Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು
ರಂಗಸಿರಿ ನೆನಪಿನ ಮೆರವಣಿಗೆ -
3
ಆಕಸ್ಮಿಕವಾಗಿ ಬಂದ ಕೇಸರಿ ಹರವೂ
ಚಳವಳಿ ನೆನಪಾಗಿ ಉಳಿದ ತೆಂಕ-ಬಡಗ
ಹಾಗೆ ನೋಡಿದರೆ, ಚಲನಚಿತ್ರ ನಿರ್ದೇಶನದಲ್ಲಿ ಭೂಮಿ ಗೀತಾಚಿತ್ರದ ಮೂಲಕ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಕೇಸರಿ ಹರವೂ ಅವರು ನಮ್ಮೂರಿಗೆ ಬಂದಿದ್ದೇ ಒಂದು ಆಕಸ್ಮಿಕ. ಆದರೆ, ಆ ಆಕಸ್ಮಿಕವೇ ಮುಂದೆ ನಮ್ಮ ಹೋರಾಟದ ಮತ್ತು ನಮ್ಮ ರಂಗಭೂಮಿಯ ಮರೆಯಲಾಗದ ಅಧ್ಯಾಯವೊಂದಕ್ಕೆ ನಾಂದಿ ಹಾಡುತ್ತದೆ ಎಂಬುದು ಆಗ ನಮಗೆ ಗೊತ್ತಿರಲಿಲ್ಲ.

ಅದು ತೊಂಬತ್ತರ ದಶಕ.
ಬಾಗೂರು
ನವಿಲೆ ಸುರಂಗ ಯೋಜನೆಯಿಂದ ಸಂತ್ರಸ್ತವಾಗಿದ್ದ ಹಳ್ಳಿಗಳ ಜನರನ್ನು ಸಂಘಟಿಸಿ, ಅವರ ನೋವಿಗೆ ಧ್ವನಿಯಾಗಲು ಹೋರಾಟ ರೂಪಿಸುವ ಅವಿರತ ಪ್ರಯತ್ನ ನಡೆಯುತ್ತಿತ್ತು. ಆ ಹೋರಾಟಕ್ಕೆ ಮೊದಲ ಕಿಡಿ ಹೊತ್ತಿದ್ದು ನಮ್ಮ ತಗಡೂರಿನಲ್ಲೇ. ಮೊದಲ ಸಭೆಯೂ ಅಲ್ಲಿಯೇ ನಡೆದಿತ್ತು.

Advertisement

ತಗಡೂರು, ಲಕ್ಕರಸನಹಳ್ಳಿ, ಓಬಳಾಪುರ, ಕಲ್ಲೇಸೋಮನಹಳ್ಳಿ, ಟಿ.ರಂಗಾಪುರ, ಕಾಮನಾಯ್ಕನಹಳ್ಳಿ, ಹೊನ್ನೇನಹಳ್ಳಿಹೀಗೆ ಆರಂಭವಾದ ಹೋರಾಟದ ವ್ಯಾಪ್ತಿ ಬಾಗೂರಿನಿಂದ ನವಿಲೆವರೆಗೂ ವಿಸ್ತರಿಸಿತು. ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳ ಜನರು ನಮ್ಮೊಂದಿಗೆ ಕೈಜೋಡಿಸಿ ಹೋರಾಟಕ್ಕೆ ಧುಮುಕಿದರು.

ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ, ಗೊರೂರು ಹೇಮಾವತಿ ಯೋಜನೆಯ ಮುಖ್ಯ ಎಂಜಿನಿಯರ್ ಕಚೇರಿ ಮುತ್ತಿಗೆ, ಹೋರಾಟಗಾರರ ಮೇಲೆ ಲಾಠಿಚಾರ್ಜ್, ಪೊಲೀಸ್ ದೌರ್ಜನ್ಯ ಖಂಡಿಸಿ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹನಂತರ ಬಾಗೂರಿನಿಂದ ಬೆಂಗಳೂರಿಗೆ ಪಾದಯಾತ್ರೆ. ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಹತ್ತು ದಿನಗಳ ಕಾಲ ಸರಣಿ ಧರಣಿ ಸತ್ಯಗ್ರಹ.

ಆ ದಿನಗಳು ಕೇವಲ ಹೋರಾಟದ ದಿನಗಳಾಗಿರಲಿಲ್ಲ; ನಮ್ಮ ಬದುಕಿನೊಳಗೆ ಆಳವಾಗಿ ಬೇರೂರಿದ ದಿನಗಳಾಗಿದ್ದವು.
ಅಂತಹ ಹೋರಾಟವನ್ನು ಅಧ್ಯಯನ ಮಾಡಲೆಂದೇ ಕೇಸರಿ ಹರವೂ ನಮ್ಮ ಹಳ್ಳಿಗಳಿಗೆ ಬಂದರು. ಕಾಮನಾಯ್ಕನಹಳ್ಳಿ ಬೋರೆಯ ಮೇಲಿರುವ ಮರಿಗೌಡರ ತೋಟದ ಮನೆಯಲ್ಲಿ ಹಾಗೆ ನೆಲೆ ನಿಂತರು.

ನಾಲ್ಕೈದು ತಿಂಗಳು ಇರಬಹುದು ಅಂದುಕೊಂಡಿದ್ದೆವು. ಹಾಗೆ ಉಳಿಯಬೇಕೆಂದು ಬಂದವರು, ನೋಡನೋಡುತ್ತಿದ್ದಂತೆ ಮೂರು ವರ್ಷಗಳ ಕಾಲ ಅಲ್ಲಿಯೇ ಉಳಿದುಬಿಟ್ಟರು.

ಆ ಮನೆ ಕ್ರಮೇಣ ನಮಗೂ ಒಂದು ಚಟುವಟಿಕೆಯ ತಾಣವಾಯಿತು. ವಾರಾಂತ್ಯದಲ್ಲಿ ನಮ್ಮೂರಿಗೆ ಹೋದಾಗ ಕೂಗಳತೆ ದಣುರದಲ್ಲಿರುವ ಕೇಸರಿ ಅವರ ಮನೆಗೆ ಭೇಟಿ ನೀಡುವುದು ತಪ್ಪದ ಸಂಗತಿಯಾಗಿತ್ತು. ಒಮ್ಮೊಮ್ಮೆ ನನ್ನ ಜೊತೆ ಷಾಡ್ರಾಕ್ ಕೂಡ ಇರುತ್ತಿದ್ದರು. ಹೋರಾಟ, ಜನರ ಬದುಕು, ರಾಜಕಾರಣ, ಕಲೆ, ಸಿನಿಮಾಹೀಗೆ ನಮ್ಮ ಮಾತುಕತೆಗಳು ಗಂಟೆಗಟ್ಟಲೆ ಸಾಗುತ್ತಿದ್ದವು.

news_1789951164_6_656.webp

 

news_1789951164_5_693.webp

 

ಕೇಸರಿ ಹರವೂ ಅವರ ಮನಸ್ಸಿನಲ್ಲಿ ಬಾಗೂರು ಹೋರಾಟದ ಕಥೆಯನ್ನು ಸಿನಿಮಾವಾಗಿ ಕಟ್ಟುವ ಕನಸಿತ್ತು. ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಆದರೆ ಹಣ ಹಾಕುವ ನಿರ್ಮಾಪಕರು ಸಿಗಲಿಲ್ಲ. ಸಿನಿಮಾ ಕನಸು ಕೈಗೂಡಲಿಲ್ಲ.

ಆಗ ನಮ್ಮ ನಡುವೆ ಒಂದು ಮಾತು ಮೂಡಿತು.
ಸಿನಿಮಾ ಆಗದಿದ್ದರೆ ಏನು? ಇದನ್ನು ಒಂದು ನಾಟಕವಾಗಿ ಮಾಡಿಸಬಹುದಲ್ಲವೇ?”
ಆ ಒಂದು ಮಾತು ಮುಂದೆ ದೊಡ್ಡ ರಂಗಯಾನಕ್ಕೆ ದಾರಿ ಮಾಡಿಕೊಟ್ಟಿತು.

