ಚಂದ್ರವಳ್ಳಿ ನ್ಯೂಸ್ ಬೆಂಗಳೂರು: ಭಾರತದ ಅತ್ಯಂತ ಪ್ರಾಚೀನ ಹಾಗೂ ಜ್ಞಾನ ಪರಂಪರೆಯ ಪ್ರತಿನಿಧಿಯಾದ ಅವಧಾನ ಕಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕನ್ನಡಿಗ, ಶ್ರೀ ಶತಾವಧಾನಿ ಆರ್. ಗಣೇಶ್ ಅವರು ಮಾನ್ಯ ರಾಷ್ಟ್ರಪತಿಗಳಿಂದ ‘ಪದ್ಮಭೂಷಣ’ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ ಅವರು ಶತಾವಧಾನಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಿ.ಟಿ. ರವಿ ಅವರು, ಶತಾವಧಾನಿ ಆರ್. ಗಣೇಶ್ ಅವರನ್ನು "ಪುರುಷ ಸರಸ್ವತಿ" ಎಂದು ಬಣ್ಣಿಸಿದ್ದಾರೆ.
"ಭಾರತದ ಅತ್ಯಂತ ಪ್ರಾಚೀನ ಕಲೆಯಾದ, ಜ್ಞಾನ ಪರಂಪರೆಯ ಪ್ರತಿನಿಧಿಯಾದ ಅವಧಾನ ಕಲೆಗೆ ಅಷ್ಟಾವಧಾನ, ಶತಾವಧಾನಗಳ ಮೂಲಕ ಮೆರುಗು ನೀಡಿದವರು ಶ್ರೀ ಶತಾವಧಾನಿ ಆರ್. ಗಣೇಶ್. ಇಂದು ಮಾನ್ಯ ರಾಷ್ಟ್ರಪತಿಗಳಿಂದ ಗಣೇಶರು ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿರುವುದು ಭಾರತೀಯ ಸಂಸ್ಕೃತಿಗೆ ಹಾಗೂ ಸಮಸ್ತ ಕನ್ನಡಿಗರಿಗೆ ಅಪಾರ ಹೆಮ್ಮೆ ತಂದಿದೆ," ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತದ ಸಾಹಿತ್ಯ, ಸಂಸ್ಕೃತಿ ಮತ್ತು ಅನನ್ಯ ಪರಂಪರೆಗೆ ಅಸಾಧಾರಣ ಸೇವೆ ಸಲ್ಲಿಸಿರುವ ಶತಾವಧಾನಿ ಗಣೇಶ್ ಅವರಿಗೆ ಸಿ.ಟಿ. ರವಿ ಅವರು ತಮ್ಮ ಪ್ರೀತಿಪೂರ್ವಕ ಅಭಿನಂದನೆಗಳು ಮತ್ತು ಅಭಿವಂದನೆಗಳನ್ನು ಸಮರ್ಪಿಸಿದ್ದಾರೆ. ಶತಾವಧಾನಿಗಳ ಈ ಸಾಧನೆ ಕರಾವಳಿ ಹಾಗೂ ಇಡೀ ಕರ್ನಾಟಕದ ಸಾಂಸ್ಕೃತಿಕ ಹಿರಿಮೆಯನ್ನು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಎತ್ತಿಹಿಡಿದಂತಾಗಿದೆ ಎಂದು ಅವರು ಹೇಳಿದ್ದಾರೆ.



