ಚಂದ್ರವಳ್ಳಿ ನ್ಯೂಸ್ ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಎದುರಾಗುವ ಬೆಳೆ ನಷ್ಟದಿಂದ ರಕ್ಷಣೆ ಪಡೆಯಲು ತೋಟಗಾರಿಕೆ ಇಲಾಖೆಯ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ (RWBCIS) ಯೋಜನೆಗೆ ಪ್ರಸ್ತುತ 2026-27ನೇ ಸಾಲಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ರೈತರು ನೋಂದಾಯಿಸಿಕೊಂಡಿದ್ದಾರೆ.
ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ, ಕರಿಮೆಣಸು, ಹಸಿರು ಮೆಣಸಿನಕಾಯಿ, ದಾಳಿಂಬೆ ಮತ್ತು ಮಾವು ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
2016-17ನೇ ಸಾಲಿನಿಂದ ಜಾರಿಯಲ್ಲಿರುವ ಈ ಯೋಜನೆಗೆ ಪ್ರಸ್ತುತ ವರ್ಷದಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 65,608 ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.
ವರ್ಷವಾರು ರೈತರ ನೋಂದಣಿ ವಿವರ:
2016-17: 22,358 ರೈತರು
2017-18: 11,293 ರೈತರು
2018-19: 8,926 ರೈತರು
2019-20: 10,852 ರೈತರು
2020-21: 18,584 ರೈತರು
2021-22: 31,616 ರೈತರು
2022-23: 26,186 ರೈತರು
2023-24: 22,171 ರೈತರು
2024-25: 39,509 ರೈತರು
2025-26: 44,905 ರೈತರು
2026-27: 65,608 ರೈತರು
2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆವಾರು ನೋಂದಣಿ ಮಾಡಿಸಿದ್ದಾರೆ
ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಡಿಕೆ ಬೆಳೆಗೆ ಅತಿ ಹೆಚ್ಚು ಅಂದರೆ 48,325 ರೈತರು ನೋಂದಾಯಿಸಿಕೊಂಡಿದ್ದಾರೆ. ಉಳಿದಂತೆ ಕರಿಮೆಣಸು ಬೆಳೆಗೆ 17,148 ರೈತರು, ದಾಳಿಂಬೆಗೆ 67, ಮಾವು ಬೆಳೆಗೆ 39 ಹಾಗೂ
ಹಸಿರು ಮೆಣಸಿನಕಾಯಿ ಬೆಳೆಗೆ 29 ರೈತರು ವಿಮಾ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.



