ಸೌಜನ್ಯ ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್ ಮರುತನಿಖೆಗೆ ಅಸ್ತು, ಸಿಬಿಐಗೆ ಛೀಮಾರಿ!
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಕರಣದ ಮರುತನಿಖೆಗೆ ಸಮ್ಮತಿ (ಅಸ್ತು) ಸೂಚಿಸಿದೆ.
ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠವು ಈ ನಿರ್ದೇಶನ ನೀಡಿದೆ.
ಸಿಬಿಐ ವಿರುದ್ಧ ನ್ಯಾಯಪೀಠ ತೀವ್ರ ಅಸಮಾಧಾನ:
ವಿಚಾರಣೆ ವೇಳೆ ಕೇಂದ್ರೀಯ ತನಿಖಾ ದಳದ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, "ಘಟನೆ ನಡೆದು 14 ವರ್ಷಗಳೇ ಕಳೆದಿವೆ, ಆದರೂ ಸರಿಯಾದ ತನಿಖೆ ನಡೆದಿಲ್ಲ. ತನಿಖಾಧಿಕಾರಿ ಘಟನಾ ಸ್ಥಳಕ್ಕೆ ಯಾಕೆ ಭೇಟಿ ನೀಡಿರಲಿಲ್ಲ?" ಎಂದು ತಾರಾಸಿಗೆ ತೆಗೆದುಕೊಂಡಿತು.
ಸುಪ್ರೀಂ ಕೋರ್ಟ್ ನೀಡಿರುವ ಪ್ರಮುಖ ಸೂಚನೆಗಳು:
ಎಸ್‌ಐಟಿ ರಚನೆ: ಪ್ರಕರಣದ ಮರುತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸುವ ಕುರಿತು ನ್ಯಾಯಾಲಯವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಸಾಕ್ಷಿಗಳಿಗೆ ಭದ್ರತೆ: ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆಯನ್ನು ತಕ್ಷಣವೇ ಒದಗಿಸಬೇಕು.
ಮಧ್ಯಂತರ ವರದಿ: ಮರುತನಿಖೆಗೆ ಅಧಿಕೃತ ಆದೇಶ ಹೊರಡಿಸಿದ ಬಳಿಕ, ತನಿಖೆಯ ಪ್ರಗತಿಯ ಕುರಿತು ಮಧ್ಯಂತರ ವರದಿ ಸಲ್ಲಿಸುವಂತೆ ಸೂಚಿಸಲಾಗುವುದು.
ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಸೌಜನ್ಯ ಕುಟುಂಬಕ್ಕೆ ಸುಪ್ರೀಂ ಕೋರ್ಟ್‌ನ ಈ ನಡೆ ಹೊಸ ಭರವಸೆ ಮೂಡಿಸಿದೆ.
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore