ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪುಲಿಕೇಶಿನಗರ ಠಾಣೆ ವ್ಯಾಪ್ತಿಯ ಜರ್ಮಿಯಾ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಭವಿಸಿದ ಅನುಮಾನಾಸ್ಪದ ವಸ್ತು ಸ್ಫೋಟದ ಕುರಿತು ಉನ್ನತ ಮಟ್ಟದ ತನಿಖೆ ಮುಂದುವರಿದಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಫೋಟಗೊಂಡ ಸ್ಥಳದಲ್ಲಿದ್ದ ಎಲ್ಲಾ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಸ್ಫೋಟಕ್ಕೆ ನಿಖರ ಕಾರಣವೇನು ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಜರ್ಮಿಯಾ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಅಕ್ಟೋಬರ್ 20ರಂದು ಈ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಇಬ್ಬರು ಕಾರ್ಮಿಕರ ತಲೆ ಹಾಗೂ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಕಾರ್ಮಿಕರ ಬ್ಯಾಗ್ನಲ್ಲಿದ್ದ ಬ್ಯಾಟರಿ ಮಾದರಿಯ ವಸ್ತು ಏಕಾಏಕಿ ಸ್ಫೋಟಗೊಂಡಿರುವುದೇ ಈ ದುರ್ಘಟನೆಗೆ ಕಾರಣವೆಂದು ಶಂಕಿಸಲಾಗಿದೆ. ಸಂಭವನೀಯ ಅಪಾಯಗಳನ್ನು ನಿಯಂತ್ರಿಸಲು ಭಯೋತ್ಪಾದಕ ನಿಗ್ರಹ ದಳ, ಆಂತರಿಕ ಭದ್ರತಾ ವಿಭಾಗ ಹಾಗೂ ಬಾಂಬ್ ಪತ್ತೆ ದಳದ ಅಧಿಕಾರಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವರು, ವಿಧಿವಿಜ್ಞಾನ ಪ್ರಯೋಗಾಲಯದ ತನಿಖಾ ವರದಿ ಬರುವವರೆಗೂ ಯಾರೂ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದು, ವರದಿ ಬಂದ ಬಳಿಕ ಘಟನೆಯ ಸಂಪೂರ್ಣ ವಿವರಗಳನ್ನು ಅಧಿಕೃತವಾಗಿ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.



