ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬೆಳವಂಗಲ ಹೋಬಳಿಯ ಸೊಣೇನಹಳ್ಳಿ, ರಾಂಪುರ, ಅಕ್ಕತಮ್ಮನಹಳ್ಳಿ ನಾರನಹಳ್ಳಿ, ದೊಡ್ಡ ಬೆಳವಂಗಲ,ಚಿಕ್ಕ ಬೆಳವಂಗಲ, ಸೇರಿದಂತೆ ಹಲವು ಗ್ರಾಮಗಳ ಸುಮಾರು 2100 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೆ ಐ ಎ ಡಿ ಬಿ ವತಿಯಿಂದ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ಕ್ರಮವನ್ನು ನಮ್ಮ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭಾರತ ಭ್ರಷ್ಟಾಚಾರದ ಮಂಡಳಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭಾರತ ಭ್ರಷ್ಟಾಚಾರದ ಮಂಡಳಿ ರಾಷ್ಟ್ರೀಯ ಅಧ್ಯಕ್ಷ ರಾಜ ಗೋಪಾಲ್ ಮಾತನಾಡಿ ಈ ಭಾಗದ ರೈತಾಪಿ ವರ್ಗದವರು ಸುಮಾರು ವರ್ಷಗಳಿಂದ ಕೃಷಿಯನ್ನೆ ಅವಲಂಭಿಸಿ ಸ್ವಾವಲಂಭಿಗಳಾಗಿ ಜೀವನ ನಡೆಸುತ್ತಿದ್ದಾರೆ.
ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನು ಅತ್ಯಂತ ಫಲವತ್ತಾದ, ಮೂರು ಬೆಳೆ ತೆಗೆಯುವ ಕೃಷಿ ಭೂಮಿಯಾಗಿದೆ. ಇದರಿಂದ ನೂರಾರು ರೈತ ಕುಟುಂಬಗಳು ಬೀದಿಗೆ ಬೀಳಲಿದ್ದು, ಆಹಾರ ಭದ್ರತೆಗೆ ಧಕ್ಕೆಯಾಗಲಿದೆ. "ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ಸ್ಥಾಪನೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆ, 2013" ರ ಪ್ರಕಾರ ಬಹುಬೆಳೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.
ತಪ್ಪು ಮಾಹಿತಿ ನೀಡಿ ವಂಚನೆ: ಎನ್ ಹೆಚ್ ಎ ಐ ರಸ್ತೆಗಾಗಿ ಎಲ್ಲಾ ಜಮೀನು ಹೋಗುತ್ತದೆ ಎಂದು ಅಧಿಕಾರಿಗಳು ರೈತರಿಗೆ ತಪ್ಪು ಮಾಹಿತಿ ನೀಡಿ, ಭಯ ಹುಟ್ಟಿಸಿ ಭೂಮಿ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಇದು ಖಂಡನೀಯ. ರೈತ ಜೀವನೋಪಾಯಕ್ಕೆ ಕೊಡಲಿ, ಕೃಷಿಯನ್ನೇ ನಂಬಿ ಬದುಕುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರು, ಕೃಷಿ ಕೂಲಿಕಾರರರು ತಮ್ಮ ಜೀವನೋಪಾಯ ಕಳೆದುಕೊಳ್ಳುವುದರ ಜೊತೆಗೆ ಸಂಪದ್ಬರಿತ ಕೃಷಿ ಹಾಗೂ ಅತಿ ಮುಖ್ಯವಾಗಿ ಜಾನುವಾರುಗಳ ಮೇವಿನ ಭೂಮಿ ನಾಶವಾಗಲಿದೆ.
ಒಂದು ವೇಳೆ ಸರ್ಕಾರ ರೈತರ ವಿರೋಧದ ನಡುವೆಯೂ ಬಲವಂತದ ಭೂಸ್ವಾಧೀನ ಮುಂದುವರಿಸಿದರೆ, ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭಾರತ ಭ್ರಷ್ಟಾಚಾರದ ವಿರೋಧ ಮಂಡಳಿ, ಭೂ ಸ್ವಾದೀನ ವಿರೋಧಿ ಸಮಿತಿ ಅಧ್ಯಕ್ಷರು ಮತ್ತು ಕರ್ನಾಟಕ ಕರ್ನಾಟಕ ಪ್ರಾಂತ್ಯ ರೈತ ಸಂಘ ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ದೊಡ್ಡ ಬೆಳವಂಗಲ ಹೋಬಳಿ ಮತ್ತು ನಮ್ಮ ಸಂಸ್ಥೆಯು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಇದರಿಂದ ಉಂಟಾಗುವ ಎಲ್ಲಾ ಪರಿಣಾಮಗಳಿಗೆ ಸರ್ಕಾರವೇ ನೇರ ಹೊಣೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಭಾರತದ ಭ್ರಷ್ಟಾಚಾರ ವಿರೋಧಿ ಮಂಡಳಿಯ ಬೆಂಗಳೂರು ಪೂರ್ವ ತಾಲೂಕು ಅಧ್ಯಕ್ಷರು ಎನ್. ಡಿ. ವಿಠ್ಠಲ, ಉಪಾಧ್ಯಕ್ಷ ಬಿ. ಬಸವರಾಜ,ಕಾರ್ಮಿಕ ಘಟಕದ ಅದ್ಯಕ್ಷ ಎಂ ವೆಂಕಟರಮಣ, ಉಪಾಧ್ಯಕ್ಷ ವೆಂಕಟರಾಮಪ್ಪ, ಯುವ ಮೋರ್ಚಾ ಅಧ್ಯಕ್ಷ ಮೋಹನ್ ಕುಮಾರ್, ಕೋಲಾರ ಜಿಲ್ಲೆಯ ಅಧ್ಯಕ್ಷ ಮುನ್ನರಾಜ, ಸಂಘಟನಾ ಕಾರ್ಯದರ್ಶಿ ಕೆ. ನಾರಾಯಣಸ್ವಾಮಿ, ಸೇರಿದಂತೆ ರೈತಪರ, ಕನ್ನಡ ಪರ,ದಲಿತಪರ ಸಂಘಟನೆಗಳ ಮುಖಂಡರು ಹಾಜರಿದ್ದರು.



