ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಳ್ಳಕೆರೆ ವಿಧಾನಸಭಾ ಕ್ಷೇತ್ರವನ್ನು ಶರವೇಗದಲ್ಲಿ ಅಭಿವೃದ್ದಿಪಡಿಸಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಚಳ್ಳಕೆರೆ ಮಕ್ಕಳ ಆಸ್ಪತ್ರೆಯ ಡಾ.ಬಿ.ಚಂದ್ರನಾಯ್ಕ ಕಾಂಗ್ರೆಸ್ ವರಿಷ್ಟರುಗಳನ್ನು ಒತ್ತಾಯಿಸಿದ್ದಾರೆ.
ಬಯಲುಸೀಮೆ ಚಳ್ಳಕೆರೆಯಲ್ಲಿ ವಿಶಾಲವಾದ ರಸ್ತೆಗಳನ್ನು ನಿರ್ಮಿಸಿರುವುದಲ್ಲದೆ ಇಂಜಿನಿಯರಿಂಗ್ ಕಾಲೇಜನ್ನು ಸರ್ಕಾರದ ವತಿಯಿಂದ ಆರಂಭಿಸಲು ಶಾಸಕ ಟಿ.ರಘುಮೂರ್ತಿರವರ ಕೊಡುಗೆ ಅಪಾರ. ಪಕ್ಷಾತೀತ, ಜಾತ್ಯತೀತ ರಾಜಕಾರಣಿಯಾಗಿರುವ ಇವರು ಎಲ್ಲರ ಪ್ರೀತಿ ವಿಶ್ವಾಸ ಗಳಿಸಿರುವುದರಿಂದ ಮೂರನೆ ಬಾರಿಗೆ ಗೆದ್ದು ಪಕ್ಷದ ಪ್ರತಿಷ್ಟೆಯನ್ನು ಉಳಿಸಿದ್ದಾರೆ. ಇಂತಹ ಜನಸೇವಕನಿಗೆ ಸಚಿವ ಸ್ಥಾನ ನೀಡುವುದರಿಂದ ಕ್ಷೇತ್ರವಲ್ಲದೆ ಇಡೀ ಜಿಲ್ಲೆಯೆ ಅಭಿವೃದ್ದಿಯಾಗುವುದರಲ್ಲಿ ಅನುಮಾನವಿಲ್ಲ.
೨೦೧೩ ರಲ್ಲಿ ಚುನಾವಣ ಕಣಕ್ಕಿಳಿದ ಟಿ.ರಘುಮೂರ್ತಿ ಮೂರನೆ ಬಾರಿಗೆ ಶಾಸಕರಾಗಿ ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿದ್ದಾರೆ.
ಸಣ್ಣಪುಟ್ಟ ಸಮುದಾಯಗಳನ್ನು ಕಡೆಗಣಿಸಿದೆ ಎಲ್ಲಾ ಜಾತಿಯವರಿಗೂ ಸಮುದಾಯ ಭವನಗಳನ್ನು ಕಟ್ಟಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಕೇವಲ ಚಳ್ಳಕೆರೆ ಕ್ಷೇತ್ರವಲ್ಲದೆ ಜಿಲ್ಲೆ ಎದುರಿಸುತ್ತಿರುವ ನಾನಾ ರೀತಿಯ ಜ್ವಲಂತ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ.
ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಜನತೆಗೆ ಒದಗಿಸುವಲ್ಲಿ ಎಂದಿಗೂ ಹಿಂದೆ ಬಿದ್ದವರಲ್ಲ. ಹಿರಿಯೂರಿನ ವಾಣಿವಿಲಾಸಸಾಗರದ ನೀರನ್ನು ಚಳ್ಳಕೆರೆಗೆ ತರುವಲ್ಲಿಯೂ ಇವರ ಪರಿಶ್ರಮ ಅಡಗಿದೆ. ಇಂತಹ ನಿಸ್ಪಕ್ಷಪಾತ ಶಾಸಕ ಟಿ.ರಘುಮೂರ್ತಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿ ಜಿಲ್ಲೆಯ ಅಭಿವೃದ್ದಿಗೆ ಕಾಂಗ್ರೆಸ್ ನಾಯಕರುಗಳು ಒತ್ತು ಕೊಡಬೇಕೆಂದು ಡಾ.ಬಿ.ಚಂದ್ರನಾಯ್ಕ ಮನವಿ ಮಾಡಿದ್ದಾರೆ.



