ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಮಳೆ ಕೊರತೆ ಹಾಗೂ ಬರಗಾಲದ ಹಿನ್ನೆಲೆಯಲ್ಲಿ ಒಣಗುತ್ತಿರುವ ಅಡಕೆ, ತೆಂಗು ಮತ್ತು ಬಾಳೆ ಬೆಳೆಗಳನ್ನು ಉಳಿಸಿಕೊಳ್ಳಲು ಭದ್ರಾ ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ತಕ್ಷಣವೇ 20 ದಿನಗಳ ಕಾಲ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತಸಂಘ ಸಾಮೂಹಿಕ ನ್ಯಾಯತ್ವದ ಹೋರಾಟ ಸಮಿತಿಯು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಬೆಳೆಗಳ ಸಂರಕ್ಷಣೆಯ ಜೊತೆಗೆ ಅಚ್ಚುಕಟ್ಟು ವ್ಯಾಪ್ತಿಯ ಕೆರೆ-ಕುಂಟೆಗಳನ್ನು ತುಂಬಿಸಲು, ಜಾನುವಾರುಗಳಿಗೆ ಹಾಗೂ ಸಾರ್ವಜನಿಕರ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ನೀರು ಬಿಡುವುದು ಅನಿವಾರ್ಯವಾಗಿದೆ ಎಂದು ರೈತರು ಒತ್ತಾಯಿಸಿದರು.
ಮನವಿ ಸ್ವೀಕರಿಸಲು ಬಂದ ಜಿಲ್ಲಾಧಿಕಾರಿ ಪ್ರಕಾಶ್ ನಿಟ್ಟಳಿ ಅವರಿಗೆ ರೈತರು "20 ದಿನ ನೀರು ಬಿಡುವ ಅಧಿಕೃತ ಆದೇಶ ಪತ್ರದೊಂದಿಗೆ ಬನ್ನಿ" ಎಂದು ಪಟ್ಟು ಹಿಡಿದರು. ಇದೇ ವೇಳೆ ಸ್ಥಳಕ್ಕೆ ಬಂದ ಭದ್ರಾ ಅಣೆಕಟ್ಟೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಮೇಲಧಿಕಾರಿಗಳ ಸೂಚನೆಯಂತೆ 10 ದಿನ ನೀರು ಬಿಡಲಾಗುವುದು ಎಂದಾಗ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 10 ದಿನದ ಬದಲು ಪೂರ್ಣ 20 ದಿನಗಳ ಕಾಲ ನೀರು ಹರಿಸಲೇಬೇಕು ಎಂದು ಪಟ್ಟು ಹಿಡಿದರು.
ಸರ್ಕಾರದ ವಿರುದ್ಧ ಕೆ.ಟಿ. ಗಂಗಾಧರ್ ಆಕ್ರೋಶ:
ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡ ಕೆ.ಟಿ. ಗಂಗಾಧರ್, "ಭದ್ರಾ ಜಲಾಶಯ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಈಗ 20 ದಿನ ನೀರು ಬಿಟ್ಟರೂ ಜಲಾಶಯದಲ್ಲಿ ಇನ್ನೂ 100 ದಿನಗಳಿಗೆ ಆಗುವಷ್ಟು ನೀರಿದೆ. ಅಚ್ಚುಕಟ್ಟು ರೈತರ ಬೆಳೆಗಳಿಗೆ ನೀರು ನೀಡದೆ, ರಾಜಕೀಯ ಉದ್ದೇಶಕ್ಕಾಗಿ ಭದ್ರಾ ಮೇಲ್ದಂಡೆಗೆ ನೀರು ಹರಿಸಿ ನಮ್ಮನ್ನು ಆತಂಕಕ್ಕೆ ದೂಡಬೇಡಿ.
ತುಂಗಾ ನದಿಯಿಂದ ನೀರು ಮೇಲೆತ್ತಿ ಬಯಲು ಸೀಮೆಗೆ ಕೊಡಲಿ. 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರ, ರೈತರನ್ನು ಪದೇ ಪದೆ ಬೀದಿಗಿಳಿಸಿ ಪ್ರತಿಭಟನೆ ಮಾಡುವಂತೆ ಮಾಡಬಾರದು.
ತಕ್ಷಣವೇ 20 ದಿನ ನೀರು ಬಿಡುವ ಹಾಗೂ ಮುಂದಿನ ಐದು ತಿಂಗಳ ನೀರಿನ ಹಂಚಿಕೆಯ ಅಧಿಕೃತ ಆದೇಶ ಪ್ರತಿಯನ್ನು ನೀಡಬೇಕು" ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ಶಾಸಕಿ ಶಾರದಾ ಪೂರ್ಯನಾಯ್ಕ ಸೇರಿದಂತೆ ಹಲವು ರೈತ ಮುಖಂಡರು ಪಾಲ್ಗೊಂಡಿದ್ದರು.




