Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸುಸ್ಥಿರ ಇಳುವರಿಗೆ ಸಾವಯವ ಕೃಷಿ ಪದ್ಧತಿ ಸೂಕ್ತ- ರಜನೀಕಾಂತ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮುಂದಿನ ಪೀಳಿಗೆಗೆ ಫಲವತ್ತಾದ ಜೀವಂತ ಮಣ್ಣನ್ನು ಉಳಿಸಿ
, ಕಡಿಮೆ ವೆಚ್ಚದಲ್ಲಿ ಸುಸ್ಥಿರ ಇಳುವರಿ ಪಡೆಯಲು ರೈತರು ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಹೇಳಿದರು.

ಹಿರಿಯೂರು ತಾಲ್ಲೂಕಿನ ಇಲ್ಲಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜುಲೈ 9 ರಿಂದ 11ರವರೆಗೆ ರೈತರಿಗಾಗಿ ಆಯೋಜಿಸಲಾಗಿದ್ದ ನೈಸರ್ಗಿಕ ಕೃಷಿ ಸಾವಯವ ಕೃಷಿ ಕುರಿತ ಮೂರು ದಿನಗಳ ಉಚಿತ ವಸತಿಯುಕ್ತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಣ್ಣು ಪರೀಕ್ಷೆಯ ಫಲಿತಾಂಶ ಆಧರಿಸದೆ ರಾಸಾಯನಿಕ ಗೊಬ್ಬರಗಳು, ಶಿಫಾರಸ್ಸಿಗಿಂತ ಹೆಚ್ಚಿನ ಪೀಡೆನಾಶಕಗಳು ಹಾಗೂ ಕಳೆನಾಶಕಗಳನ್ನು ಅತಿಯಾಗಿ ಬಳಸುವುದರಿಂದ ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳು ನಾಶವಾಗುತ್ತಿವೆ. ಇದರಿಂದ ಮಣ್ಣಿನ ರಚನೆ ಮತ್ತು ಫಲವತ್ತತೆ ಸಂಪೂರ್ಣವಾಗಿ ಕುಸಿಯುತ್ತಿದ್ದು, ಕೃಷಿ ವೆಚ್ಚ ಹೆಚ್ಚಾಗುತ್ತಿದೆ. ಇದು ಮಾನವನ ಆರೋಗ್ಯ ಹಾಗೂ ಪರಿಸರದ ಮೇಲೂ ಗಂಭೀರ ದುಷ್ಪರಿಣಾಮ ಬೀರುತ್ತಿದೆ ಎಂದು ಎಚ್ಚರಿಸಿದರು.

ಕೃಷಿ ಅವಶೇಷಗಳು ಮತ್ತು ಅಡಿಕೆ ಸಿಪ್ಪೆಯನ್ನು ಸುಡುವ ಬದಲು ಸಗಣಿ, ಗಂಜಲ, ಹಸಿರು ಎಲೆಗೊಬ್ಬರಗಳನ್ನು ಬಳಸಿ ಕಾಂಪೋಸ್ಟ್ ಹಾಗೂ ಎರೆಹುಳು ಗೊಬ್ಬರ ತಯಾರಿಸಬೇಕು. ಕನಿಷ್ಠ ಉಳುಮೆ, ಕಂದಕ-ಬದು ನಿರ್ಮಾಣ, ಮಲ್ಚಿಂಗ್ (ಮುಚ್ಚಿಗೆ) ಅಳವಡಿಕೆಯಿಂದ ಮಣ್ಣಿನ ತೇವಾಂಶ ಮತ್ತು ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ಮೂರು ದಿನಗಳ ಈ ಕಾರ್ಯಾಗಾರದಲ್ಲಿ ರೈತರಿಗೆ ಕೇವಲ ಸೈದ್ಧಾಂತಿಕ ಮಾಹಿತಿ ನೀಡದೆ, ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳ ಮೂಲಕ ನೈಸರ್ಗಿಕ ಕೃಷಿಯ ವಿವಿಧ ಆಯಾಮಗಳನ್ನು ಪರಿಚಯಿಸಲಾಯಿತು. ಮೊದಲನೇ ದಿನ ಬ್ಯಾಡರಹಳ್ಳಿ ಗ್ರಾಮದ ಪ್ರಗತಿಪರ ಸಾವಯವ ಕೃಷಿಕ ಇಂದೂಧರ ಅವರು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿರುವ ಯಶಸ್ವಿ ಕೃಷಿ ಪದ್ಧತಿಗಳನ್ನು ಹಂಚಿಕೊಂಡರು. ನೀರು, ಪೋಷಕಾಂಶಗಳ ನಿರ್ವಹಣೆ ಹಾಗೂ ಪರಿಸರ ಸ್ನೇಹಿ ಕೀಟ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದ ಅವರು, ಜೀವಾಮೃತ, ಬೀಜಾಮೃತ, ಘನ ಜೀವಾಮೃತ ಮತ್ತು ಸಸ್ಯ ಪ್ರಚೋದಕಗಳನ್ನು ಸ್ಥಳದಲ್ಲೇ ತಯಾರಿಸಿ ಪ್ರಾತ್ಯಕ್ಷಿಕೆ ನೀಡಿದರು.

