ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಅನುಷ್ಠಾನದಲ್ಲಿ ಭಾರಿ ಪ್ರಮಾಣದ ಆಡಳಿತಾತ್ಮಕ ಮತ್ತು ತಾಂತ್ರಿಕ ಲೋಪಗಳು ನಡೆದಿರುವುದನ್ನು ಭಾರತೀಯ ಲೆಕ್ಕಪರಿಶೋಧಕರು ಮತ್ತು ತನಿಖಾಧಿಕಾರಿಗಳ ವರದಿ ಬಹಿರಂಗಪಡಿಸಿದೆ. ಇದನ್ನು ಅಸ್ತ್ರವಾಗಿಸಿಕೊಂಡಿರುವ ಜೆಡಿಎಸ್, ಕಾಂಗ್ರೆಸ್ ಸರ್ಕಾರದ ವಿರುದ್ಧ "ಮಹಾ ಲೂಟಿ" ಆರೋಪ ಹೊರಿಸಿದ್ದು, ತೀವ್ರ ವಾಗ್ದಾಳಿ ನಡೆಸಿದೆ.
ಮಹಾಲೇಖಪಾಲರ ಡೇಟಾ ಅನಾಲಿಟಿಕ್ಸ್ ವಿಭಾಗ ನಡೆಸಿರುವ ವಿಶೇಷ ಆಡಿಟ್‌ನಲ್ಲಿ ಪತ್ತೆಯಾಗಿರುವ ಶಾಕಿಂಗ್ ಅಂಶಗಳನ್ನು ಉಲ್ಲೇಖಿಸಿ ಜೆಡಿಎಸ್ ಬಿಡುಗಡೆ ಮಾಡಿರುವ ಸುದ್ದಿಯ ವಿವರ ಇಲ್ಲಿದೆ:
ಸಿಎಜಿ ವರದಿಯಲ್ಲಿ ಬಯಲಾದ ಪ್ರಮುಖ ಲೋಪಗಳು:
ಖಾತೆಯೇ ಇಲ್ಲದಿದ್ದರೂ ₹46.52 ಕೋಟಿ ಪಾವತಿ: ರಾಜ್ಯದ 23,262 ಮಹಿಳೆಯರ ಬ್ಯಾಂಕ್ ಖಾತೆಯ ಕನಿಷ್ಠ ವಿವರಗಳೇ ಸಿಸ್ಟಮ್‌ನಲ್ಲಿ ಇಲ್ಲದಿದ್ದರೂ, ಅವರ ಹೆಸರಿನಲ್ಲಿ ಬರೋಬ್ಬರಿ ₹46.52 ಕೋಟಿ ಹಣ ಪಾವತಿಯಾಗಿದೆ! "ಖಾತೆಯೇ ಇಲ್ಲದವರಿಗೂ ಹಣ ಪಾವತಿ ಮಾಡುವ ಜಗತ್ತಿನ ಎಂಟನೇ ಅದ್ಭುತವನ್ನು ಈ ಸರ್ಕಾರ ಸೃಷ್ಟಿಸಿದೆ. ಈ ಹಣ ಯಾರ ಜೇಬಿಗೆ ಹೋಯ್ತು?" ಎಂದು ಜೆಡಿಎಸ್ ಪ್ರಶ್ನಿಸಿದೆ.
19,020 ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ: ನೇರ ನಗದು ವರ್ಗಾವಣೆ ನಿಯಮಗಳ ಪ್ರಕಾರ ಒಬ್ಬ ಫಲಾನುಭವಿಗೆ ಒಂದು ಪ್ರತ್ಯೇಕ ಖಾತೆ ಇರಬೇಕು. ಆದರೆ, ಇಲ್ಲಿ 19,020 ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಲಾಗಿದೆ. ಇದು ಲೂಟಿಗಾಗಿಯೇ ಮಾಡಿದ ವ್ಯವಸ್ಥಿತ ಪ್ಲಾನ್ ಎಂದು ಜೆಡಿಎಸ್ ಆರೋಪಿಸಿದೆ.
ಹೆಚ್ಚುವರಿ ಹಣ ಜಮೆ: ಸುಮಾರು 8,995 ಖಾತೆಗಳಿಗೆ ನಿಯಮಬಾಹಿರವಾಗಿ ₹1.80 ಕೋಟಿಗೂ ಅಧಿಕ ಮೊತ್ತದ ಹೆಚ್ಚುವರಿ ಹಣ ಸಂದಾಯವಾಗಿದೆ.
₹5,000 ಕೋಟಿ ಎಲ್ಲಿ ಹೋಯಿತು?: ಫೆಬ್ರವರಿ ಮತ್ತು ಮಾರ್ಚ್ 2025ರ ಎರಡು ತಿಂಗಳ ಅವಧಿಯ ಫಲಾನುಭವಿಗಳ ಗೃಹಲಕ್ಷ್ಮಿ ಯೋಜನೆಯ ಸುಮಾರು ₹5,000 ಕೋಟಿ ಹಣ ಎಲ್ಲಿ ಮಾಯವಾಗಿದೆ ಎಂದು ಜೆಡಿಎಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
'ದಾಖಲೆ ಮುಚ್ಚಿಡುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ':
ಸಿಎಜಿ ಆಡಿಟ್ ಟೀಮ್ ಪದೇ ಪದೇ ನೆನಪೋಲೆ ಹಾಗೂ ವಿನಂತಿ ಕಳುಹಿಸಿದರೂ, ಅನರ್ಹ ಫಲಾನುಭವಿಗಳ ಪಟ್ಟಿ, ಇಲಾಖೆಯಿಂದ ಕೈಬಿಡಲಾದ ಫಲಾನುಭವಿಗಳ ಐಡಿ ಮತ್ತು ಕಾರಣಗಳ ಅಧಿಕೃತ ದಾಖಲೆಗಳನ್ನು ನೀಡದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಚ್ಚಿಡುತ್ತಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
"ಗ್ಯಾರಂಟಿ ಯೋಜನೆಯ ಹೆಸರಲ್ಲಿ ಜನರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯುತ್ತಿರುವ ಲೂಟಿಕೋರರ ಅಸಲಿ ಮುಖವಾಡ ಈಗ ಕಳಚಿದೆ. ದಾಖಲೆಗಳನ್ನು ಮುಚ್ಚಿಡುತ್ತಿರುವ ಇಲಾಖೆಯ ಹಿಂದೆ ಕಬಳಿಸುತ್ತಿರುವ ಆ 'ಕೈ' ಯಾರದ್ದು?" ಎಂದು ಜೆಡಿಎಸ್ ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರನ್ನು ಪ್ರಶ್ನಿಸಿದೆ.
ಈಗಾಗಲೇ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಸಿಎಜಿ ವರದಿಯ ಈ ಸ್ಫೋಟಕ ಅಂಶಗಳು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಮಟ್ಟದ ಮುಜುಗರ ತಂದಿಟ್ಟಿದ್ದು, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟಕ್ಕೆ ಸರ್ಕಾರದ ವಿರುದ್ಧ ಹೋರಾಡಲು ದೊಡ್ಡ ರಾಜಕೀಯ ಅಸ್ತ್ರ ಸಿಕ್ಕಂತಾಗಿದೆ.



