ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪದವೀಧರ ಯುವಜನತೆ ದೇಶ ಹಿತಕ್ಕಾಗಿ ದುಡಿಯುವ ಸಂಕಲ್ಪ ಮಾಡಬೇಕು. ನವೋದ್ಯಮಗಳ ಮೂಲಕ ಹೊಸಪೀಳಿಗೆಯ ಆಲೋಚನೆಗಳು ಸಾಕಾರಗೊಳ್ಳಬೇಕು ಎಂದು ಜೆಪಿ ಮಾರ್ಗನ್ಸ್ ಚೇಸ್‌ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ಮಹಾಲಿಂಗಂ ಹೇಳಿದರು.
ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಜೆನ್-ಝಿ ಪೀಳಿಗೆಯ ಆಲೋಚನೆಗಳು ಔದ್ಯೋಗಿಕ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪ್ರಗತಿಗೆ ಪೂರಕವಾಗಿವೆ. ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ನಿರಂತರ ಪರಿಶ್ರಮ ಮತ್ತು ಪ್ರಯೋಗಶೀಲತೆ ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಘಟಿಕೋತ್ಸವ ಭಾಷಣ ಮಾಡಿದ ಶ್ರೀ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಪದವಿ ಕೇವಲ ಶೈಕ್ಷಣಿಕ ಅರ್ಹತೆ ಮಾತ್ರವಾದರೆ ಪ್ರಯೋಜನವಿಲ್ಲ. ಸಾಮಾಜಿಕ ಕಾಳಜಿ ಮತ್ತು ವ್ಯಕ್ತಿಗತ ಬೆಳವಣಿಗೆಗೆ ಪೂರಕವಾದ ಕೌಶಲ್ಯಗಳನ್ನು ರೂಡಿಸಿಕೊಳ್ಳುವ ಮೂಲಕ ಸರ್ವತೋಮುಖ ಬೆಳವಣಿಗೆ ಹೊಂದಬೇಕು. ಗ್ರಾಮೀಣ ಭಾಗದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಔದ್ಯೋಗಿಕ ವಲಯದಲ್ಲಿ ವಿಫುಲ ಅವಕಾಶಗಳಿವೆ ಎಂದರು.
ಇದೇ ವೇಳೆ 2022-26ನೇ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಇಂಜಿನಿಯರಿಂಗ್ ಪದವಿಗಳನ್ನು ಪೂರೈಸಿರುವ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರತಿಜ್ಞಾವಿಧಿ ಬೋಧಿಸಿ ಬಳಿಕ, ಪದವಿ ಪ್ರದಾನ ಮಾಡಲಾಯಿತು.
ಪ್ರಾಂಶುಪಾಲ ಡಾ.ಜಿ.ಮುರಳಿ ಅಧ್ಯಕ್ಷತೆ ವಹಿಸಿದ್ದರು. ಗೌರ್ನಿಂಗ್ ಕೌನ್ಸಿಲ್ ಸದಸ್ಯರಾದ ವಿದ್ವತ್‌ಕುಮಾರ್, ಎನ್.ಉತ್ತಮ್‌ಕುಮಾರ್, ಉಪಪ್ರಾಂಶುಪಾಲ ಡಾ.ಆರ್.ಎಂ.ಸುನಿಲ್‌ಕುಮಾರ್, ಶೈಕ್ಷಣಿಕ ನಿರ್ದೇಶಕ ಡಾ.ಎಂ.ಶ್ರೀನಿವಾಸರೆಡ್ಡಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಎನ್.ಬಿ.ಶಂಕರ್, ವಿವಿಧ ವಿಭಾಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.




