ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಹೊಸ್ತಿಲಿನಲ್ಲಿರುವ ಸಿದ್ದರಾಮಯ್ಯ ಅವರು ತರಾತುರಿಯಲ್ಲಿ "ಜಾತಿ ಜನಗಣತಿ ವರದಿ" ಸ್ವೀಕರಿಸಿ, ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡುತ್ತಿರುವುದು ರಾಜಕೀಯ ಬೂಟಾಟಿಕೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌ಅಶೋಕ್ ತೀವ್ರವಾಗಿ ಆಕ್ಷೇಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, "ಸಂಕಟ ಬಂದಾಗ ವೆಂಕಟರಮಣ" ಎನ್ನುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಜಾತಿ ಜನಗಣತಿ ಎಂಬ ಮಂಕುಬೂದಿ ಎರಚಿ ಜನರ ಅನುಕಂಪ ಗಳಿಸಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
‘ರಾಜಕೀಯ ಬೂಟಾಟಿಕೆಯ ಪರಮಾವಧಿ’:
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿಲ್ಲ ಮತ್ತು ಸರ್ಕಾರದ ವಿರುದ್ಧ ಸ್ಪಷ್ಟ ಆಡಳಿತ ವಿರೋಧಿ ಅಲೆ ಇದೆ. ಹೈಕಮಾಂಡ್ ಬಳಿ ಛೀಮಾರಿ ಹಾಕಿಸಿಕೊಂಡು, ಒಲ್ಲದ ಮನಸ್ಸಿನಿಂದ ರಾಜೀನಾಮೆಯತ್ತ ಹೆಜ್ಜೆ ಇಡುತ್ತಿರುವ ಮುಖ್ಯಮಂತ್ರಿಗಳು, ಕೊನೆಯ ಕ್ಷಣದಲ್ಲೂ ತಮ್ಮ ತುಷ್ಟೀಕರಣ ಮತ್ತು ಡೋಂಗಿ ಸಮಾಜವಾದದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ. ಬದಲಿಗೆ ಭಂಡತನದಿಂದ ಓಲೈಕೆ ರಾಜಕಾರಣವನ್ನು ಮುಂದುವರಿಸಿದ್ದಾರೆ ಎಂದು ಆರ್‌ಅಶೋಕ್ ಕಿಡಿಕಾರಿದ್ದಾರೆ.
ಆರ್‌ಅಶೋಕ್ ಎತ್ತಿರುವ ಪ್ರಮುಖ ಪ್ರಶ್ನೆಗಳು:
24 ಗಂಟೆಗಳಲ್ಲಿ ವರದಿ ಸ್ವೀಕಾರ ಸಾಧ್ಯವೇ?: ಇಷ್ಟು ದೊಡ್ಡ ಪ್ರಮಾಣದ ದತ್ತಾಂಶವನ್ನು ಕೇವಲ ಕೆಲವೇ ಗಂಟೆಗಳಲ್ಲಿ ಸಂಸ್ಕರಿಸಿ ಅಂತಿಮ ವರದಿ ರೂಪಿಸಲು ಸಾಧ್ಯವೇ ಇಲ್ಲ. ದೆಹಲಿ ಭೇಟಿಯ ವೇಳೆ ಹೈಕಮಾಂಡ್ ಮುಂದೆ ಸ್ವತಃ ಮುಖ್ಯಮಂತ್ರಿಗಳೇ 15 ದಿನಗಳ ಕಾಲಾವಕಾಶ ಕೇಳಿದ್ದರು ಎಂಬ ಸುದ್ದಿಯಿತ್ತು. ಹಾಗಿದ್ದಾಗ ಕೇವಲ 24 ಗಂಟೆಗಳಲ್ಲಿ ವರದಿ ಸ್ವೀಕರಿಸಿದ್ದು ಹೇಗೆ?
ಕೇಂದ್ರದ ಜನಗಣತಿ ನಡುವೆ ರಾಜ್ಯದ ವರದಿ ಏಕೆ?: ಕೇಂದ್ರ ಸರ್ಕಾರ ಈಗಾಗಲೇ ದಶವಾರ್ಷಿಕ ಜನಗಣತಿಯಲ್ಲಿ ದೇಶವ್ಯಾಪಿ ಜಾತಿ ಜನಗಣತಿ ನಡೆಸುವುದಾಗಿ ಘೋಷಿಸಿದ್ದು, ಪ್ರಕ್ರಿಯೆಯೂ ಆರಂಭವಾಗಿದೆ. ಹೀಗಿದ್ದರೂ ತಮ್ಮ ಸ್ವಾರ್ಥಕ್ಕಾಗಿ ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡಿ, ಸಮಾಜದಲ್ಲಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಅಪಾಯಕಾರಿ ರಾಜಕಾರಣಕ್ಕೆ ಸಿಎಂ ಕೈಹಾಕಿದ್ದಾರೆ.
"ರಾಜೀನಾಮೆ ಕೊಡುವ ಹೊಸ್ತಿಲಲ್ಲೂ ತಮ್ಮ ಒಣ ಪ್ರತಿಷ್ಠೆ ಮತ್ತು ಸ್ವಹಿತಾಸಕ್ತಿ ಬಿಡದ ಸಿದ್ದರಾಮಯ್ಯನವರ ಸಣ್ಣತನ ಹಾಗೂ ಕೀಳು ಮಟ್ಟದ ರಾಜಕಾರಣ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ" ಎಂದು ಆರ್‌ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.



