ಚಂದ್ರವಳ್ಳಿ ನ್ಯೂಸ್, ರಾಮನಗರ:
ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಕುರುಬರಹಳ್ಳಿ ಗ್ರಾಮದ ಬಿಸಿಲು ಮಾರಮ್ಮ ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿತರಾಗಿ ತೆರಳಿದ್ದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇಗುಲ ಪ್ರವೇಶ ನಿರಾಕರಿಸಿ ಅವಮಾನ ಮಾಡಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ದೇವಾಲಯದ ಪ್ರಾರಂಭೋತ್ಸವಕ್ಕೆ ನಿಖಿಲ್ ಅವರನ್ನು ಕರೆಸಿ, ಏಕಾಏಕಿ ಬಾಗಿಲಿಗೆ ಬೀಗ ಹಾಕುವ ಮೂಲಕ ದರ್ಶನಕ್ಕೆ ಅಡ್ಡಿಪಡಿಸಲಾಗಿದೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರಸ್ವಾಮಿ, "ದೇವರ ಮುಂದೆ ಎಲ್ಲರೂ ಒಂದೇ. ಶುಭ ಕಾರ್ಯಕ್ಕೆ ಬಂದವರಿಗೆ ಅವಮಾನ ಮಾಡಲಾಗಿದೆ. ಅಲ್ಲಿ ಕೆಲವರು ವಾಗ್ವಾದ ನಡೆಸುತ್ತಿದ್ದರು, ಸಮಾಧಾನಪಡಿಸಲು ಯತ್ನಿಸಿದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಈ ಅವಮಾನದ ತೀರ್ಪನ್ನು ಕ್ಷೇತ್ರದ ಜನತೆಗೆ ಬಿಡುತ್ತೇನೆ" ಎಂದಿದ್ದಾರೆ.
2004ರ ಘಟನೆ ನೆನಪಿಸಿದ ಎಚ್ಡಿಕೆ: ಈ ಘಟನೆಯನ್ನು 2004ರ ಘಟನೆಗೆ ಹೋಲಿಸಿರುವ ಎಚ್.ಡಿ. ಕುಮಾರಸ್ವಾಮಿ, "ಅಂದು ಕೂಟಗಲ್ಲು ಹೊಸೂರು ಗ್ರಾಮದ ದೇವಾಲಯಕ್ಕೆ ನಾನು ಹೋದಾಗಲೂ ಕಾಂಗ್ರೆಸ್ಸಿಗರು ಬೀಗ ಜಡಿದು ಅವಮಾನಿಸಿದ್ದರು. ಆದರೆ, ನಂತರದ ಚುನಾವಣೆಯಲ್ಲಿ ಜನರು ನನ್ನನ್ನು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಆಶೀರ್ವದಿಸಿದ್ದರು.
ಈಗ ನಿಖಿಲ್ ವಿಚಾರದಲ್ಲೂ ಕಾಂಗ್ರೆಸ್ಸಿಗರು ಅಂತಹದ್ದೇ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾರೆ" ಎಂದು ಎಚ್ಚರಿಸಿದ್ದಾರೆ. ಧಾರ್ಮಿಕ ಕಾರ್ಯಗಳಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.




