ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಪದ್ಧತಿಯನ್ನು (OPS) ಶೀಘ್ರದಲ್ಲೇ ಆರನೇ ಗ್ಯಾರಂಟಿಯಾಗಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ತಿಳಿಸಿದ್ದಾರೆ. ತಾಲೂಕಿನ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು,
ಈ ಹಿಂದೆ ಎನ್‌ಪಿಎಸ್ ಜಾರಿಗೆ ತಂದವರೇ ಇಂದು ವಾಪಸ್‌ಗೆ ಒತ್ತಾಯಿಸುತ್ತಿರುವುದು ಮೊಸಳೆ ಕಣ್ಣೀರು. ಕಾಂಗ್ರೆಸ್ ಪಕ್ಷವು ಎಲ್ಲರನ್ನೂ ಸಮಾನತೆಯಿಂದ ಕಾಣುವ ಅಭಿವೃದ್ಧಿಪರ ಪಕ್ಷವಾಗಿದೆ. ನಾನು ಕೇವಲ ಚುನಾವಣೆಗೆ ಸೀಮಿತವಾಗದೆ, ಈ ಭಾಗದ ಪದವೀಧರರ ಸಂಘಟನೆ, ಉದ್ಯೋಗ, ಗೌರವಧನ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಮೂಲಕ ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ ಎಂದರು. ಸರ್ಕಾರಿ ಹುದ್ದೆಗಳ ಭರ್ತಿಗೆ ಚಾಲನೆ: ರಾಜ್ಯ ಸರ್ಕಾರವು ಯುವಕರಿಗೆ ಉದ್ಯೋಗ ಕಲ್ಪಿಸಲು 75,000 ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಸಿದ್ದು, ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ಆದೇಶಿಸಿದೆ.
ಪೊಲೀಸ್, ಅರಣ್ಯ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು. ನಿರಂತರ ಸಂಪರ್ಕದ ಭರವಸೆ: ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 1,20,000 ಹಾಗೂ ಹೊಳಲ್ಕೆರೆಯಲ್ಲಿ 4,300 ಮತದಾರರಿದ್ದಾರೆ.
ಈ ಹಿಂದೆ ಗೆದ್ದ ಬಿಜೆಪಿ ಶಾಸಕರು ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂಬ ಆಕ್ರೋಶ ಮತದಾರರಲ್ಲಿದೆ. ನಾನು ಗೆದ್ದು ಬಂದರೆ ಪ್ರತಿ ತಿಂಗಳು ಕ್ಷೇತ್ರಕ್ಕೆ ಭೇಟಿ ನೀಡಿ ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಶಿಕ್ಷಕರಿಗೆ ಸರ್ಕಾರಿ ನೌಕರರಿಗೆ 6ನೇ ಗ್ಯಾರಂಟಿಯಾಗಿ ಓಪಿಎಸ್ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಜಾರಿಗೆ ತಂದು ಶಿಕ್ಷಕರ ಸರಕಾರಿ ನೌಕರರ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ ಎಂದು ತಿಳಿಸಿದರು .
ಈ ಪ್ರಚಾರ ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎ.ಜಯಪ್ಪ, ತಾಲೂಕು ಶಿಕ್ಷಕ ಸಂಘ್ ಅಧ್ಯಕ್ಷ ನಾಗರಾಜಯ್ಯ, ಶಿಕ್ಷಕ ರವಿಕುಮಾರ್, ಶಿವಕುಮಾರ್, ಚಂದ್ರಪ್ಪ, ನಿವೃತ್ತ ನೌಕರರ ಸಂಘದ ಹೇಮಂತ್ ಗೌಡ, ವೆಂಕಟೇಶ್, ಮೃತ್ಯುಂಜಯಪ್ಪ, ಮಲ್ಲೇಶಪ್ಪ ಸೇರಿದಂತೆ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು. ಫೋಟೋ ಹೊಳಲ್ಕೆರೆ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚಿಸಿದ ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಶಿಕ್ಷಕರ ಜತೆ ಸಂವಾದ ನಡೆಸಿದರು.




