ಚಂದ್ರವಳ್ಳಿ ನ್ಯೂಸ್ ಗುಂಡ್ಲುಪೇಟೆ: "ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಕೇವಲ ಒಂದು ಮೌಢ್ಯ. ಇಂತಹ ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆಯಿಲ್ಲ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಗೆ ಭೇಟಿ ನೀಡುವ ಕುರಿತಾದ ರಾಜಕೀಯ ಮಿಥ್ಯೆಗಳನ್ನು ತಳ್ಳಿಹಾಕಿದರು. "ನಾನು ಈಗಾಗಲೇ ಸಾಕಷ್ಟು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದೇನೆ. ಇಲ್ಲಿಗೆ ಬಂದರೆ ಕುರ್ಚಿ ಹೋಗುವುದಿರಲಿ, ಬದಲಾಗಿ ಅಧಿಕಾರ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಪ್ರಾಸಂಗಿಕವಾಗಿ ಹೇಳಿದ್ದೇನೆ ಅಷ್ಟೆ," ಎಂದು ಮಾರ್ಮಿಕವಾಗಿ ನುಡಿದರು.
ಆಕಸ್ಮಿಕ ಸಾವುಗಳಿಗೆ ಪರಿಹಾರ: ಶಾಸಕರಿಗೆ ಸ್ಪಷ್ಟನೆ
ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಸರ್ಕಾರ ನೀಡುವ ಪರಿಹಾರದ ಬಗ್ಗೆ ಬರೆದಿರುವ ಪತ್ರದ ಕುರಿತು ಪ್ರತಿಕ್ರಿಯಿಸಿದ ಸಿಎಂ, "ಶಾಸಕರು ತಪ್ಪು ಕಲ್ಪನೆಯಿಂದ ಪತ್ರ ಬರೆದಿದ್ದಾರೆ. ಆಕಸ್ಮಿಕ ಸಾವು ಸಂಭವಿಸಿದ ಎಲ್ಲರಿಗೂ ಸರ್ಕಾರ ಪರಿಹಾರ ನೀಡುತ್ತಿದೆ. ಯಾವುದೇ ಪ್ರಕರಣ ನಮ್ಮ ಗಮನಕ್ಕೆ ಬಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಶಾಸಕರು ಮನವಿ ಮಾಡಿದರೂ ಖಂಡಿತವಾಗಿ ಪರಿಹಾರ ನೀಡಲಾಗುವುದು," ಎಂದು ಭರವಸೆ ನೀಡಿದರು.
ಉಚ್ಚ ನ್ಯಾಯಾಲಯದ ನಿರ್ದೇಶನ ಪಾಲನೆ
ತೃತೀಯ ಭಾಷೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆಯೂ ಮುಖ್ಯಮಂತ್ರಿಗಳು ಮಾತನಾಡಿದರು.
"ಹಿಂದಿನ ವರ್ಷಗಳಂತೆಯೇ ತೃತೀಯ ಭಾಷೆಯ ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡಬೇಕೆಂದು ಉಚ್ಚ ನ್ಯಾಯಾಲಯ ತಿಳಿಸಿದೆ. ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನ್ಯಾಯಾಲಯದ ಪ್ರತಿಯೊಂದು ನಿರ್ದೇಶನವನ್ನು ಸರ್ಕಾರ ಪಾಲಿಸಲಿದೆ," ಎಂದು ತಿಳಿಸಿದರು.


