ಚಂದ್ರವಳ್ಳಿ ನ್ಯೂಸ್, ಗಂಗಾವತಿ:
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಯೋಧ್ಯೆ ಗ್ರಾಮದಲ್ಲಿ ಆನ್‌ಲೈನ್ ಗೇಮಿಂಗ್ ವ್ಯಸನವು ಒಂದು ಇಡೀ ಕುಟುಂಬವನ್ನೇ ಬಲಿಪಡೆದ ಆಘಾತಕಾರಿ ಘಟನೆ ನಡೆದಿದೆ.
ಪಬ್‌ಜಿ ಗೇಮ್‌ಗೆ ದಾಸನಾಗಿದ್ದ 18 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ಮಾನಸಿಕ ನಿಯಂತ್ರಣ ಕಳೆದುಕೊಂಡು, ಹೆತ್ತ ಕರುಳು ಹಾಗೂ ಒಡಹುಟ್ಟಿದವರ ಮೇಲೆಯೇ ಭೀಕರವಾಗಿ ಚಾಕುವಿನಿಂದ ದಾಳಿ ಮಾಡಿದ್ದಾನೆ. ಈ ರಕ್ತಸಿಕ್ತ ಘಟನೆಯಲ್ಲಿ ತಂದೆ ಮತ್ತು ಅಕ್ಕ ಇಬ್ಬರು ದುರಂತ ಅಂತ್ಯ ಕಂಡಿದ್ದಾರೆ.
ಘಟನೆಯ ಸಂಪೂರ್ಣ ವಿವರ ಇಲ್ಲಿದೆ: ನಡೆದಿದ್ದೇನು?:
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಯೋಧ್ಯೆ ಗ್ರಾಮದ ವೆಂಕಟ ನಾಯ್ಡು ಅವರ ಕುಟುಂಬ ಎಂದಿನಂತೆ ಶನಿವಾರ ರಾತ್ರಿ 9 ಗಂಟೆಗೆ ಒಟ್ಟಿಗೆ ಊಟ ಮುಗಿಸಿ ಮಲಗಿತ್ತು. ಆದರೆ, ರಾತ್ರಿ 10 ಗಂಟೆಯ ಸುಮಾರಿಗೆ ಮನೆಯಲ್ಲಿ ಏಕಾಏಕಿ ಚೀರಾಟ ಮತ್ತು ಜೋರಾದ ಶಬ್ದ ಕೇಳಿಬಂದಿದೆ. ವೆಂಕಟ ನಾಯ್ಡು ಅವರ ವೃದ್ಧ ತಂದೆ-ತಾಯಿ ಪಕ್ಕದ ಮನೆಯವರ ಸಹಾಯದೊಂದಿಗೆ ರೂಮ್ ಬಾಗಿಲು ತೆರೆದು ನೋಡಿದಾಗ ಇಡೀ ಕೋಣೆ ರಕ್ತದ ಮಡುವಾಗಿ ಮಾರ್ಪಟ್ಟಿತ್ತು.
ಟ್ವಿಸ್ಟ್ ಕೊಟ್ಟ ಕರೆಂಟ್ ಆಫ್ ರಹಸ್ಯ!:
ಗಾಯಾಳುಗಳ ಪ್ರಾಥಮಿಕ ಹೇಳಿಕೆಯ ಪ್ರಕಾರ, ಎಲ್ಲರೂ ಮಲಗಿದ್ದಾಗ ಇದ್ದಕ್ಕಿದ್ದಂತೆ ರೂಮಿನ ಲೈಟ್ ಆಫ್ ಮಾಡಿ, ಕತ್ತಲಿನಲ್ಲಿ ಈ ಭೀಕರ ದಾಳಿ ನಡೆಸಲಾಗಿದೆ. ಪಿಯುಸಿ ಓದುತ್ತಿದ್ದ ಮಗ ಸಾಯಿ ವೆಂಕಟಮಣಿ (18) ತಂದೆ, ತಾಯಿ ಹಾಗೂ ಅಕ್ಕನಿಗೆ ಚಾಕುವಿನಿಂದ ಮನಸೋಇಚ್ಛೆ ಇರಿದು, ಬಳಿಕ ತನಗೂ ಇರಿದುಕೊಂಡಿದ್ದಾನೆ.
ಬಲಿಯಾದ ಜೀವಗಳು & ಗಾಯಾಳುಗಳ ಸ್ಥಿತಿ:
ಪ್ರಗತಿ (19-ಅಕ್ಕ): ಚಾಕು ಇರಿತದಿಂದ ತೀವ್ರ ರಕ್ತಸ್ರಾವವಾಗಿ ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವೆಂಕಟ ನಾಯ್ಡು (ತಂದೆ): ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸೌಜನ್ಯ (40 - ತಾಯಿ): ಗಂಭೀರವಾಗಿ ಗಾಯಗೊಂಡಿರುವ ತಾಯಿಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಸಾಯಿ ವೆಂಕಟಮಣಿ: ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಪೊಲೀಸರ ನಿಗಾದಲ್ಲಿದ್ದಾನೆ.
ಪೊಲೀಸ್ ಇಲಾಖೆ ತನಿಖೆ ಮತ್ತು ಮುಂದಿನ ಕ್ರಮ:
ಘಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ದಿ ಹಾಗೂ ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
"ವೆಂಕಟ ನಾಯ್ಡು ಅವರ ತಂದೆ (ಆರೋಪಿಯ ತಾತ) ನೀಡಿದ ದೂರಿನನ್ವಯ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೊಮ್ಮಗ ಸಾಯಿ ವೆಂಕಟಮಣಿ ಮೇಲೆಯೇ ಪ್ರಮುಖ ಶಂಕೆ ವ್ಯಕ್ತವಾಗಿದ್ದು, ಆನ್‌ಲೈನ್ ಪಬ್‌ಜಿ ಗೇಮ್ ವ್ಯಸನ ಹಾಗೂ ಮಾನಸಿಕ ಅಸ್ವಸ್ಥತೆಯೇ ಈ ಕೃತ್ಯಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಸದ್ಯ ತನಿಖೆ ಮುಂದುವರಿದಿದೆ."
ರಾಮ್ ಎಲ್. ಅರಸಿದ್ದಿ, ಎಸ್ಪಿ, ಕೊಪ್ಪಳ



