ಯೋಜನೆಯ ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಕೇಂದ್ರ ಹಣ ನೀಡಿದ್ದಲ್ಲಿ ಮುಂದಿನ 5 ವರ್ಷಗಳಲ್ಲಿ ಸಮಗ್ರ ಭದ್ರಾ ಯೋಜನೆ ಪೂರ್ಣಗೊಳ್ಳಲಿದೆ," ಎಂದರು. ಪ್ರಸ್ತುತ ಪೈಪ್‌ಲೈನ್ ಮೂಲಕ ಚಿಕ್ಕಸಿದ್ದವನಹಳ್ಳಿ, ಭರಂಪುರ, ಕೋವೇರಹಟ್ಟಿ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ನೀರಿಲ್ಲದೆ ತತ್ತರಿಸಿದ ಐಮಂಗಲ: ರೈತರ ಕಳವಳ
ನೀರಾವರಿ ಹೋರಾಟ ಸಮಿತಿಯ ಕಾರ್ಯದರ್ಶಿ ಯಶ್ವಂತ್ ರಾಜ್ ಮಾತನಾಡಿ, "ಐಮಂಗಲ ಹೋಬಳಿ ತೀವ್ರ ಬರಗಾಲಕ್ಕೆ ತುತ್ತಾಗಿದೆ. 35 ಹಳ್ಳಿಗಳಲ್ಲಿ ಸಾವಿರಾರು ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ರೈತರು ತಮ್ಮ ತೋಟ-ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಅಪ್ಪರ್ ಭದ್ರಾ ಯೋಜನೆ ಅಡಿ ಕೆರೆಗಳಿಗೆ ಶೀಘ್ರ ನೀರು ಸಿಗದಿದ್ದರೆ ರೈತರ ಬದುಕು ಇನ್ನಷ್ಟು ದುಸ್ತರವಾಗಲಿದೆ," ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮುಖ್ಯ ಅತಿಥಿಗಳನ್ನು ಬೃಹತ್ ಬೈಕ್ ರ‍್ಯಾಲಿ, ಡೊಳ್ಳು ಕುಣಿತ ಹಾಗೂ ಕಹಳೆ ವಾದನದೊಂದಿಗೆ ಭವ್ಯವಾಗಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ವೇದಿಕೆಯಲ್ಲಿ ಅಪ್ಪರ್ ಭದ್ರಾ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಎನ್. ತಿಪ್ಪೀರಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಪ್ರಮುಖರಾದ ಹನುಮಂತರೆಡ್ಡಿ, ಡಿ.ಆರ್. ಆನಂದಪ್ಪ, ಬಿ.ಟಿ. ಶಾಂತಣ್ಣ, ಓ.ಜಿ. ಬಸವರಾಜ್, ಕೆ.ಟಿ. ಕೆಂಚಪ್ಪ, ಎಚ್.ಟಿ. ಚಂದ್ರಶೇಖರ್, ಎಸ್.ಪಿ. ಪಾತಪ್ಪ ಸೇರಿದಂತೆ ಹಿರಿಯೂರು ತಾಲ್ಲೂಕಿನ ನೂರಾರು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.