ಚರ್ಚೆ ಗಂಭೀರವಾಯಿತು. ಕೊನೆಗೆ ಕೇಸರಿ ಹರವೂ ಅವರೂ ನಾಟಕ ಮಾಡಲು ಒಪ್ಪಿದರು. ಹಾಸನದಲ್ಲಿಯೇ ಠಿಕಾಣಿ ಹೂಡಿದರು.
ಅದು ರಂಗಸಿರಿಯಲ್ಲಿಯೂ ಬದಲಾವಣೆಯ ಕಾಲಘಟ್ಟ. ಆದರೂ ಕೇಸರಿ ಹರವೂ ಅವರಿಂದಲೇ ನಾಟಕ ಮಾಡಿಸಬೇಕು ಎಂಬ ಒಮ್ಮತ ನಮ್ಮೆಲ್ಲರಲ್ಲೂ ಮೂಡಿತು.

ಹೀಗೆ ಹುಟ್ಟಿಕೊಂಡದ್ದು ತೆಂಕ ಬಡಗ’.
ನಮ್ಮ ಭಾಗದ ಭಾಷೆಯನ್ನು ಎಷ್ಟು ಸಹಜವಾಗಿ, ಎಷ್ಟು ಸಮರ್ಥವಾಗಿ ದುಡಿಸಿಕೊಳ್ಳಬಹುದು ಎಂಬುದನ್ನು ಕೇಸರಿ ಹರವೂ ಅವರು ಈ ನಾಟಕದ ಮೂಲಕ ತೋರಿಸಿಕೊಟ್ಟರು. ನಾಟಕದ ಕಥೆಯೂ ನಮ್ಮ ನೆಲದ್ದೇ. ನಮ್ಮ ಜನರದ್ದೇ. ನಮ್ಮ ರಾಜಕಾರಣದ್ದೇ.

ಕಾಮನಾಯ್ಕನಹಳ್ಳಿ ಕೆರೆಗೆ ಸಹಜವಾಗಿ ಹರಿದುಬರುತ್ತಿದ್ದ ನೀರಿಗೆ, ನೀರಾವರಿ ಹೆಸರಿನಲ್ಲಿ ನಾಲೆ ಅಡ್ಡಿಯಾಗಿದ್ದ ಸಂದರ್ಭ. ಅದರ ವಿರುದ್ಧ ಎದ್ದ ಜನರ ಧ್ವನಿಯೇ ನಾಟಕದ ಕೇಂದ್ರಬಿಂದು. ಅದರ ಸುತ್ತ ಚನ್ನರಾಯಪಟ್ಟಣದ ರಾಜಕಾರಣ, ಹಳ್ಳಿಯ ಬದುಕು, ಅಧಿಕಾರದ ಆಟ, ಜನರ ಅಸಹಾಯಕತೆಎಲ್ಲವೂ ಒಂದೊಂದಾಗಿ ಅನಾವರಣಗೊಂಡವು.

ಹೀಗಾಗಿ ತೆಂಕ ಬಡಗನಮ್ಮ ಹಾಸನದ ರಾಜಕಾರಣಕ್ಕೆ ಹಿಡಿದ ಕನ್ನಡಿಯಂತಿತ್ತು.
ಕೇಸರಿ ಹರವೂ ಅವರ ಕೈಯಲ್ಲಿ ನವಿರಾಗಿ ರೂಪುಗೊಂಡ ಆ ನಾಟಕದಲ್ಲಿ ನಾನೂ ಪ್ರಮುಖ ಪಾತ್ರಧಾರಿಯಾಗಿದೆ. ನನ್ನದು ಚನ್ನರಾಯಪಟ್ಟಣ ತಾಲೂಕಿನ ಪ್ರಭಾವಿ ರಾಜಕಾರಣಿಯ ಪಾತ್ರ. ಸತ್ಯಮೂರ್ತಿಗೂ ಇದೇ ಬಗೆಯ ಮತ್ತೊಂದು ಪಾತ್ರ. ಇಬ್ಬರ ಜೋಡಿ ಮಸ್ತ್ ಇತ್ತು. ಬೆಂಗಳೂರಯ್ಯ ಪಾತ್ರಕ್ಕೆ ಶಾಡ್ರಾಕ್ ಜೀವ ತುಂಬಿದರು.

