ಚಂದ್ರವಳ್ಳಿ ನ್ಯೂಸ್, ತುಮಕೂರು:
ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಎನ್ಡಿಎ ಮೈತ್ರಿಕೂಟವು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ತುಮಕೂರಿನ ವಸಂತಪುರ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಾರ್ಖಾನೆಯೊಂದರ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್ ಕೇವಲ 1,200 ಮತಗಳ ಅಂತರದಿಂದ ಸೋತಿದ್ದರಿಂದ, ಈ ಬಾರಿ ಜೆಡಿಎಸ್ ಬೆಂಬಲಿತ ಎನ್ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ ಎಂದರು. ಪಕ್ಷ ಯಾವುದಾದರೂ ಮೈತ್ರಿಕೂಟದ ಎಲ್ಲರಿಗೂ ಒಪ್ಪಿಗೆಯಾಗುವ ಅಭ್ಯರ್ಥಿಯನ್ನು ಚರ್ಚಿಸಿ ಆಯ್ಕೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರಿಗೆ ತಿರುಗೇಟು:
ಸಿಎಂ ಸ್ಥಾನದ ಕುರಿತು ಟಾಂಗ್: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತಾವು ಎಂದಿಗೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಯಾರ ಬಳಿಯೂ ಬೇಡಿಕೆ ಇಟ್ಟಿರಲಿಲ್ಲ; ಅವರೇ ಬಂದು ಆ ಸ್ಥಾನ ನೀಡಿದ್ದರು ಎಂದರು.
ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಹಾಗೂ ಕ್ಷೇತ್ರಗಳ ಅಭಿವೃದ್ಧಿಗೆ ತಲಾ 500 ಕೋಟಿ ರೂ. ಅನುದಾನ ನೀಡುವ ಮೂಲಕ ತಮ್ಮ ಆಡಳಿತ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾಗಿ ತಿಳಿಸಿದರು.
ಭ್ರಷ್ಟಾಚಾರ ಹಾಗೂ ಹೂಡಿಕೆ ವಿಚಾರ: ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಆರೋಪಿಸಿದ ಅವರು, ರಾಮನಗರದ ಕಂದಾಯ ಅಧಿಕಾರಿಯ ಲೋಕಾಯುಕ್ತ ಬಲೆ ಪ್ರಕರಣವನ್ನು ಉಲ್ಲೇಖಿಸಿ ಮುಖ್ಯಮಂತ್ರಿಗಳ ನಡೆಯನ್ನು ವ್ಯಂಗ್ಯವಾಡಿದರು. ಜೊತೆಗೆ ಮಂಗಳೂರಿನ 32,000 ಕೋಟಿ ರೂ. ಹೂಡಿಕೆ ಘೋಷಣೆ ಹಾಗೂ ಮಂಡ್ಯದ ಇವಿ ಪರೀಕ್ಷಾ ಕೇಂದ್ರಕ್ಕೆ ಜಮೀನು ಮಂಜೂರು ಮಾಡುವ ವಿಚಾರದಲ್ಲಿ ಸರ್ಕಾರ ಜನರ ದಾರಿ ತಪ್ಪಿಸುತ್ತಿದೆ ಎಂದು ಕುಮಾರಸ್ವಾಮಿ ದೂರಿದರು.
ಕೇಂದ್ರ ಸಚಿವಾಲಯದ ಜವಾಬ್ದಾರಿ: ರಾಜ್ಯಕ್ಕೆ ಕೈಗಾರಿಕೆಗಳನ್ನು ತರುವಲ್ಲಿ ವಿಫಲರಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಟೀಕೆಯನ್ನು ತಳ್ಳಿಹಾಕಿದ ಸಚಿವರು, ಹೂಡಿಕೆ ಆಕರ್ಷಿಸುವುದು ಮತ್ತು ಮೂಲಸೌಕರ್ಯ ಒದಗಿಸುವುದು ರಾಜ್ಯ ಸರ್ಕಾರದ ಕೆಲಸ; ನೀತಿ ನಿರೂಪಣೆ ಮತ್ತು ಪಿಎಲ್ಐ ಯೋಜನೆಗಳ ಜಾರಿಯಷ್ಟೇ ಕೇಂದ್ರದ ಜವಾಬ್ದಾರಿ ಎಂದು ತಿಳಿಸಿದರು.




