ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಜಂಭದ ಜಂಬೂಸವಾರಿ
ದಸರಾ ಬಂತೆಂದರೆ
ಮಾವುತ ಕಾವಾಡಿಗರ
ಭುಜ ಸೆಟದೆ ನಿಲ್ಲುತ್ತವೆ
ಕಾಡಿನಿಂದ ನಾಡಿಗೆ ಬರುವ ಸಂಭ್ರಮ ಸಡಗರ
ಮಡದಿ ಮಕ್ಕಳೊಂದಿಗೆ ನಾಡ ಹಬ್ಬದ ನಡಿಗೆಗೆ
ಸಾಕ್ಷಿಯಾಗುವ ತವಕ
ಅದೋ....... ಅಲ್ಲಿ
ಕಾಣುವ ಭವ್ಯ ಅರಮನೆ
ಕಣ್ಣಗಲಕ್ಕೆ ನೋಡಲು ಸಾಲದ ಅರಸರ ನಾಡು
ಸಿಂಗಾರದ ಸೊಬಗಿನಲ್ಲಿ ಮೆರವ ಬೀಡು
ಕಾಣುವ ಕನಸಲ್ಲೂ
ನಾಡರಸರ ವೈಭವದ
ಚಿತ್ತಾರದ ಚೆಲುವು
ರಂಗೋ ರಂಗು
ಧೂಳಿಟ್ಟ ಆಯುಧಗಳಿಗೆ
ಬಲು ಸಂಭ್ರಮ, ಬಳಸಿ ಬಸವಳಿದ ಜೀವ ಶವಗಳಾಗಿ ಗೂಡಿನಿಂದ ಹೊರಬಂದು ಮತ್ತೆ ಜೀವ ತುಂಬಿ ನಳನಳಿಸುವುದು
ಹಳೆ ನೆನಪುಗಳ ನೆನಪಲಿ
ಪ್ರತ್ಯಕ್ಷ ದೈವ ಸ್ವರೂಪಗಳಾದ ರಾಜ ರಾಣಿಯರು ಮೆರೆದ ಭವ್ಯ ಪರಂಪರೆಯ ನೆಲೆಬೀಡು ಈ ನಾಡು, ರತ್ನ ಸಿಂಹಾಸನದಲಿ ವಿರಾಜಮಾನರಾಗಿದ್ದ ಅರಸು ಮನೆತನದ ಘಮಲು ಇನ್ನೂ ಹಸಿರಸಿರು
ರಂಗು ರಂಗಿನ ಚಿತ್ತ ಚಿತ್ತಾರದ ತೋರಣಗಳ ಸಾಲು ಮೆರೆದಿಹವು ಊರಗಲ, ಬೆಳ್ಳಿ ಬೆಳಕಿನ ಬಣ್ಣದ ದೀಪಗಳು ಝಗ ಝೆಗಿಸಿ ನಾ ಮುಂದು ತಾ ಮುಂದು ಎನುತ ಬೆಳಕು ಚೆಲ್ಲಲು ಹವಣಿಸಿಹು
ಅಂಬಾರಿ ಹೊತ್ತ ಪ್ರಶಾಂತ ಗಜ ನಡಿಗೆಯ ಗಜಗಾಂಭೀರ್ಯದಲಿ ಝೇಂಕರಿಸಿ, ಹೂಂಕರಿಸಿ ಸೊಂಡಿಲೆತ್ತಿ
ತಾಯಿ ಚಾಮುಂಡಿಗೆ ನಮಿಸಿ ನಡೆವ
ಚೆಲುವು ಮನೋಹರ
ಡೋಲು, ಡೊಳ್ಳು, ನಾದ ಸ್ವರಗಳ ನಿನಾದದ ನಡುವೆ, ಕಳಶ ಹೊತ್ತ ನಾರಿಯರ ನಡುವೆ,
ಥಳಕುತ, ಬಳಕುತ ಸಾಗುವ ಜಂಬದ ಜಂಬೂಸವಾರಿಗೆ ಲಕ್ಷಾಂತರ ಕಂಗಳ ನೋಟ
ಮನೆಯಂಗಳದ ರಂಗೋಲಿಗಳು ಹಪಹಪಿಸಿ ಕಾದಿಹವು ದೇವಿ ಚಾಮುಂಡಿಗೆ ಸ್ವಾಗತ ಕೋರಲು, ಹಚ್ಚಿಟ್ಟ ನವರಾತ್ರಿಯ ದೀಪಗಳು ಉರಿದುರಿದು
ಬದುಕಿನ ಬವಣೆಗಳಿಗೆ
ಬೆಳಕಾಗಿ ಸದಾ ಉರಿಯುವ
ನಂದ ದೀಪಗಳಾಗಲು
ಹವಣಿಸುತಿಹವು
ದಸರೆಯ ದೌಲತ್ತು
ಮನೆ ಮಂದಿಗೆ ಮಜಲತ್ತು
ಉಡುಗೆ ತೊಡುಗೆಗಳ ಸವಲತ್ತು, ಊರ ವ್ಯಾಪಾರಿಗಳ ಮಸಲತ್ತು ಮೈಸೂರ್ಪಾಕಿಗೆ ಸಿಹಿ ಸೊಕ್ಕು
ಆಧರದಿ ಬರಮಾಡಿಕೊಳ್ಳಿ
ನವ ದುರ್ಗೆಯರನು ಬೆಳಗಿ ಆರುತಿಯ ಹೊಸ್ತಿಲಲ್ಲಿ, ನೀಡು ತಾಯಿ ಅರಿವು, ಆರೋಗ್ಯ, ಐಶ್ವರ್ಯ, ರಕ್ಷಣೆ, ನೆಮ್ಮದಿ, ಯಶಸ್ಸು ದಯಪಾಲಿಸೆಂದು
ದಸರಾ ಕವಿತೆ: ನಿಂಗೋಜಿ ರಾವ್ ಗುಜ್ಜರ್, ಸುನೀತಾ ಎನ್ ಗುಜ್ಜರ್, ನಾಗರಾಜ್ ಏನ್ ಗುಜ್ಜರ್, ಸಿದ್ಧಾಂತ ಎನ್ ಗುಜ್ಜರ್.