ಹಳ್ಳಿಗೆ ಭೇಟಿ ನೀಡುತ್ತಿದ್ದಂತೆ ಗ್ರಾಮದ ಮಹಿಳೆಯರು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುವ ದೃಶ್ಯವಿತ್ತು. ಸುಲಕ್ಕ ಪಾತ್ರದಲ್ಲಿ ಚಿತ್ರಲೇಖ, ರತ್ನಕ್ಕ ಪಾತ್ರದಲ್ಲಿ ನಾಜೀಮಾ ಪಗಡದಸ್ತಾಗಿ ನಟಿಸಿದರು. ಜಂಬೂರಮ್ಮಳಾಗಿ ನಿರ್ಮಲ ವಿ. ದೇವ್, ಬನಶಂಕರಮ್ಮಳಾಗಿ ಆಶಾ, ಗ್ರಾಮದ ಮಹಿಳೆಯಾಗಿ ಅಂಬಿಕಾಇವರ ಅಭಿನಯಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿವೆ.

ಆ ದೃಶ್ಯದಲ್ಲಿ ಮಹಿಳೆಯರ ಧ್ವನಿಯಲ್ಲಿ ಕೇವಲ ಸಂಭಾಷಣೆ ಇರಲಿಲ್ಲ; ತಮ್ಮ ಬದುಕಿನ ನೋವು, ಆಕ್ರೋಶ ಮತ್ತು ಪ್ರಶ್ನೆಗಳೇ ಮೊಳಗುತ್ತಿದ್ದವು.

ಭೂಮಿಕಾಳ ಮೊದಲ ರಂಗಪ್ರವೇಶ:
ಈ ನಾಟಕ ನನಗೆ ವೈಯಕ್ತಿಕವಾಗಿಯೂ ವಿಶೇಷ.
ಹಳ್ಳಿ ರೈತ ಕುಟುಂಬದ ಮಗಳಾಗಿ
ಮಧುಪಾತ್ರ ಮಾಡಿದ್ದ ನನ್ನ ಮಗಳು ಭೂಮಿಕಾಳಿಗೆ ಇದು ಮೊದಲ ರಂಗವೇದಿಕೆ. ಪಾತ್ರ ಚಿಕ್ಕದಾಗಿದ್ದರೂ, ತನ್ನ ಅಭಿನಯದಿಂದ ಎಲ್ಲರಿಂದಲೂ ಸೈಅನ್ನಿಸಿಕೊಂಡಳು.

ಅವಳು ಮೊದಲ ಬಾರಿಗೆ ರಂಗದ ಮೇಲೆ ನಿಂತ ಕ್ಷಣ
ತಂದೆಯಾಗಿ ನನಗೆ ಅದು ಹೆಮ್ಮೆಯ ಕ್ಷಣ.
ಇಂದಿಗೂ ಆ ದೃಶ್ಯವನ್ನು ನೆನಪಿಸಿಕೊಂಡಾಗ ಮನಸ್ಸು ತುಂಬಿಕೊಳ್ಳುತ್ತದೆ.

ಕೆಂಚನಾಗಿ ಮರೆಯಲಾಗದ ಗುರುಪ್ರಸಾದ್:
ತೆಂಕ ಬಡಗಎಂದಾಕ್ಷಣ ನನ್ನ ಮನಸ್ಸಿನಲ್ಲಿ ಮೊದಲು ಮೂಡುವ ಮುಖಗಳಲ್ಲಿ ಒಂದು ಎಚ್.ಡಿ ಗುರುಪ್ರಸಾದ್ ಅವರದು.

ಹೊಳೆನರಸೀಪುರದ ಗುರುಪ್ರಸಾದ್ ಕನ್ನಡಪ್ರಭ ಪತ್ರಿಕೆಯ ತಾಲೂಕು ವರದಿಗಾರ. ನಾಟಕದಲ್ಲಿ ಕೆಂಚನ ಪಾತ್ರ ಮಾಡಿದ್ದರು.

