ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕಾಲುವೆಯಲ್ಲಿ ಹತ್ತೂ ದಿನಗಳ ಹಿಂದೆ ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಭೀಕರ ಕೊಲೆ ಪ್ರಕರಣವನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ಪತ್ನಿಯ ನಡತೆಯ ಮೇಲಿನ ಅನುಮಾನದಿಂದಲೇ ಈ ಕೃತ್ಯ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ರುಕ್ಸಾನ (25) ಕೊಲೆಯಾದ ದುರ್ದೈವಿ. ಈಕೆಯ ಪತಿ ಮೊಹಮ್ಮದ್ ಇಫ್ಜಾನ್ (22) ಬಂಧಿತ ಆರೋಪಿ.
ಸಂಶಯವೇ ಕೊಲೆಗೆ ಮೂಲ ಕಾರಣ: ಬಿಹಾರ ಮೂಲದ ಈ ಜೋಡಿ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮೃತ ರುಕ್ಸಾನಾಗೆ ಈ ಮುಂಚೆಯೇ ಮದುವೆಯಾಗಿ ಒಂದು ಮಗುವಿದ್ದು, ವೈಯಕ್ತಿಕ ಭಿನ್ನಾಭಿಪ್ರಾಯದಿಂದ ಮೊದಲ ಪತಿಯಿಂದ ದೂರವಾಗಿದ್ದರು. ಆರು ತಿಂಗಳ ಹಿಂದೆಯಷ್ಟೇ ಇಬ್ಬರೂ ಬೆಂಗಳೂರಿನ ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಬಾಡಿಗೆ ಮನೆ ಪಡೆದು, ಗಾರ್ಮೆಂಟ್ಸ್ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಆದರೆ, ಪತ್ನಿ ಸದಾ ಫೋನ್ನಲ್ಲಿ ಮಾತನಾಡುತ್ತಿರುವುದನ್ನು ಕಂಡು ಆಕೆಗೆ ಯಾರೊಂದಿಗೋ ಅನೈತಿಕ ಸಂಬಂಧವಿದೆ ಎಂದು ಇಫ್ಜಾನ್ ಶಂಕಿಸುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಅಕ್ಟೋಬರ್ 10ರಂದು ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಆಕ್ರೋಶಗೊಂಡ ಇಫ್ಜಾನ್ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದ.
ಕದ್ದ ವಾಹನದಲ್ಲಿ ಶವ ವಿಲೇವಾರಿ:
ಕೊಲೆ ಮಾಡಿದ ನಂತರ ಕೃತ್ಯ ಮುಚ್ಚಿಹಾಕಲು ಆಕೆಯ ಬಾಯಿಗೆ ವೇಲ್ ತುರುಕಿದ ಆರೋಪಿ, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಭದ್ರವಾಗಿ ಕಟ್ಟಿದ್ದ. ಬಳಿಕ ಶವ ಸಾಗಿಸಲು ಆಕ್ಟಿವಾ ಹೊಂಡಾ ವಾಹನವನ್ನು ಕದ್ದು, ಅದರಲ್ಲಿ ಶವವನ್ನು ತಂದು ಸಮೀಪದ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ. ಅಕ್ಟೋಬರ್ 13ರಂದು ರಾಜಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಕೊಳೆತ ಶವ ಪತ್ತೆಯಾಗಿತ್ತು.
ಪೊಲೀಸರ ಚಾಣಾಕ್ಷ ತನಿಖೆಗೆ ಸಿಕ್ಕಿಬಿದ್ದ ಆರೋಪಿ:
ಆರಂಭದಲ್ಲಿ ಮೃತರ ಗುರುತು ಸಿಗದೆ ತನಿಖೆ ಸವಾಲಾಗಿತ್ತು. ಹೀಗಾಗಿ ವಿಶೇಷ ತಂಡಗಳನ್ನು ರಚಿಸಿದ ಪೊಲೀಸರು ಮನೆ ಮನೆಗೆ ತೆರಳಿ ವಿಚಾರಣೆ ನಡೆಸಿದರು. ಈ ವೇಳೆ ಗೋಪಾಲಪುರದ ಬಾಡಿಗೆ ಮನೆಯಲ್ಲಿದ್ದ ಮಹಿಳೆಯೊಬ್ಬರು ಕೆಲವು ದಿನಗಳಿಂದ ಕಾಣಿಸುತ್ತಿಲ್ಲ ಎಂಬ ಸುಳಿವು ಸ್ಥಳೀಯರಿಂದ ಸಿಕ್ಕಿತ್ತು.
ಕೂಡಲೇ ಇಫ್ಜಾನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, "ಹೆಂಡತಿಯನ್ನು ಬಿಹಾರದ ಸ್ವಂತ ಊರಿಗೆ ಕಳುಹಿಸಿದ್ದೇನೆ" ಎಂದು ಸಬೂಬು ಹೇಳಿದ್ದ. ಆಕೆಯ ಫೋನ್ ನಂಬರ್ ಕೇಳಿದಾಗ "ಆಕೆ ಮೊಬೈಲ್ ಬಳಸುವುದಿಲ್ಲ" ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ, ತೀವ್ರ ತನಿಖೆ ನಡೆಸಿದಾಗ ಕೃತ್ಯ ಎಸಗಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್, "ಪತ್ನಿಯ ಮೇಲಿನ ಅನುಮಾನದಿಂದಲೇ ಆರೋಪಿ ಈ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ" ಎಂದು ತಿಳಿಸಿದ್ದಾರೆ.



