ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಅಸಂಘಟಿತ ಕಾರ್ಮಿಕರ ಬಗ್ಗೆ ಕಾಳಜಿಯಿಟ್ಟುಕೊಂಡಿರುವ ದೇಶದ ಪ್ರಧಾನಿ ನರೇಂದ್ರಮೋದಿರವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅರ್ಹರಿಂದ ಅರ್ಜಿ ಹಾಕಿಸಿ ನನಗೆ ಪಟ್ಟಿ ಕೊಡಿ ಸರ್ಕಾರದಿಂದ ಮಂಜೂರು ಮಾಡಿಸುತ್ತೇನೆಂದು ಸಂಸದ ಗೋವಿಂದ ಎಂ.ಕಾರಜೋಳ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ರೋಟರಿ ಬಾಲಭವನದಲ್ಲಿ ಮಂಗಳವಾರ ನಡೆದ ಹದಿನೇಳನೆ ವರ್ಷದ ಕಟ್ಟಡ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಪಿಂಚಣಿ ಯೋಜನೆ ಜಾರಿಯಲ್ಲಿದೆ. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅರವತ್ತು ವರ್ಷಗಳನ್ನು ಪೂರೈಸಿರುವವರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಿಕ ನಾಲ್ಕು ನೂರು ರೂ. ಮಂಜೂರು ಮಾಡಿದರು. ಮಹಿಳಾ ಸಬಲೀಕರಣಕ್ಕೆ ಪ್ರಧಾನ ಮಂತ್ರಿಗಳಿಗೆ ವಿಶೇಷ ಕಾಳಜಿಯಿದೆ. ಗರ್ಭಿಣಿಯರಿಗೆ ವೇತನ ಸಹಿತ ರಜೆ, ಶಿಶುಪಾಲನಾ ಕೇಂದ್ರ, ಹೀಗೆ ನಾನಾ ರೀತಿಯ ಸೌಲಭ್ಯಗಳನ್ನು ದೊರಕಿಸಿದ್ದಾರೆ. ಕಟ್ಟಡ ಕಾರ್ಮಿಕರು ಅನಕ್ಷರಸ್ಥರಾಗಿರುವುದರಿಂದ ಸಂಘದವರು ತಿಳಿ ಹೇಳಬೇಕೆಂದರು.
ಇಎಸ್‌ಐ. ಆರೋಗ್ಯ ವಿಮೆ ಅನುಷ್ಟಾನಕ್ಕೆ ತರಲಾಗಿದೆ. ವಸತಿ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಕಾರ್ಮಿಕರಿಗೆ ತೊಂದರೆಯಾದರೆ ಐದು ಲಕ್ಷ ರೂ.ಗಳನ್ನು ಕೊಡುತ್ತದೆ. ಎಪ್ಪತ್ತು ಕೋಟಿ ಜನರಿಗೆ ಪ್ರತಿ ತಿಂಗಳು ಐದು ಕೆ.ಜಿ.ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ನ್ಯಾಯಬೆಲೆ ಅಂಗಡಿಯವರು ಹಾಗೂ ಅಧಿಕಾರಿಗಳು ಸೇರಿ ಜನತೆಗೆ ಮೋಸ ಮಾಡುವುದು ನಿಂತಿದೆ. ಕಾರ್ಮಿಕರು ದೇಶದ ದೊಡ್ಡ ಶಕ್ತಿ ಎನ್ನುವುದಕ್ಕಾಗಿ ಕೇಂದ್ರ ಸರ್ಕಾರ ಅನೇಕ ಸೌಲತ್ತುಗಳನ್ನು ಒದಗಿಸಿದೆ. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ರಾಜ್ಯದಲ್ಲಿ ಇನ್ನೂರು ವಸತಿ ಶಾಲೆಗಳನ್ನು ಕಟ್ಟಿಸಿದ್ದೇನೆ. ೨೮೦ ಹಾಸ್ಟೆಲ್‌ಗಳನ್ನು ತೆರೆಯಲಾಗಿದೆ. ಕಾರ್ಮಿಕರು ಕಡ್ಡಾಯವಾಗಿ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸಿ ಶಿಕ್ಷಣ ಕೊಡಿಸಿ ಎಂದು ಗೋವಿಂದ ಕಾರಜೋಳ ಕರೆ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಾಲಚಂದ್ರ ಬಗಟಿ ಮಾತನಾಡಿ ನಿಮ್ಮ ನಿಮ್ಮ ಜೀವಗಳು ನಿಮ್ಮ ಕೈಯಲ್ಲಿರುವುದರಿಂದ ಕಟ್ಟಡ ಕೆಲಸದಲ್ಲಿ ತೊಡಗಿದಾಗ ಕಡ್ಡಯವಾಗಿ ಸೇಫ್ಟಿ ಬೆಲ್ಟ್ ಧರಿಸಬೇಕು. ಅದೇ ರೀತಿ ಹೆಲ್ಮೆಟ್, ಶೂ ಹಾಕಿರಬೇಕು. ದ್ವಿಚಕ್ರ ವಾಹನಗಳನ್ನಿಟ್ಟುಕೊಂಡಿರುವವರು ಕಡ್ಡಾಯವಾಗಿ ಲೈಸೆನ್ಸ್ ಪಡೆದುಕೊಳ್ಳಿ. ಪ್ರಧಾನ ಮಂತ್ರಿಗಳ ಜೀವನ್‌ಜ್ಯೋತಿ, ಜೀವನ್ ಸುರಕ್ಷಾ ಪಾಲಿಸಿ ಮಾಡಿಸಿ ಒಂದು ವೇಳೆ ಅಪಘಾತವಾದರೆ ಪರಿಹಾರ ಸಿಗುತ್ತದೆ ಎಂದು ಕಟ್ಟಡ ಕಾರ್ಮಿಕರಿಗೆ ತಿಳಿಸಿದರು.