ಅವರು ಆ ಪಾತ್ರವನ್ನು ಅಭಿನಯಿಸಲಿಲ್ಲ. ಅದರೊಳಗೆ ತಲ್ಲೀನರಾಗಿಬಿಟ್ಟಿದ್ದರು. ಅಷ್ಟರ ಮಟ್ಟಿಗೆ ಅವರ ಅಭಿನಯ ಜೀವಂತವಾಗಿತ್ತು.

ಇಂದು ಗುರು ನಮ್ಮೊಂದಿಗೆ ಇಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳುವುದು ಇಂದಿಗೂ ಕಷ್ಟ. ಆತ ಬದುಕಿದ್ದಿದ್ದರೆ ಇನ್ನೂ ಎಷ್ಟೋ ನಾಟಕಗಳು ಅವನಿಂದ ಸಾಧ್ಯವಾಗುತ್ತಿದ್ದವು. ಇನ್ನೆಷ್ಟೋ ಪಾತ್ರಗಳು ಅವನಿಗಾಗಿ ಕಾಯುತ್ತಿದ್ದವು. ಆದರೆ ವಿಧಿಯ ಮುಂದೆ ನಮ್ಮ ನೆನಪುಗಳಷ್ಟೇ ಉಳಿದಿವೆ.

ಗುರುನ ನೆನಪು ಬಂದಾಗಲೆಲ್ಲ ತೆಂಕ ಬಡಗದ ರಂಗ ಮತ್ತೊಮ್ಮೆ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.
ಬಿಎಡ್ ಕಾಲೇಜಿನ ಎಚ್.ಎನ್. ನರಸಿಂಗಪ್ಪ
, ರುದ್ರೇಶ್, ವಿಶ್ವನಾಥ್, ಗುತ್ತಿನಕೆರೆ ರಂಗನಾಥ್, ವಿ.ಪಿ. ಕೃಷ್ಣೇಗೌಡ, ಎಸ್. ರಾಜಶೇಖರ್, ಮನು, ಜವರಯ್ಯ, ಸುಧಾಕರ ಬೆಳಗುಲಿ, ಯೋಗೇಶ್ ಎಸ್.ಆರ್., ದಿನೇಶ್ ಕುಮಾರ್ ಸೇರಿದಂತೆ ಎಲ್ಲರ ಪಾತ್ರಗಳೂ ನಾಟಕಕ್ಕೆ ಭರ್ಜರಿ ಸಾಥ್ ನೀಡಿದವು.

ರಾಮಮೂರ್ತಿ ಅವರು ಬರೆದ ಹಾಡುಗಳನ್ನು ದಿವ್ಯ, ಗುಂಡೂರಾಜ್, ನಾರಾಯಣಗೌಡ, ಕೃಷ್ಣೇಗೌಡ, ಪರಮೇಶ್, ಬ್ರಿಜೇಶ್ ರಸವತ್ತಾಗಿ ಹಾಡಿದರು. ಮಹದೇವ ಹಡಪದ ಅವರ ಬೆಳಕು ವಿನ್ಯಾಸ, ಹನುಮಂತು ಅವರ ಪ್ರಸಾದನ, ಮೈಕ್ ಮಲ್ಲೇಶ್ ಅವರ ಸಹಕಾರಇವೆಲ್ಲವೂ ನಾಟಕದ ಯಶಸ್ಸಿನ ಹಿಂದಿದ್ದ ಮೌನ ಶಕ್ತಿಗಳು.

ಮತ್ತು ಈ ನಾಟಕದ ಮತ್ತೊಂದು ವಿಶೇಷ ಪ್ರಯೋಗ ಕಾಮನಾಯ್ಕನಹಳ್ಳಿಯ ಕರಪಾಲ ಮೇಳ.
ಅದನ್ನು ನಾಟಕದೊಳಗೆ ಸಂಯೋಜಿಸಿದ್ದು ಹೊಸ ಪ್ರಯೋಗವಾಗಿತ್ತು. ರಂಗದ ಮೇಲಿನ ಕಥೆಗೆ ನಮ್ಮ ನೆಲದ ಮಣ್ಣಿನ ವಾಸನೆ ಮತ್ತಷ್ಟು ಬೆರೆತಿತ್ತು.

