ಚಂದ್ರವಳ್ಳಿ ನ್ಯೂಸ್, ರಾಮನಗರ:
ಬಿಡದಿ ಟೌನ್‌ಶಿಪ್‌ಯೋಜನೆಗೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಜೆಡಿಎಸ್-ಬಿಜೆಪಿ ನಡುವಿನ ಸಭಾಂಗಣ ಹಾಗೂ ಬೀದಿ ಜಟಾಪಟಿ ತೀವ್ರಗೊಂಡಿದೆ. ಭಾನುವಾರ ಯೋಜನೆ ವಿರೋಧಿಸಿ ಜೆಡಿಎಸ್ ಪಾದಯಾತ್ರೆ ಕೈಗೊಂಡಿರುವುದಕ್ಕೆ ಸಚಿವ ಎಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದು, "ಇದು ಪಾದಯಾತ್ರೆ ಅಲ್ಲ, ಎಚ್.ಡಿ. ಕುಮಾರಸ್ವಾಮಿ ತಮ್ಮ ಆಡಳಿತಾವಧಿಯಲ್ಲಿ ಮಾಡಿದ ಪಾಪಕ್ಕೆ ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ ಯಾತ್ರೆ" ಎಂದು ವ್ಯಂಗ್ಯವಾಡಿದ್ದಾರೆ.
ಶನಿವಾರ ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಡದಿ ಟೌನ್‌ಶಿಪ್‌ಯೋಜನೆಯ ಮೂಲ ಸೂತ್ರಧಾರರೇ ಕುಮಾರಸ್ವಾಮಿಯವರು. ಈ ಯೋಜನೆ ಜಾರಿಗೆ ತನ್ನಿ ಎಂದು ರೈತರಾಗಲಿ ಅಥವಾ ಸಾರ್ವಜನಿಕರಾಗಲಿ ಅವರನ್ನು ಕೇಳಿರಲಿಲ್ಲ. ತಾವೇ ತಂದ ಯೋಜನೆಯನ್ನು ಈಗ ತಾವೇ ವಿರೋಧಿಸಿ ರಾಜಕೀಯ ಪಾದಯಾತ್ರೆ ಮಾಡುತ್ತಿರುವುದು ಅತ್ಯಂತ ದುರಾದೃಷ್ಟಕರ ಎಂದು ಲೇವಡಿ ಮಾಡಿದರು.
ಸಾಕಷ್ಟು ದಪ್ಪಗಾಗಿದ್ದಾರೆ, ವಾಕಿಂಗ್ ಮಾಡಲಿ:
ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದರೆ ಸರ್ಕಾರ ಯಾವುದೇ ಕಾರಣಕ್ಕೂ ವಿರೋಧಿಸುವುದಿಲ್ಲ. ಆದರೆ ಜೆಡಿಎಸ್‌ಮತ್ತು ಬಿಜೆಪಿ ನಾಯಕರು ಕುಳಿತು ಕುಳಿತು ದಪ್ಪಗಾಗಿದ್ದಾರೆ. ಸ್ವಲ್ಪ ದೇಹದಂಡನೆ (ಎಕ್ಸರ್‌ಸೈಸ್) ಆಗಲಿ ಎಂದು ವಾಕಿಂಗ್ ಮಾಡುತ್ತಿದ್ದಾರೆ ಅಷ್ಟೇ ಎಂದು ಬಾಲಕೃಷ್ಣ ಲೇವಡಿ ಮಾಡಿದರು. ಅಲ್ಲದೆ, ವಿವಿಧ ಆಡಳಿತಾವಧಿಗಳಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಯಾರು ಏನೇನು ತೀರ್ಮಾನ ಕೈಗೊಂಡಿದ್ದಾರೆ ಎಂಬ ಪೂರ್ಣ ವಿವರಗಳನ್ನೊಳಗೊಂಡ ಜಾಹೀರಾತನ್ನು ಶೀಘ್ರದಲ್ಲೇ ಸರ್ಕಾರ ಹಾಗೂ ಕಾಂಗ್ರೆಸ್‌ಪಕ್ಷದ ವತಿಯಿಂದ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ನೈಸ್ ರಸ್ತೆ ವಿವಾದಕ್ಕೂ ಟಾಂಗ್:
ನೈಸ್ ರಸ್ತೆಗೆ ಟೋಲ್ ಪಾವತಿಸಬೇಡಿ ಎಂದು ಕರೆ ನೀಡಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿದ ಸಚಿವರು, "ನೈಸ್ ಯೋಜನೆಯ ಹುಟ್ಟು ನಡೆದಿದ್ದೇ ಎಚ್.ಡಿ. ದೇವೇಗೌಡರ ಆಡಳಿತಾವಧಿಯಲ್ಲಿ. ದೇವೇಗೌಡರು ಅಂದು ಈ ಯೋಜನೆ ಮಾಡದಿದ್ದರೆ ಇಂದು ಈ ಚರ್ಚೆಯೇ ಇರುತ್ತಿರಲಿಲ್ಲ. ಜವಾಬ್ದಾರಿಯುತ ಕೇಂದ್ರ ಸಚಿವ ಸ್ಥಾನದಲ್ಲಿದ್ದುಕೊಂಡು 'ಟೋಲ್ ಕಟ್ಟಬೇಡಿ' ಎಂದು ಜನರನ್ನು ಎತ್ತಿಕಟ್ಟುವುದು ಕ್ಷುಲ್ಲಕ ರಾಜಕಾರಣ. ಕಾನೂನುಬದ್ಧವಾಗಿ ಹೋರಾಟ ಮಾಡಲಿ. ಗಲಾಟೆ ನಡೆದು ಏನಾದರೂ ಅನಾಹುತವಾದರೆ ಯಾರು ಜವಾಬ್ದಾರಿ?" ಎಂದು ಪ್ರಶ್ನಿಸಿದರು.
ಪ್ರತಿಪಕ್ಷಗಳ ಈ ಪಾದಯಾತ್ರೆಗೆ ಸರ್ಕಾರ ಯಾವುದೇ ರೀತಿಯ ಅಡ್ಡಿಪಡಿಸುವುದಿಲ್ಲ, ಸಂಪೂರ್ಣ ಅನುಮತಿ ನೀಡುತ್ತದೆ ಎಂದ ಸಚಿವರು, ಅವರು ತಮ್ಮ ಪ್ರಾಯಶ್ಚಿತ ಯಾತ್ರೆಯನ್ನು ನೆಮ್ಮದಿಯಿಂದ ಪೂರ್ಣಗೊಳಿಸಲಿ ಎಂದು ತಿರುಗೇಟು ನೀಡಿದರು.



