ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲೆಯ ಪಾವಗಡ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಸಂಬಂಧಿಸಿದ ಪೋಸ್ಟರ್‌ಗಳು ಪ್ರತ್ಯಕ್ಷವಾಗಿರುವ ವಿಚಾರ ತಮ್ಮ ಗಮನಕ್ಕೆ ಬಂದಿರುವುದಾಗಿ ತಿಳಿಸಿದ ಡಿಸಿಎಂ ಪರಮೇಶ್ವರ್, ಈ ಕುರಿತು ಅಂದೇ ತುಮಕೂರಿಗೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಅಂತಹ ಯಾವುದೇ ಅಂಚಿನ ಬೆಳವಣಿಗೆಗಳು ಕಂಡುಬಂದಲ್ಲಿ ತಕ್ಷಣವೇ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲು ಸರ್ಕಾರ ಸಿದ್ಧವಿದೆ ಎಂದರು.
ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಘೋಷಿಸಿದ ಬಳಿಕ ಕಾರ್ಕಳದಲ್ಲಿದ್ದ ನಕ್ಸಲ್ ನಿಗ್ರಹ ದಳವನ್ನು ಸಂಪೂರ್ಣವಾಗಿ ಮುಚ್ಚಿಲ್ಲ. ಬದಲಿಗೆ ಅದರ ಅರ್ಧ ಪಡೆಯನ್ನು ಕೋಮು ಗಲಭೆ ನಿಯಂತ್ರಣಕ್ಕಾಗಿ 'ಸ್ಪೆಷಲ್ ಆ್ಯಕ್ಷನ್ ಫೋರ್ಸ್' ಆಗಿ ಪರಿವರ್ತಿಸಲಾಗಿದೆ.
ಉಳಿದರ್ಧ ಪಡೆ ಈಗಲೂ ನಕ್ಸಲ್ ನಿಗ್ರಹ ದಳವಾಗಿಯೇ ಕಾರ್ಯಾಚರಣೆ ಮುಂದುವರಿಸಿದೆ. ಪಾವಗಡದಲ್ಲಿ ನಕ್ಸಲ್ ಚಟುವಟಿಕೆಗಳು ಖಚಿತಗೊಂಡರೆ, ತಕ್ಷಣವೇ ಎಎನ್‌ಎಫ್ ಪಡೆಯನ್ನು ತುಮಕೂರಿಗೆ ರವಾನಿಸಲಾಗುವುದು ಎಂದು ತಿಳಿಸಿದರು.
ಮಾಜಿ ಯೋಧರಿಗೂ ಸಿಗಲಿದೆ ಉಚಿತ ನಿವೇಶನ: ರಾಜ್ಯದಲ್ಲಿ ವಸತಿ ರಹಿತ ಬಡವರಿಗಾಗಿ ಪ್ರತಿ ಜಿಲ್ಲೆಗೆ 30x40 ಅಳತೆಯ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಮಹತ್ತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಯೋಧರಿಗೂ ಆದ್ಯತೆಯ ಮೇರೆಗೆ ನಿವೇಶನಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು. ಮೊದಲ ಹಂತವಾಗಿ ಮುಂದಿನ ಎರಡು ತಿಂಗಳ ಒಳಗಾಗಿ ರಾಜ್ಯಾದ್ಯಂತ ಬರೋಬ್ಬರಿ 5 ಲಕ್ಷ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿದರು.