ತೆರೆಯ ಮುಂದೆ ಕಲಾವಿದರು ಇದ್ದರೆ, ತೆರೆಯ ಹಿಂದೆ ಅಪ್ಪಾಜಿಗೌಡ, ರಂಗಸ್ವಾಮಿ, ಶಿವಕುಮಾರ್ ಕಣಸೋಗಿ, ಉಮೇಶ್, ಹನುಮಂತನಾಯಕ್, ಶಿವಣ್ಣ, ಚಂದ್ರೇಗೌಡ, ಶಂಕರ್, ಲೋಕೇಶ್ ಸೇರಿದಂತೆ ಹಲವರು ನಾಟಕದ ಜೀವಾಳವಾಗಿದ್ದರು.

ಚಳವಳಿ ನಡೆದ ನೆಲದಲ್ಲೇ ನಾಟಕ: ಹಾಸನದಲ್ಲಿ ತೆಂಕ ಬಡಗಯಶಸ್ವಿ ಪ್ರದರ್ಶನ ಕಂಡಿತು. ಆದರೆ ನಮ್ಮ ತವಕ ಅಲ್ಲಿಗೆ ಮುಗಿಯಲಿಲ್ಲ. ಚನ್ನರಾಯಪಟ್ಟಣದಲ್ಲಿಯೇ ನಾಟಕ ಪ್ರದರ್ಶಿಸಬೇಕು ಎಂಬುದು ನಮ್ಮ ಹಠವಾಗಿತ್ತು. ಏಕೆಂದರೆ ಅದೇ ನೆಲದಲ್ಲಿ ಹೋರಾಟ ನಡೆದಿತ್ತು. ಅದೇ ಜನರ ನೋವು. ಅದೇ ಸಂಘರ್ಷ. ಅದೇ ನೆನಪು.

ಆದರೆ ಅಲ್ಲಿ ಪರಿಸ್ಥಿತಿ ಸುಲಭವಾಗಿರಲಿಲ್ಲ. ಚಳವಳಿ ನಡೆದ ನೆಲವಾದ್ದರಿಂದ ಸಂಘರ್ಷದ ವಾತಾವರಣವಿತ್ತು. ಆದರೂ ಪೊಲೀಸ್ ಬಂದೋಬಸ್ತ್‌ನಲ್ಲಿ ತೆಂಕ ಬಡಗಪ್ರದರ್ಶನಗೊಂಡಿತು.

ಅದೊಂದು ವಿಚಿತ್ರ ಅನುಭವ.
ಒಂದು ಕಾಲದಲ್ಲಿ ಬೀದಿಯಲ್ಲಿ ಹೋರಾಟ ಮಾಡಿದ್ದ ಜನರ ನಡುವೆ
, ಅದೇ ಹೋರಾಟದ ಕಥೆ ರಂಗದ ಮೇಲೆ ನಾಟಕವಾಗಿ ಮೂಡಿಬಂದಿತ್ತು.
ಬದುಕಿನಲ್ಲಿ ನಡೆದ ಸಂಘರ್ಷವೇ ಕಲೆಯ ರೂಪ ಪಡೆದು ಜನರ ಮುಂದೆ ನಿಂತಿತ್ತು.

ನಂತರ ಎಲ್ಲೆಡೆ ತೆಂಕ ಬಡಗದ್ದೇ ಹವಾ.
ಅದರ ಯಶಸ್ಸಿನ ಕೀರ್ತಿಯ ಒಂದು ಭಾಗ ರಂಗಸಿರಿಯ ಕಲಾವಿದರಿಗೆ ಸಲ್ಲಬೇಕು. ಮತ್ತೊಂದು ದೊಡ್ಡ ಭಾಗ ಕೇಸರಿ ಹರವೂ ಅವರಿಗೆ ಸಲ್ಲಲೇಬೇಕು.

ಆದರೆ ನನ್ನ ಪಾಲಿಗೆ ತೆಂಕ ಬಡಗಕೇವಲ ಒಂದು ನಾಟಕವಲ್ಲ. ಅದು ನಮ್ಮ ಹೋರಾಟದ ನೆನಪು. ನಮ್ಮ ಹಳ್ಳಿಗಳ ನೋವಿನ ನೆನಪು. ಕೇಸರಿ ಹರವೂ ಅವರೊಂದಿಗೆ ಕಳೆದ ದಿನಗಳ ನೆನಪು.