ಕಾರ್ಮಿಕ ಇಲಾಖೆಯಿಂದ ಕಡ್ಡಾಯವಾಗಿ ಗುರುತಿನ ಚೀಟಿ ಪಡೆಯಿರಿ. ಜೊತೆಗೆ ನಿಗಧಿತ ಸಮಯಕ್ಕೆ ಸರಿಯಾಗಿ ನವೀಕರಣ ಮಾಡಿಸಿಕೊಳ್ಳುವುದನ್ನು ಮರೆಯಬಾರದು. ಇಲ್ಲದಿದ್ದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತೀರ. ೫೮, ೫೯, ೬೦ ವರ್ಷ ತುಂಬಿರುವವರ ಪಟ್ಟಿ ಸಿದ್ದಪಡಿಸಿ ನನಗೆ ಕೊಡಿ. ಇನ್ನು ಮೂರು ತಿಂಗಳೊಳಗೆ ಮೂರು ಸಾವಿರ ರೂ. ಪಿಂಚಣಿ ಸಿಗುತ್ತದೆಂದರು.
ಬೋಗಸ್ ಗುರುತಿನ ಚೀಟಿಗಳನ್ನು ರದ್ದುಪಡಿಸಬೇಕಾಗಿರುವುದರಿಂದ ಇಲಾಖೆಯೊಂದಿಗೆ ನೀವುಗಳು ಸಹಕರಿಸಬೇಕು. ನೊಂದಾಯಿತ ಕಟ್ಟಡ ಕಾರ್ಮಿಕರು ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ಪಡೆದುಕೊಳ್ಳಿ. ಅದಕ್ಕಾಗಿ ದಾಖಲೆಗಳನ್ನು ಒಮ್ಮೆ ಸಲ್ಲಿಸಿ. ಗುರುತಿನ ಚೀಟಿ ಚಾಲ್ತಿಯಲ್ಲಿಲ್ಲದಿದ್ದರೆ ಸೌಲಭ್ಯಗಳಿಂದ ವಂಚಿತರಾಗುತ್ತೀರ. ವೈದ್ಯಕೀಯ ಧನ ಸಹಾಯ ಎರಡು ಲಕ್ಷ ರೂ.ಗಳನ್ನು ಕೊಡುತ್ತಿದ್ದೇವೆ. ಕ್ಯಾನ್ಸರ್ ಹೃದಯ ಚಿಕಿತ್ಸೆಗೆ ಐದು ಲಕ್ಷ ರೂ. ಹೆರಿಗೆ ಭತ್ಯೆ ಐವತ್ತು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಇಷ್ಟೆಲ್ಲಾ ಸೌಲತ್ತುಗಳು ಸಿಗಬೇಕಾದರೆ ಅರ್ಹ ಕಟ್ಟಡ ಕಾರ್ಮಿಕರು ಇಲಾಖೆಯಿಂದ ಗುರುತಿನ ಚೀಟಿ ಪಡೆದುಕೊಳ್ಳಿ ಎಂದು ಜಾಗೃತಿಗೊಳಿಸಿದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ ಶೂನ್ಯವಾಗಿರುವುದರಿಂದ ಐದು ಸಾವಿರದಿಂದ ಒಂದು ಸಾವಿರಕ್ಕೆ ಇಳಿದಿದೆ. ಕಾರ್ಮಿಕರಿಗೆ ಆಗಿರುವ ಅನ್ಯಾಯ ಸರಿಪಡಿಸಿ. ಕಾರ್ಮಿಕ ಮಂತ್ರಿ ಸಂತೋಷ್‌ಲಾಡ್‌ಗೆ ಕಾರ್ಮಿಕರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ. ಒಗ್ಗಟ್ಟಾಗದಿದ್ದರೆ ಕಷ್ಟ. ಕಾರ್ಮಿಕರ ಕಲ್ಯಾಣ ಮಂಡಳಿ ಮೂರು ವರ್ಷಗಳಿಂದ ಅದೋಗತಿಗಿಳಿದಿದೆ ಎಂದು ಸಂಸದರಲ್ಲಿ ತಮ್ಮ ಅಳಲು ತೋಡಿಕೊಂಡರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ ಮಾತನಾಡುತ್ತ ಕಟ್ಟಡ ನಿರ್ಮಾಣದಿಂದ ಹಿಡಿದು ನಾನಾ ವಲಯಗಳಲ್ಲಿ ಜಗತ್ತಿನಾದ್ಯಂತ ಕಾರ್ಮಿಕರಿದ್ದಾರೆ. ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡಾಗ ಮಾತ್ರ ಸರ್ಕಾರದಿಂದ ಸಿಗುವ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕಟ್ಟಡ ಕಟ್ಟುವ ಸಮಯದಲ್ಲಿ ಕಾರ್ಮಿಕರು ಎಚ್ಚರ ವಹಿಸಬೇಕು. ಅವಸರ ಮಾಡಿಕೊಳ್ಳಬೇಡಿ. ಮದ್ಯ ಸೇವಿಸಿ ಕೆಲಸ ಮಾಡುವುದರಿಂದ ಕೈಕಾಲುಗಳನ್ನು ಊನ ಮಾಡಿಕೊಳ್ಳುತ್ತೀರ. ಕೆಲವೊಮ್ಮೆ ಜೀವಕ್ಕೆ ಅಪಾಯವಾದರೂ ಆಗಬಹುದು. ಆಗ ಗುತ್ತಿಗೆದಾರರು, ಮೇಸ್ತ್ರಿಗಳು ಹೊಣೆ ಹೊರಬೇಕಾಗುತ್ತದೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕಿದೆ. ಸಂಘಟಿತರಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಹೇಳಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಓ.ಜಗದೀಶ್ ಗುಂಡೇರಿ ಮಾತನಾಡಿ ಕಾರ್ಮಿಕರಿಲ್ಲದೆ ದೇಶದಲ್ಲಿ ಕಟ್ಟಡವಿರಲು ಸಾಧ್ಯವಿಲ್ಲ. ಕಾರ್ಮಿಕರ ಪರಿಶ್ರಮವಿದೆ.
ಕಾರ್ಮಿಕರು, ಮಾಲೀಕರ ನಡುವೆ ಗುತ್ತಿಗೆದಾರ ಸೇತುವೆಯಾಗಿ ಕೆಲಸ ಮಾಡುತ್ತಾನೆ. ಕಟ್ಟಡದ ಕೆಲಸ ಮಾಡುವಾಗ ಸುರಕ್ಷಾ ಕವಚ ಧರಿಸುವುದನ್ನು ಮರೆಯಬೇಡಿ. ಇಲ್ಲವಾದರೆ ಪ್ರಾಣಕ್ಕೆ ಎರವಾಗುತ್ತದೆ. ಮದ್ಯ ಸೇವಿಸಿ ಕೆಲಸ ಮಾಡುವುದು ತಪ್ಪು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕಾದರೆ ತಪ್ಪದೆ ಗುರುತಿನ ಚೀಟಿಗಳನ್ನು ಮಾಡಿಸಿಕೊಳ್ಳಿ ಎಂದು ಕಾರ್ಮಿಕರಿಗೆ ತಿಳಿಸಿದರು.
ಆರ್ಕಿಟೆಕ್ಟ್ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್.ಪ್ರಸಾದ್, ಸ್ಟೀಲ್ ವೆಲ್ಡಿಂಗ್ ಇಂಡಸ್ಟ್ರಿಯಲ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ
ವೆಂಕಟೇಶ್ ಎಸ್.ಆರ್. ಸಂಘದ ಕಾನೂನು ಸಲಹೆಗಾರ ಶಿವಮೂರ್ತಿ, ದ್ವಿಚಕ್ರ ಮೆಕ್ಯಾನಿಕ್ ಸಂಘದ ಉಪಾಧ್ಯಕ್ಷ ಅಣ್ಣೇಶ್ ಇವರುಗಳು ವೇದಿಕೆಯಲ್ಲಿದ್ದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಿದ್ದರು.