ಎರಡನೇ ದಿನ ಮಲ್ಟಿಪ್ಲೆಕ್ಸ್ ಬಯೋಟೆಕ್‍ನ ತಾಂತ್ರಿಕ ತಜ್ಞರಾದ ಕುಮಾರ್, ಶೃತಿ ಮತ್ತು ಪ್ರಸನ್ನ ಅವರು ತರಬೇತಿ ನೀಡಿದರು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಸೂಕ್ಷ್ಮಜೀವಿಗಳ ಪಾತ್ರ ಮತ್ತು ಜೈವಿಕ ಪೀಡೆನಾಶಕಗಳ ಮಹತ್ವವನ್ನು ತಿಳಿಸಿಕೊಟ್ಟರಲ್ಲದೆ, ತೋಟಗಾರಿಕಾ ಬೆಳೆಗಾರರಿಗೆ ಪ್ರಮುಖ ಸವಾಲಾಗಿರುವ ಅಡಿಕೆ ಸಿಪ್ಪೆಯಿಂದ ಗುಣಮಟ್ಟದ ಕಾಂಪೋಸ್ಟ್ ತಯಾರಿಸುವ ಪ್ರಾಯೋಗಿಕ ವಿಧಾನವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು.

ಮೂರನೇ ದಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಕೀಟಶಾಸ್ತ್ರ ತಜ್ಞ ಡಾ. ರುದ್ರಮುನಿ ಅವರು ಇಂದೋರ್, ಬೆಂಗಳೂರು, ಜಪಾನ್ ಹಾಗೂ ನಾಡೆಪ್ ವಿಧಾನಗಳಲ್ಲಿ ಕಾಂಪೋಸ್ಟ್ ತಯಾರಿಸುವ ತಂತ್ರಜ್ಞಾನವನ್ನು ವಿವರಿಸಿದರು. ನಾಡೆಪ್ ವಿಧಾನದಲ್ಲಿ ಇಟ್ಟಿಗೆಯಿಂದ ನಿರ್ಮಿಸಿದ ತೊಟ್ಟಿಯಲ್ಲಿ ಕೃಷಿ ತ್ಯಾಜ್ಯ ಬಳಸಿ 45 ತಿಂಗಳಲ್ಲಿ ಅತ್ಯುತ್ತಮ ಕಾಂಪೋಸ್ಟ್ ಪಡೆಯಬಹುದು ಹಾಗೂ ಎರೆಹುಳು ಗೊಬ್ಬರವು ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಗಳನ್ನು ಸುಧಾರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು. ಇದೇ ವೇಳೆ ಹನುಮಂತನಾಯ್ಕ ಅವರು ಕೃಷಿಯಲ್ಲಿ ಜೇನು ಸಾಕಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ತರಬೇತಿಯ ಕೊನೆಯಲ್ಲಿ ಭಾಗವಹಿಸಿದ್ದ ರೈತರೆಲ್ಲರೂ ಬಬ್ಬೂರು ಫಾರಂನಲ್ಲಿರುವ ಎರೆಹುಳು ಗೊಬ್ಬರ ಉತ್ಪಾದನಾ ಘಟಕ, ಜೇನು ಕೃಷಿ ಘಟಕ ಹಾಗೂ ಕಾಂಪೋಸ್ಟ್ ಉತ್ಪಾದನಾ ಘಟಕಗಳಿಗೆ ಖುದ್ದಾಗಿ ಭೇಟಿ ನೀಡಿ, ತಜ್ಞರಿಂದ ಪ್ರಾಯೋಗಿಕ ಮಾಹಿತಿ ಪಡೆದುಕೊಂಡರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.