ರಂಗಸಿರಿಯ ಬದುಕಿನ ಒಂದು ಸುವರ್ಣ ಅಧ್ಯಾಯ. ನನ್ನ ಮಗಳು ಮೊದಲ ಬಾರಿಗೆ ರಂಗದ ಮೇಲೆ ನಿಂತ ಕ್ಷಣದ ನೆನಪು. ನಮ್ಮೊಂದಿಗೆ ಇಂದು ಇಲ್ಲದ ಗುರುಪ್ರಸಾದ್‌ನ ನೆನಪು. ಮತ್ತುನಮ್ಮ ನೆಲದ ಭಾಷೆ, ನಮ್ಮ ಜನರ ಬದುಕು, ನಮ್ಮ ರಾಜಕಾರಣಎಲ್ಲವೂ ಒಂದಾಗಿ ರಂಗದ ಮೇಲೆ ಜೀವ ಪಡೆದ ನೆನಪು.

 

ನಾಟಕ ಮುಗಿದ ಮೇಲೂ ಅದರ ಧ್ವನಿ ನಮ್ಮನ್ನು ಬಿಟ್ಟು ಹೋಗುತ್ತಿರಲಿಲ್ಲ.

ವಿಶೇಷವಾಗಿ ಕೊನೆಯಲ್ಲಿ ಕೇಳಿಬರುತ್ತಿದ್ದ "ನಾವು ಬಲ್ಲವರಲ್ಲ... ನಾವು ತಿಳಿದವರಲ್ಲ...ಬಲ್ಲಂತ ಜನರಿಗೆ ಶರಣೆಂಬೆವು ನಾವು, ಶರಣೆಂಬೆವು ನಾವು" ಕರಪಾಲ ಮೇಳದ ಹಾಡುಗಳು
ತೆರೆ ಇಳಿದರೂ ಆ ಹಾಡುಗಳು ಮತ್ತೆ ಮತ್ತೆ ಕಿವಿಯಲ್ಲಿ ಗುನುಗುಡುತ್ತಿದ್ದವು. ಇಂದಿಗೂ ಗುನುಗುಡುತ್ತಿವೆ. ಕೆಲವರು ನಮ್ಮ ಬದುಕಿಗೆ ಬರುವುದು ಆಕಸ್ಮಿಕವಾಗಿ. ಆದರೆ ಅವರು ಬಿಟ್ಟುಹೋಗುವ ನೆನಪುಗಳು ಮಾತ್ರ ಆಕಸ್ಮಿಕವಾಗಿರುವುದಿಲ್ಲ.

ಕೇಸರಿ ಹರವೂ ನಮ್ಮೂರಿಗೆ ಬಂದದ್ದು ನಮ್ಮ ಪಾಲಿಗೆ ಆಕಸ್ಮಿಕ. ಆ ಆಕಸ್ಮಿಕವೇ ತೆಂಕ ಬಡಗವಾಯಿತು. ತೆಂಕ ಬಡಗನಮ್ಮ ಹೋರಾಟದ ನೆನಪಾಯಿತು. ಮತ್ತು ಆ ನೆನಪುಇಂದಿಗೂ ನಮ್ಮೊಳಗೆ ರಂಗವಾಗಿ ಜೀವಂತವಾಗಿದೆ.

ಚಳವಳಿಯಲ್ಲಿ ಮೂಡಿದ ತೆಂಕ ಬಡಗ ನಾಟಕ ಮುಂದೆ ಕೇಸರಿ ಹರವೂ ನಿರ್ದೇಶನದಲ್ಲಿ ಸಿನಿಮಾವಾಗಲಿ ಎಂಬುದು ನಮ್ಮ ರಂಗಭೂಮಿ ಗೆಳೆಯರೆಲ್ಲರ ಹಾರೈಕೆ.
ಲೇಖನ-ತಗಡೂರು ಶಿವಾನಂದ, ಪತ್ರಕರ್ತರು, ಬೆಂಗಳೂರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು